ಒಣಗುತ್ತಿರುವ ಕೃಷಿ ಬೆಳೆಗಳು: ಮುಂಗಾರು ಮಳೆಯತ್ತ ದೃಷ್ಟಿ ನೆಟ್ಟ ಮಂಜಿನ ನಗರಿ ಜನತೆ
ಮೈಸೂರು, ಜೂನ್, 12: ಮುಂಗಾರು ಮಳೆ ಇಷ್ಟರಲ್ಲೇ ಕೊಡಗಿಗೆ ಪ್ರವೇಶ ನೀಡಿ, ಕೃಷಿಕರನ್ನು ಗದ್ದೆ ತೋಟದತ್ತ ಮುಖ ಮಾಡುವಂತೆ ಮಾಡಬೇಕಿತ್ತು. ಆದರೆ ಈಗ ಸರಿಯಾಗಿ ಮಳೆ ಬಾರದ ಕಾರಣ ಕೃಷಿಕರು ಆಕಾಶದತ್ತ ಮುಖ ಮಾಡುವಂತೆ ಮಾಡಿದೆ. ಮತ್ತೊಂದೆಡೆ ಜೀವನದಿ ಕಾವೇರಿಯೂ ಸೊರಗಿದ್ದು, ಪರಿಣಾಮ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಕೆಆರ್‌ಎಸ್ ಜಲಾಶಯ ದಿನದಿಂದ ದಿನಕ್ಕೆ ಬರಿದಾಗುತ್ತಿದೆ.
ಕಳೆದ ಐದಾರು ವರ್ಷಗಳಿಂದ ಮಳೆ ಉತ್ತಮವಾಗಿಯೇ ಸುರಿದಿತ್ತು. ಅದರಲ್ಲೂ ಮುಂಗಾರು ಪೂರ್ವ ಮಳೆ ಬೇಸಿಗೆಯಲ್ಲಿ ಆಗಾಗ್ಗೆ ಸುರಿಯುತ್ತಿದ್ದರಿಂದ ಕೆಆರ್‌ಸ್ ಜಲಾಶಯದಲ್ಲಿ ಅಷ್ಟೋಂದಾಗಿ ನೀರಿನ ಮಟ್ಟ ತಗ್ಗಿರಲಿಲ್ಲ. ಆದರೆ ಈ ವರ್ಷ ಬೇಸಿಗೆಯಲ್ಲಿ ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಮಳೆ ಸರಿಯಾಗಿ ಸುರಿಯಲಿಲ್ಲ. ಹೀಗಾಗಿ ಈ ಬಾರಿ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ ಅತ್ತ ಕೊಡಗಿನಲ್ಲಿಯೂ ನೀರಿಗೆ ಸಮಸ್ಯೆ ಉದ್ಭವಿಸಿದೆ.

ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್, ಮೇ ತಿಂಗಳಲ್ಲಿ ಮಳೆ ಬರುತ್ತಿತ್ತು. ಆದರೆ ಈ ಬಾರಿ ತಡವಾಗಿ ಮಳೆ ಬಂದ ಕಾರಣ ಕೊಡಗಿನಲ್ಲಿ ಕಾಫಿ ಫಸಲಿಗೆ ಹೊಡೆತ ಬಿದ್ದಿದೆ. ಹೂವು ಸರಿಯಾಗಿ ಅರಳದೆ ಮೊಗ್ಗಿನಲ್ಲಿಯೇ ಮುದುಡಿ ಹೋಗಿದೆ. ಬಹಳಷ್ಟು ಜನ ಕಾಫಿ ಬೆಳೆಗಾರರು ಮಳೆಯನ್ನೇ ನಂಬಿದ್ದಾರೆ. ಆದರೆ ಈ ವರ್ಷ ಸಕಾಲಕ್ಕೆ ಮತ್ತು ಸಮರ್ಪಕವಾಗಿ ಮಳೆ ಸುರಿಯಲೇ ಇಲ್ಲ. ಹೀಗಾಗಿ ನೀರಿಗೆ ಅನುಕೂಲವಿದ್ದವರು ಸ್ಪಿಂಕ್ಲರ್ ಮಾಡಿದರೆ, ಕೆಲವು ಬೆಳೆಗಾರರಿಗೆ ಇದು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂದಗತಿಯಲ್ಲಿ ಸಾಗುತ್ತಿರುವ ಕೃಷಿ ಚಟುವಟಿಕೆ
