ರೇಷ್ಮೆ ನಾಡಾಗಿ ಪರಿವರ್ತನೆಯಾದ ಮಂಡ್ಯ, ಜಿಲ್ಲಾವಾರು ರೇಷ್ಮೆ ಉತ್ಪಾದನೆಯ ವಿವರ ಇಲ್ಲಿದೆ
ಸಕ್ಕರೆ ನಾಡು ಎಂದು ಪ್ರಸಿದ್ಧಿಯಾಗಿದ್ದ ಮಂಡ್ಯ ಜಿಲ್ಲೆ ಇದೀಗ ರೇಷ್ಮೆ ನಾಡಾಗಿ ಪರಿವರ್ತನೆಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿನ ರೇಷ್ಮೆ ಉತ್ಪಾದನೆ ವಿವರ ಇಲ್ಲಿದೆ ತಿಳಿಯಿರಿ.
ಮಂಡ್ಯ, ಮಾರ್ಚ್, 01: ಸಕ್ಕರೆ ನಾಡು ಎಂದು ಪ್ರಸಿದ್ಧಿಯಾಗಿದ್ದ ಮಂಡ್ಯ ಜಿಲ್ಲೆ ಇದೀಗ ರೇಷ್ಮೆ ನಾಡಾಗಿ ಪರಿವರ್ತನೆಗೊಂಡಿದೆ. ಮಂಡ್ಯ ಜಿಲ್ಲೆ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದಲ್ಲೆಯೇ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಜನರು ರೇಷ್ಮೆ ಬೆಳೆಯತ್ತ ಆಕರ್ಷಿತರಾಗುತ್ತಲೇ ಇದ್ದು, ಈ ಮೂಲಕ ರೇಷ್ಮೆ ಬೆಳೆ ವಿಸ್ತೀರ್ಣವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಕಬ್ಬು ಪ್ರಧಾನ ಬೆಳೆಯಾಗಿದ್ದರಿಂದ ಮಂಡ್ಯ ಜಿಲ್ಲೆ ಸಕ್ಕರೆ ನಾಡು ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು. 2021-22ನೇ ಸಾಲಿನಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದ ರಾಮನಗರವನ್ನು ಹಿಂದಿಕ್ಕಿ ಇದೀಗ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನವನ್ನು ಅಲಂಕರಿಸಿದೆ.
ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಬಂಟ್ವಾಳ ಕೃಷಿಕ, ವಿಶೇಷತೆ ಏನು?, ಇಲ್ಲಿದೆ ವಿವರ
ನಂತರದ ಸ್ಥಾನಗಳಲ್ಲಿ ಕ್ರಮವಾಗಿ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿವೆ. 2023ರ ಜನವರಿ ಅಂತ್ಯಕ್ಕೆ ಜಿಲ್ಲೆಯಲ್ಲಿ 17920.91 ಹೆಕ್ಟೇರ್ ಹಿಪ್ಪು ನೇರಳೆ ಬೆಳೆ ವಿಸ್ತೀರ್ಣವಿದ್ದು, 31,769 ಬೆಳೆಗಾರರು ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದಾರೆ.
ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ಆರಂಭಿಸಿರುವ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯಡಿ 1000 ಮಂದಿ ರೇಷ್ಮೆ ಬೆಳೆಗಾರರು ಸದಸ್ಯರಾಗಿ ನೋಂದಾಯಿತರಾಗಿದ್ದಾರೆ. ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಮಾದರಿ ರೇಷ್ಮೆ ಬಿತ್ತನೆ ಕೋಠಿಯಿಂದ 6,76,608 ರೇಷ್ಮೆ ಮೊಟ್ಟೆಯನ್ನು ವಿತರಿಸಲಾಗಿದೆ. ಕೆ.ಆರ್.ಪೇಟೆಯ ಪಿ-1 ಬಿತ್ತನೆ ಕೋಠಿಯಿಂದ 4,82,455 ಮೊಟ್ಟೆಗಳು ಸೇರಿ ಒಟ್ಟು 11,59,063 ರೇಷ್ಮೆ ಮೊಟ್ಟೆಗಳನ್ನು ರೈತರಿಗೆ ವಿತರಿಸಲಾಗಿದೆ.

