ರೈತರೇ ಗಮನಿಸಿ: ಬೆಂಬಲ ಬೆಲೆ ಯೋಜನೆ, ಭತ್ತ ಖರೀದಿ ಪ್ರಕ್ರಿಯೆಗೆ ದಿನಾಂಕ ನಿಗದಿ
ಮಡಿಕೇರಿ, ನವೆಂಬರ್ 21: ಕೊಡಗು ಜಿಲ್ಲೆಯ ರೈತರಿಗೆ ಜಿಲ್ಲಾಡಳಿತ ಸಿಹಿಸುದ್ದಿಯನ್ನು ನೀಡಿದೆ. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆಯ ದಿನಾಂಕ ಘೋಷಣೆ ಮಾಡಲಾಗಿದೆ. ಭತ್ತ ಮತ್ತು ರಾಗಿ ಖರೀದಿ ಮಾಡಲಾಗುತ್ತದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ 2300 ರೂ. ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಲ್‌ಗೆ 4,290 ರೂ. ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಉತ್ಪನ್ನಗಳನ್ನು ಮಾರಾಟ ಮಾಡಬಹುದು.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಡೆದ ಟಾಸ್ಕ್ ಪ್ಕೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು.

"ಕೇಂದ್ರ ಸರ್ಕಾರದ ಆದೇಶದಂತೆ 2024-25ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲಾಗುತ್ತಿದ್ದು, ಡಿಸೆಂಬರ್ 1ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ. ಈ ಅವಕಾಶವನ್ನು ರೈತರು ಬಳಸಿಕೊಳ್ಳುವಂತೆ" ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಬೆಂಬಲ ಬೆಲೆ ಎಷ್ಟು?; ಕೊಡಗು ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆಯು ಇವರ ಮುಖಾಂತರ ನಡೆಯಲಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಡಿಸೆಂಬರ್ 1ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಭತ್ತ/ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ 2300 ರೂ. ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಲ್‌ಗೆ 4290 ರೂ. ದರ ನಿಗದಿಪಡಿಸಲಾಗಿದೆ.
ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 5 ಕಡೆಗಳಲ್ಲಿ ಮಡಿಕೇರಿ ಎಪಿಎಂಸಿ ಆವರಣ, ಕುಶಾಲನಗರ ಎಪಿಎಂಸಿ ಆವರಣ, ಗೋಣಿಕೊಪ್ಪ ಎಪಿಎಂಸಿ ಆವರಣ ಹಾಗೂ ಸೋಮವಾರಪೇಟೆ ಎಪಿಎಂಸಿ ಮಾರ್ಕೆಟ್ ಆವರಣದಲ್ಲಿ ಹಾಗೂ ವಿರಾಜಪೇಟೆ ಪಟ್ಟಣದಲ್ಲಿ ಖರೀದಿ ಮಾಡಲಾಗುತ್ತದೆ.
ರೈತರು ಸಂಬಂಧಪಟ್ಟ ನೋಂದಣಿ ಕೇಂದ್ರಗಳಲ್ಲಿಯೇ ತಮ್ಮ ಭತ್ತವನ್ನು ನೀಡಬಹುದಾಗಿದೆ. ಬೇಡಿಕೆ ಇದ್ದಲ್ಲಿ ಅಗ್ಯತ್ಯಕ್ಕೆ ತಕ್ಕಂತೆ ಹೆಚ್ಚಿನ ಕೇಂದ್ರ ತೆರೆಯಲು ಸಹ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ.
ರೈತರ ನೋಂದಣಿ ತಾಂತ್ರಿಕ ತೊಂದರೆಗಳು ಕಂಡು ಬಂದಲ್ಲಿ ಕೂಡಲೆ ಸರಿಪಡಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ಕೊಟ್ಟಿದ್ದಾರೆ. ಭತ್ತದ ಖರೀದಿ ನೋಂದಣಿ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ ಹಾಗೂ ರೈತ ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾಹಿತಿ ನೀಡುವಂತೆ ಹಾಗೂ ರೈತರ ನೋಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡುವಂತೆ ಖರೀದಿ ಏಜೆನ್ಸಿಯವರಿಗೆ ತಿಳಿಸಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಕುಮುದಾ ಶರತ್ ಮಾತನಾಡಿ, "ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ತಾವು ಬೆಳದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ" ಎಂದರು.
"ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಎನ್‍ಪಿಸಿಐ ಬ್ಯಾಂಕ್ ಖಾತೆಯ ವಿವರ ನೀಡಬೇಕಿದೆ. ಸರಕಾರವು ಪೌಷ್ಟಿಕಾಂಶವುಳ್ಳ ಸಾರವರ್ದಿತ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಅಕ್ಕಿ ಗಿರಣಿಗಳಲ್ಲಿ ಹಲ್ಲಿಂಗ್ ಮಾಡುವಾಗ ಸಾರವರ್ದಿತ ಅಕ್ಕಿಯನ್ನು ತಯಾರು ಮಾಡಲು ಕಡ್ಡಾಯವಾಗಿ ಅಕ್ಕಿ ಗಿರಣಿ ಮಾಲೀಕರುಗಳು ಬ್ಲೆಂಡಿಂಗ್ ಮಿಷನ್ ಅನ್ನು ಅಳವಡಿಸಲು ಹಾಗೂ ಅಳವಡಿಸದ ಅಕ್ಕಿಗಿರಣಿಗಳಿಗೆ ಸರಕಾರದ ಆದೇಶದಂತೆ ಹಲ್ಲಿಂಗ್‍ಗೆ ಭತ್ತವನ್ನು ನೀಡಲು ಸಾಧ್ಯವಿರುವುದಿಲ್ಲ" ಎಂದು ತಿಳಿಸಲಾಗಿದೆ.
ಭತ್ತದ ನೋಂದಣಿ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ನೇಮಕ, ಕಂಪ್ಯೂಟರ್, ಇಂಟರ್‌ನೆಟ್ ಸೌಲಭ್ಯ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಸಲಹೆ ಕೊಟ್ಟಿದ್ದಾರೆ.












Click it and Unblock the Notifications