ಇದೀಗ ಜೂನ್ ತಿಂಗಳು ಬಂದರೂ ಕೂಡ ಮಳೆ ಬಾರದೆ ಇರುವುದು ಬೆಳೆಗಾರರನ್ನು ಕಂಗೆಡಿಸಿದೆ. ಸಾಮಾನ್ಯವಾಗಿ ಈ ವೇಳೆಗೆಲ್ಲ ಉತ್ತಮ ಮಳೆಯಾಗುತ್ತಿತ್ತು. ಇದರಿಂದಾಗಿ ಕಾಫಿ ತೋಟದಲ್ಲಿ ಗೊಬ್ಬರ ಹಾಕುವುದು, ಚಿಗುರು ತೆಗೆಯುವುದು, ಗದ್ದೆಯಲ್ಲಿ ಉಳುವೆ, ಸಸಿಮಡಿ ತಯಾರಿಕೆ, ನಾಟಿ, ಹೀಗೆ ಕೃಷಿ ಚಟುವಟಿಕೆಯಲ್ಲಿ ನಿರತರಾದ ದೃಶ್ಯ ಕಂಡುಬರುತ್ತಿದ್ದವು.
ಈ ಸಂದರ್ಭದಲ್ಲಿ ಇಡೀ ಕೊಡಗು ಜಿಲ್ಲೆಯ ಜನರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುತ್ತಿದ್ದರು. ಆದರೀಗ ಅದೆಲ್ಲವೂ ಮಂದಗತಿಯಲ್ಲಿ ಸಾಗುತ್ತಿರುವುದು ಬೇಸರ ತರಿಸಿದೆ. ಈ ನಡುವೆ ಮಳೆ ಬಾರದೆ ಇದ್ದರೆ ಕಾಫಿ ತೋಟಕ್ಕೆ ಗೊಬ್ಬರ ಹಾಕುವುದು ಕಷ್ಟವಾಗಲಿದೆ. ಹಾಗೆಂದು ಮಳೆಗಾಲ ಆರಂಭವಾಗಿ ಭಾರೀ ಮಳೆ ಸುರಿದರೆ ಗೊಬ್ಬರ ಹಾಕಿದರೂ ಪ್ರಯೋಜನ ಆಗುವುದಿಲ್ಲ.
ಬೇಸಿಗೆ ದಿನಗಳಲ್ಲಿಯೇ ಕಾಫಿ ತೋಟದ ಬಹುತೇಕ ಕೆಲಸಗಳು ಅಂದರೆ ತೋಟದ ನಡುವಿನ ಮರಗಳ ನೆರಳು ತೆಗೆಯುವ ಮರ ಕಪಾತ್, ಕಾಫಿ ಗಿಡಗಳ ಕಪಾತ್, ಚಿಗುರು ಹೀಗೆ ಹಲವು ಕೆಲಸಗಳನ್ನು ಮಾಡಬೇಕಿತ್ತು. ಆದರೆ ಮಳೆ ಇಲ್ಲದ ಕಾರಣ ಹಾಗೂ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಯಾವುದೇ ಕೆಲಸಗಳನ್ನು ಮಾಡಲು ಬೆಳೆಗಾರರು ಹಿಂಜರಿದಿದ್ದರು.
ಆದರಲ್ಲೂ ಈ ಬಾರಿ ಬೇಸಿಗೆಯ ತಾಪ ಹೇಗಿತ್ತೆಂದರೆ ಹಲವು ಕಡೆಗಳಲ್ಲಿ ಕಾಫಿ ಗಿಡಗಳು ಒಣಗಿ ಸಾವನ್ನಪ್ಪಿದ್ದವು. ಇಂತಹ ಪರಿಸ್ಥಿತಿ ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿರಲಿಲ್ಲ. ಆದರೆ ಅಂತಹದೊಂದು ಸನ್ನಿವೇಶಕ್ಕೆ ಈ ಬಾರಿ ಕೊಡಗು ಸಾಕ್ಷಿ ಆಗಿದೆ.
ರೈತರು ಭತ್ತದ ಕೃಷಿ ಮಾಡಲು ನಿರಾಸಕ್ತಿ ತೋರಿದ್ದೇಕೆ?