ರೇಷ್ಮೆ ಮೊಟ್ಟೆಗಳ ಕೊರತೆ ಇರುವುದಿಲ್ಲ
ಮಿಶ್ರ ತಳಿ ರೋಗ ರಹಿತ ಮೊಟ್ಟೆಗಳನ್ನು ಜಿಲ್ಲೆಯಲ್ಲಿರುವ 20 ನೋಂದಾಯಿತ ಖಾಸಗಿ ರೇಷ್ಮೆ ಮೊಟ್ಟೆ ತಯಾರಕರಿಂದ ಪೂರೈಸಲಾಗುತ್ತಿದೆ. ಕೇಂದ್ರ ರೇಷ್ಮೆ ಮಂಡಳಿಯವರಿಂದ ದ್ವಿತಳಿ ಸಂರಕ್ಷಣಾ ಮೊಟ್ಟೆಗಳನ್ನು ಹಾಗೂ ರಾಜ್ಯದ ರೇಷ್ಮೆ ಬಿತ್ತನೆ ಕೋಠಿ ಉತ್ಪಾದಿಸಿದ ರೇಷ್ಮೆ ಮೊಟ್ಟೆಗಳನ್ನು ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಸರಬರಾಜು ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ರೇಷ್ಮೆ ಮೊಟ್ಟೆಗಳ ಕೊರತೆ ಇರುವುದಿಲ್ಲ. ರೇಷ್ಮೆ ಬೆಳೆಗಾರರ ಅವಶ್ಯಕತೆಗೆ ಅನುಗುಣವಾಗಿ ಸಕಾಲದಲ್ಲಿ ಮೊಟ್ಟೆಗಳನ್ನು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ 5591 ರೈತರಿಗೆ ರೇಷ್ಮೆ ತರಬೇತಿ
ಕೆ.ಆರ್.ಪೇಟೆ ಬಿತ್ತನೆ ಪ್ರದೇಶಕ್ಕೆ ಮೊಟ್ಟೆಗಳನ್ನು ಬೇಡಿಕೆಗೆ ಅನುಸಾರವಾಗಿ ಪೂರೈಸಲಾಗುತ್ತಿದ್ದು, ಮೊಟ್ಟೆಗಳು ದೊರೆಯದಿರುವ ಬಗ್ಗೆ ರೇಷ್ಮೆ ಬೆಳೆಗಾರರಿಂದ ಯಾವುದೇ ದೂರುಗಳು ಬಂದಿಲ್ಲ ಎಂದಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 5591 ರೈತರಿಗೆ ರೇಷ್ಮೆ ತರಬೇತಿ ಸಂಸ್ಥೆಯಿಂದ ತರಬೇತಿಯನ್ನು ನೀಡಲಾಗಿದೆ. ಹೆಚ್ಚಿನ ರೈತರು ರೇಷ್ಮೆ ಬೆಳೆಯತ್ತ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಮಂಡ್ಯ ಜಿಲ್ಲೆಗೆ ಸಕ್ಕರೆ ನಾಡು ಎಂಬ ಹೆಗ್ಗಳಿಕೆಗೆ ಸೀಮಿತವಾಗಿತ್ತು. ಕಬ್ಬು ಬೆಳೆದ ರೈತರು ಸಾಲದಲ್ಲಿ ಮುಳುಗಿದ್ದಾರೆ. ಇದರ ನಡುವೆ ಜಿಲ್ಲೆಯ ರೈತರಿಗೆ ರೇಷ್ಮೆ ಬೆಳೆ ಹೊಸ ಆಶಾಕಿರಣವಾಗಿ ಮೂಡಿಸಿದೆ. ರೇಷ್ಮೆ ಬೆಳೆದವರ ಬದುಕು ಬಂಗಾರವಾಗುತ್ತಿದ್ದು, ನಿಧಾನವಾಗಿ ಜಿಲ್ಲೆಯ ರೈತರು ರೇಷ್ಮೆ ಕೃಷಿಯತ್ತ ವಾಲುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಜಿಲ್ಲಾವಾರು ರೇಷ್ಮೆ ಉತ್ಪಾದನೆಯ ವಿವರ
ರೇಷ್ಮೆ ಉತ್ಪಾದನೆಯ ಟಾಪ್-5 ಜಿಲ್ಲೆಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಿಲ್ಲೆಗಳು ಗೂಡು ಉತ್ಪಾದನೆ ರೇಷ್ಮೆ ಉತ್ಪಾದನೆ
1. ಮಂಡ್ಯ 23524.286 ಮೆ.ಟನ್ 3297.230 ಮೆ.ಟನ್
