ಮಣ್ಣಿನ ಮಗನಾಗಿ ದುಡಿಯುತ್ತಿರುವ ನಿವೃತ್ತ ಅಧಿಕಾರಿ ಗೋವಿಂದಪ್ಪ ಭಜಂತ್ರಿ
ಬಾಗಲಕೋಟೆ, ಜೂ17: ಯಾವುದೇ ಒಬ್ಬ ಸರಕಾರಿ ಅಥವಾ ಖಾಸಗಿ ನೌಕರರಾಗಲಿ ನಿವೃತ್ತರಾದ ಮೇಲೆ ಹಾಯಾಗಿ ಕಾಲ ಕಳೆಯಬೇಕು ಅಂತಾರೆ. ಕೈಯಲ್ಲಿ ಪೆನ್ಶನ್ ಕಾಸು ಮಕ್ಕಳು ಮೊಮ್ಮಕ್ಕಳ ನೋಡಿಕೊಂಡು ನೆಮ್ಮದಿಯ ಜೀವನ. ತಮ್ಮ ವಯೋಮಾನದ ಸ್ನೇಹಿತರ ಜೊತೆ ಮುಂಜಾನೆ ಮುಸ್ಸಂಜೆ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಾರೆ. ಆದರೆ ಅದೊಬ್ಬರ ನಿವೃತ್ತ ನೌಕರ ನಿವೃತ್ತ ಜೀವನದಲ್ಲಿ ಮಣ್ಣಿನ ಮಗನಾಗಿ ದುಡಿಯುತ್ತಿದ್ದಾರೆ. ತಮ್ಮ ನಾಲ್ಕು ಎಕರೆ ಹೊಲದಲ್ಲಿ ಹಸಿರು ಹೊದಿಕೆ ಹೊದಿಸಿದ್ದಾರೆ.
ಹೊಲದಲ್ಲಿ ಹಚ್ಚ ಹಸಿರಾದ ಬೆಳೆಗಳು ಬಾಳೆ, ಪೇರು, ತೆಂಗು, ಡ್ರ್ಯಾಗನ್ ಬೆಳೆ, ಹೊಲದಲ್ಲಿ ಮೇಕೆ, ಕೋಳಿ ಸಾಕಾಣಿಕೆ ಎಂಬ ಉಪಕಸುಬು. ಹೊಲದಲ್ಲಿ ಕೆಲಸ ಮಾಡುತ್ತಿರುವ ನಿವೃತ್ತ ನೌಕರ ಸದ್ಯಕ್ಕೆ ಮಣ್ಣಿನ ಮಗ ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ತಾಲ್ಲೂಕಿನ ಮುರನಾಳ ಪುನರ್ವಸತಿ ಕೇಂದ್ರದ ಬಳಿಯ ಹೊಲವೊಂದರಲ್ಲಿ. ಹೌದು ಇಲ್ಲಿ ಹೊಲದಲ್ಲಿ ತಮ್ಮ ಇಳಿವಯಸ್ಸಲ್ಲೂ ಕೆಲಸ ಮಾಡುತ್ತಿರುವ ಇವರ ಹೆಸರು ಗೋವಿಂದಪ್ಪ ಭಜಂತ್ರಿ,ಇವರು ಒಬ್ಬರ ನಿವೃತ್ತ ನೌಕರ ಆದರೆ ಈಗ ಪಕ್ಕಾ ರೈತರಾಗಿ ಬದಲಾಗಿದ್ದಾರೆ.

