ಶಾಸಕರ ಪ್ರವಾಸಕ್ಕೆ ಸಿಟಿ ರವಿ ಕೊಟ್ಟ ಕಾರಣ ಗೊತ್ತೇ!?

ಬರದಿಂದ ಬಸವಳಿದ ರೈತಾಪಿ ಜನ ಸುಮ್ಮನೆ ತಾನಾಯಿತು, ತನ್ನ ಪಾಡಾಯಿತು ಎಂದು ಆಕಾಶ ದಿಟ್ಟಿಸುತ್ತಾ ಕುಳಿತಿರುವಾಗ ಪ್ರಜ್ಞಾವಂತ ಜನ (So-called ಬುದ್ಧಿಜೀವಿಗಳಲ್ಲ, ಅವರೆಲ್ಲ ಬೆಚ್ಚಗೆ ತಮ್ಮ ತಮ್ಮ ಪೀಠಗ್ರಸ್ತರಾಗಿದ್ದಾರೆ) ಆ ಪಕ್ಷ ಈ ಪಕ್ಷ ಎನ್ನದೆ ಪ್ರವಾಸಕ್ಕೆ ಹೊರಟ ಅಷ್ಟೂ ಜನನಾಯಕರನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಕುತೂಹಲದ ಸಂಗತಿಯೆಂದರೆ 'ಪ್ರವಾಸ ಹೋಗಕೂಡದು' ಎಂದು ತಮ್ಮದೇ ಪಕ್ಷದ ಶಾಸಕರಿಗೆ ದನಿಯೆತ್ತಿ ಜೋರು ಮಾಡುವಷ್ಟು ಧಾರ್ಷ್ಟ್ಯ ಬೆಳೆಸಿಕೊಳ್ಳದ ನಾಡಿನ ದೊರೆಯೆದುರು ಅಲ್ಲೊಬ್ಬ ಇಲ್ಲೊಬ್ಬ ಮಹಾನುಭಾವ ಮಾತನಾಡುತ್ತಿದ್ದಾನೆ. ಈ ಮಧ್ಯೆ, ಚಿಕ್ಕಮಗಳೂರಿನ ಶಾಸಕ/ ಸಚಿವ ಸಿಟಿ ರವಿ ಸಾಹೇಬರು ಶಾಸಕರ ಪ್ರವಾಸದ ಬಗ್ಗೆ ಪೇಲವ ಸಮಜಾಯಿಷಿ ನೀಡಿ ನಗೆಪಾಟಲಿಗೀಡಾಗಿದ್ದಾರೆ.
ಸೀಟಿ ಊದಿದ ಸನ್ಮಾನ್ಯ ರವಿ: ಸಿ.ಟಿ. ರವಿ ಹೇಳುತ್ತಾರೆ, ಏನೆಂದರೆ... ಟ್ರಾವೆಲ್ ಏಜೆನ್ಸಿಗಳ ಮೂಲಕ ಶಾಸಕರ ವಿದೇಶ ಪ್ರವಾಸಕ್ಕೆ ಟಿಕೆಟ್ ಬುಕ್ ಆಗಿತ್ತು. ಹಣ ಪೂರ್ತಿ ಕಟ್ಟಲಾಗಿತ್ತು.
ಆದರೆ ಈಗ ಕೊನೆಯ ಘಳಿಗೆಯಲ್ಲಿ ಯಾರೊಬ್ಬರೂ ಪ್ರವಾಸಕ್ಕೆ ಹೋಗೊಲ್ಲ ಎಂದು ಟ್ರಾವೆಲ್ ಏಜೆನ್ಸಿಗಳಿಗೆ ಹೇಳಿದರೆ ಅವರು ಬೇಜಾರು ಮಾಡ್ಕೊಳೋದಿಲ್ವೆ! ಜತೆಗೆ ಕಟ್ಟಿರುವ ಅಷ್ಟೂ ಮೊತ್ತವೂ ಕೈತಪ್ಪುತ್ತದೆ. ಗೊತ್ತಾ?
ಹಾಗಾಗಿ ಸುಮ್ ಸುಮ್ನೆ ಯಾರದೋ ಮಾತು ಕೇಳಿಕೊಂಡು ಶಾಸಕರಿಗೆ ಪ್ರವಾಸ ಹೋಗಬೇಡಿ ಎಂದು ಹೇಳಿ ಆ ಹಣವನ್ನು ಲಾಸ್ ಮಾಡ್ಕೋಳಾಗುತ್ತದಾ? ಏನಂತ ಕೇಳ್ತೀರಿ? ನಿಮ್ಗೆ ತಲೆಯಲ್ಲಿ ಬುದ್ಧಿ ಅಂತೇನಾದರೂ ಇದೆಯಾ? ಎಂದು ಶಾಸಕರ ವಿದೇಶ ಪ್ರವಾಸದ ಬಗ್ಗೆ ಪತ್ರಕರ್ತರು ಕೆದಕಿದಾಗ ಸನ್ಮಾನ್ಯ ರವಿ ಸೀಟಿ ಊದಿದ್ದಾರೆ.
ರವ್ಯಣ್ಣಾ ಯಾರ್ ಕಿವಿ ಮೇಲ್ ಲಾಲ್ ಬಾಗ್ ಇಡ್ತಿದ್ದೀರಿ?












Click it and Unblock the Notifications