2. ರಾಮನಗರ 18301.351 ಮೆ.ಟನ್ 2563.418 ಮೆ.ಟನ್
3. ಚಿಕ್ಕಬಳ್ಳಾಪುರ 12139.600 ಮೆ.ಟನ್ 1693.635 ಮೆ.ಟನ್
4. ಕೋಲಾರ 8431.656 ಮೆ.ಟನ್ 1188.450 ಮೆ.ಟನ್
5. ಬೆಂಗಳೂರು ಗ್ರಾಮಾಂತರ 3594.347 ಮೆ.ಟನ್ 504.057 ಮೆ.ಟನ್

ರೇಷ್ಮೆ ಬೆಳೆಯ ವಿಸ್ತೀರ್ಣದ ವಿವರ
ಮಂಡ್ಯ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವ ವಿಸ್ತೀರ್ಣ (3 ವರ್ಷದ ವಿವರ)
ವರ್ಷ ವಿಸ್ತೀರ್ಣ ಗುರಿ ಸಾಧನೆ ಶೇ.ಸಾಧನೆ ಒಟ್ಟು ವಿಸ್ತೀರ್ಣ
(ಹೆಕ್ಟೇರ್) (ಹೆಕ್ಟೇರ್) (ಹೆಕ್ಟೇರ್) (ಹೆಕ್ಟೇರ್) (ಹೆಕ್ಟೇರ್)
2019-20 15985.79 450 476.84 2.09% 16462.63
2020-21 16462.63 500 460.19 2.7% 16922.82
2021-22 16922.82 500 476.55 2.8% 17333.43

ಎಲ್ಲ ರೀತಿಯ ಸವಲತ್ತುಗಳನ್ನ ನೀಡಲಾಗುತ್ತದೆ
ರೇಷ್ಮೆ ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನ ಪಡೆದಿರುವುದು ಸಂತೋಷದ ವಿಚಾರವಾಗಿದೆ. ಕಬ್ಬಿಗಿಂತ ರೇಷ್ಮೆ ಬೆಳೆ ಉತ್ತಮ ಎನ್ನುವುದು ನಿಧಾನವಾಗಿ ರೈತರಿಗೆ ಅರಿವಾಗುತ್ತಿದೆ. ರೇಷ್ಮೆ ಕೃಷಿಯತ್ತ ಹಲವರು ಆಕರ್ಷಿತರಾಗುತ್ತಿದ್ದಾರೆ. ರೇಷ್ಮೆ ಕೃಷಿ ಅವಲಂಬಿಸುವವರಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸೌಲಭ್ಯ, ಸವಲತ್ತುಗಳನ್ನು ನೀಡುತ್ತಿದೆ. ರೇಷ್ಮೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯೂ ಇದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಕಬ್ಬಿಗೆ ಹೆಸರಾಗಿದ್ದ ಜಿಲ್ಲೆಯಲ್ಲಿ ಇದೀಗ ರೇಷ್ಮೆ ಮಿಂಚುತ್ತಿದೆ. ಗುಣಾತ್ಮಕ ರೇಷ್ಮೆ ಉತ್ಪಾದನೆಗೆ ರೈತರು ಪ್ರಾಮುಖ್ಯತೆ ನೀಡಬೇಕು. ಸರ್ಕಾರವೂ ರೇಷ್ಮೆಗೆ ಉತ್ತಮ ಮಾರುಕಟ್ಟೆ ಸೃಷ್ಟಿಸಿಕೊಡುವುದರ ಜೊತೆಗೆ ಬೆಲೆ ಕುಸಿತದ ಸಮಯದಲ್ಲಿ ಬೆಳೆಗಾರರ ನೆರವಿಗೆ ನಿಲ್ಲಬೇಕು. ಇನ್ನೂ ಹೆಚ್ಚಿನ ರೈತರನ್ನು ರೇಷ್ಮೆ ಕೃಷಿಯಲ್ಲಿ ತೊಡಗಿಸಲು ಪ್ರೇರೇಪಿಸಬೇಕು ಎಂದು ವಿಧಾನಪರಿಷತ್ ಸದಸ್ಯ
ಮಧು ಜಿ.ಮಾದೇಗೌಡ ಮನವಿ ಮಾಡಿದರು.












Click it and Unblock the Notifications