ರೈತರ ಕೃಷಿ ಸಾಧನೆ ಕಂಡು ಪ್ರಭಾವಿತರಾದ ಭಜಂತ್ರಿ
ಸರ್ವೆ ಇಲಾಖೆಯಲ್ಲಿ ಸೂಪರ್‌ವೈಸರ್ ಆಗಿದ್ದ ಗೋವಿಂದಪ್ಪ ಅವರು ತಮ್ಮ ನಾಲ್ಕು ಎಕರೆ ಹೊಲದಲ್ಲಿ ಹಸಿರು ತೋಟವನ್ನೇ ಮಾಡಿದ್ದಾರೆ. ಇವರು ನಿವೃತ್ತರಾದ ಮೇಲೆ ಹಾಯಾಗಿ ಕಾಲ ಕಳೆಯಬಹುದಿತ್ತು. ಆದರೆ ಇವರು ಮೊದಲಿನಿಂದಲೂ ಕೃಷಿ ಕಡೆ ಹೆಚ್ಚು ಆಸಕ್ತಿ ಹೊಂದಿದವರು. ಇನ್ನು ಇವರ ಸರಕಾರಿ ಕೆಲಸವೇ ಭೂಮಾಪನ ಮಾಡೋದು, ಭೂಮಿ ಸರ್ವೆ ಮಾಡೋದು ಆಗಿದ್ದರಿಂದ ವಿವಿಧ ರೈತರ ಹೊಲಗಳಿಗೆ ಭೇಟಿ ಮಾಡೋದು ಅಲ್ಲಿನ ರೈತರ ಜೊತೆ ಒಡನಾಟ ಹೆಚ್ಚಾಗಿತ್ತು. ತಾವು ಕಂಡ ರೈತರ ಕೃಷಿ ಸಾಧನೆ ಕಂಡು ಇವರು ಪ್ರಭಾವಿತರಾದೋರು. ನಾನ್ಯಾಕೆ ಈ ರೀತಿ ಕೃಷಿ ಕಾರ್ಯ ಮಾಡಬಹುದು ಅಂತ ನಿರ್ಧರಿಸಿ ನಿವೃತ್ತರಾದ ಮೇಲೆ ಈಗ ಮಣ್ಣಿನ ಮಗನಾಗಿ ಕೃಷಿ ಕಾರ್ಯ ಮುಂದುವರೆಸಿದ್ದಾರೆ. ಅಲ್ಲದೇ ಕಲ್ಲಿನ ಗುಡ್ಡವನ್ನು ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ.

ರೈತರಿಗೆ ಮಾದರಿಯಾದ ನಿವೃತ್ತ ಸರ್ಕಾರಿ ನೌಕರ
ರೈತರು ಬೇಸಾಯ ಬಿಟ್ಟು ಕೆಲಸ ಹುಡುಕಿಕೊಂಡು ನಗರಗಳತ್ತ ಹೊರಟಿರುವ ಈ ಹೊತ್ತಿನಲ್ಲಿ ಬಾಗಲಕೋಟೆಯ ಸರ್ವೆ ಇಲಾಖೆಯಲ್ಲಿ ಸುಫರ್ ವೈಸರ್ ಆಗಿದ್ದ ಗೋವಿಂದಪ್ಪ ನೌಕರರೊಬ್ಬರು ನಿವೃತ್ತ ನಂತರ ಬೇಸಾಯ ಮಾಡುವ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಗೋವಿಂದಪ್ಪ ಅವರ ಕುಟುಂಬಸ್ಥರಿಗೆ ಈ ಭೂಮಿ ಟೆನೆನ್ಸಿ ಕಾಯ್ದೆ(ಭೂನ್ಯಾಯಮಂಡಳಿ)ಮೂಲಕ ಸಿಕ್ಕಿರೋದು.ಆದರೆ ಈ ನಾಲ್ಕು ಎಕರೆ ಭೂಮಿ ಗುಡ್ಡ ಕಲ್ಲಿನಿಂದ ಕೂಡಿತ್ತು. ತಂದೆಯವರು ಬಂದಷ್ಟು ಬೆಳೆ ಬರಲಿ ಅಂತ ಕಲ್ಲಿನ ಭೂಮಿಯಲ್ಲೇ ಕೃಷಿ ಮಾಡಿಕೊಂಡಿದ್ದರು.
ತಮ್ಮಂತೆ ತಮ್ಮ ಊರಿನ ಇತರ ರೈತರೂ ಸಾವಯವ ಬೇಸಾಯ ಪದ್ಧತಿ ಅನುಸರಿಸಿ ವಿಷಮುಕ್ತ ಆಹಾರ ಧಾನ್ಯ, ಹಣ್ಣು, ತರಕಾರಿಗಳನ್ನು ಬೆಳೆಯಬೇಕು ಎಂಬುದು ಗೋವಿಂದಪ್ಪ ಅವರ ಆಸೆ. ಅದಕ್ಕಾಗಿ ಗ್ರಾಮಮಟ್ಟದಲ್ಲಿ ತಿಳುವಳಿಕೆ, ಜಾಗೃತಿ ಸಭೆಗಳನ್ನು ಸಂಘಟಿಸುತ್ತಾರೆ.