ಈಗಲೂ ಮುಂಗಾರು ಆರಂಭವಾಗದೆ ಹೋದರೆ ಕೊಡಗಿನಲ್ಲಿ ಕೃಷಿ ಚಟುವಟಿಕೆಗೆ, ಅದರಲ್ಲೂ ಭತ್ತದ ಕೃಷಿಗೆ ಸಾಕಷ್ಟು ತೊಂದರೆಯಾಗಲಿದೆ. ಈಗಾಗಲೇ ಮುಂಗಾರು ಮಳೆಯ ಏರು ಪೇರು, ಪ್ರವಾಹ, ಪ್ರಕೃತಿ ವಿಕೋಪ, ಕಾರ್ಮಿಕರ ಕೊರತೆ ಹೀಗೆ ಹತ್ತಾರು ಕಾರಣಗಳಿಂದಾಗಿ ಸಾಕಷ್ಟು ಪ್ರಮಾಣದಲ್ಲಿದ್ದ ಭತ್ತದ ಗದ್ದೆಗಳು ತೋಟಗಳಾಗಿ ಮಾರ್ಪಾಡು ಹೊಂದಿವೆ.
ಇನ್ನು ಅಳಿದುಳಿದ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುವುದು ಕೂಡ ಬೆಳೆಗಾರರಿಗೆ ಸವಾಲಾಗಿ ಪರಿಣಮಿಸಿದೆ. ವಾತಾವರಣದ ಏರುಪೇರಿನಿಂದಾಗಿ ಭತ್ತದ ಕೃಷಿ ಮಾಡಿದರೂ ಇಳುವರಿ ಬರುತ್ತಿಲ್ಲ. ಇದರಿಂದ ಭತ್ತದ ಕೃಷಿಕರಿಗೆ ನಷ್ಟಕ್ಕೆ ದಾರಿ ಆಗುತ್ತಿರುವುದರಿಂದ ಕೆಲವೆಡೆ ಗದ್ದೆಗಳು ಪಾಳು ಬೀಳುವಂತಾಗಿದೆ.
ಮೊದಲೆಲ್ಲ ಕೊಡಗಿನಲ್ಲಿ ಭತ್ತ, ಕಾಫಿ, ಏಲಕ್ಕಿ, ಕರಿಮೆಣಸು ಕೃಷಿಯನ್ನೇ ನಂಬಿ ಬದುಕಬೇಕಾಗಿತ್ತು. ಆದುದರಿಂದ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ ಬದಲಾದ ಕಾಲದಲ್ಲಿ ಪರ್ಯಾಯ ಉದ್ಯೋಗಗಳು ಹೆಚ್ಚಾಗುತ್ತಿವೆ. ಪ್ರವಾಸೋದ್ಯಮ ಚೇತರಿಸಿದ್ದರಿಂದ ಕೃಷಿಕರು ಹೋಂಸ್ಟೇ, ವ್ಯಾಪಾರ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಭತ್ತದ ಕೃಷಿಯತ್ತ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.
ಮಳೆಗಾಗಿ ಪ್ರಾರ್ಥಿಸುವುದು ಅನಿವಾರ್ಯ
ಅದು ಏನೇ ಇರಲಿ ಮಳೆ ಬಾರದೆ ಹೋದರೆ ಕೊಡಗಿನಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಲಿದೆ. ಜೊತೆಗೆ ಕಾವೇರಿ ನದಿ ತುಂಬಿ ಹರಿಯದೆ ಹೋದರೆ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇನ್ನಷ್ಟು ಕಡಿಮೆಯಾಗಲಿದೆ. ನಂತರ ನೀರಿಗೆ ಹಾಹಾಕಾರ ಶುರುವಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಆದಷ್ಟು ಬೇಗ ಮುಂಗಾರು ಮಳೆ ಆರಂಭವಾಗಿ ಸಂಕಷ್ಟ ದೂರವಾಗಲಿ ಎಂದು ಜಿಲ್ಲೆಯ ಹಲವೆಡೆ ಈಗಾಗಲೇ ವಿಶೇಷ ಪೂಜೆಗಳನ್ನು ಆರಂಭ ಮಾಡಿದ್ದಾರೆ.











Click it and Unblock the Notifications