ಕಲ್ಲು ಗುಡ್ಡದಂತಿದ್ದ ಭೂಮಿ ಈಗ ಫಲವತ್ತಾದ ಭೂಮಿ
ಯಾವಾಗ ಗೋವಿಂದಪ್ಪ ಅವರು 2015ರಲ್ಲಿ ನೌಕರಿಯಿಂದ ನಿವೃತ್ತರಾದರೋ ಕೃಷಿಯಲ್ಲಿ ತೊಡಗಿಕೊಂಡು ಕಲ್ಲು ಗುಡ್ಡದಂತಿದ್ದ ಭೂಮಿಯನ್ನು ಜೆಸಿಬಿ ಯಿಂದ ಅಗೆದು ಸಮತಟ್ಟು ಮಾಡಿ ಫಲವತ್ತಾದ ಭೂಮಿಯನ್ನಾಗಿ ಮಾಡಿದ್ದಾರೆ. ನಾಲ್ಕು ಎಕರೆಯಲ್ಲಿ ಒಂದು ಎಕರೆ ಬಾಳೆ, ಅರ್ಧ ಎಕರೆ ಡ್ರ್ಯಾಗನ್,ಅರ್ಧ ಎಕರೆ ಪೇರಲ,ಜಂಬು ನೇರಳೆ ಸೇರಿದಂತೆ ನಾಲ್ಕು ಎಕರೆಯಲ್ಲಿ ಹಚ್ಚ ಹಸಿರು ಬೆಳೆ ಬೆಳೆದಿದ್ದಾರೆ.ಇನ್ನು ಹೊಲದ ಬದುವಿನಲ್ಲಿ ತೆಂಗಿನ ಮರಗಳನ್ನು ಬೆಳೆದಿದ್ದಾರೆ.ಇನ್ನು ಹೊಲದಲ್ಲಿ 50ಕ್ಕೂ ಹೆಚ್ಚು ಮೇಕೆ ಸಾಕಿದ್ದಾರೆ.ಎರಡು ನೂರಕ್ಕೂ ಅಧಿಕ ಜವಾರಿ ಕೋಳಿಗಳನ್ನು ಸಾಕಿದ್ದು.ಸಮಗ್ರ ಕೃಷಿ ಉಪಕಸುಬು ಎಲ್ಲರದಲ್ಲೂ ಯಶಸ್ಸು ಕಂಡಿದ್ದು ನಿವೃತ್ತಿ ಜೀವನದಲ್ಲೂ ಕೃಷಿ ,ಉಪಕಸುಬುಗಳ ಮೂಲಕ ಉತ್ತಮ ಆದಾಯ ಪಡೆದು ಎಲ್ಲರಿಗೂ ಮಾದರಿಯಾಗಿದ್ಧಾರೆ.

ಭೂತಾಯಿ ಸೇವೆ ಮಾಡುವ ಹಂಬಲ
ಹೊಲದಲ್ಲಿ ಕೆಲಸ ಮಾಡುತ್ತಿರುವ ನಿವೃತ್ತ ನೌಕರ ಸದ್ಯಕ್ಕೆ ಮಣ್ಣಿನ ಮಗ ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ತಾಲ್ಲೂಕಿನ ಮುರನಾಳ ಪುನರ್ವಸತಿ ಕೇಂದ್ರದ ಬಳಿಯ ಹೊಲವೊಂದರಲ್ಲಿ.
ಬಂದಷ್ಟು ಬರಲಿ ಎಂದು ಭೂತಾಯಿ ಸೇವೆ ಮಾಡುತ್ತಿರುವ ಇವರು ಎಲ್ಲ ಖರ್ಚುವೆಚ್ಚ ತೆಗೆದು ಎರಡು ಲಕ್ಷ ಆದಾಯ ಪಡೆಯುತ್ತಿದ್ದಾರೆ. ಇವರ ಕೃಷಿ ಕಾರ್ಯಕ್ಕೆ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಕೂಡ ಸಿಕ್ಕಿದೆ. ಇವರ ಕೃಷಿ ಮಾದರಿಯಾಗಿದ್ದು, ಇಳಿವಯಸ್ಸಲ್ಲಿ ಕೃಷಿ ಮಾಡುತ್ತಿರುವ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಹಾಯಾಗಿ ನಿವೃತ್ತಿ ಜೀವನ ಕಳೆಯುವ ವೇಳೆ ಇವರ ಕೃಷಿ ಆಸಕ್ತಿ, ಇವರ ಉತ್ಸಾಹ , ಜೀವನ ಪ್ರೀತಿಗೆ ಸಾಕ್ಷಿಯಾಗಿದೆ. ನಿವೃತ್ತ ನೌಕರ ಗೋವಿಂದಪ್ಪ ಭಜಂತ್ರಿ ಅವರ ಕೃಷಿ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗಿದೆ.












Click it and Unblock the Notifications