ಬಜೆಟ್ ಘೋಷಣೆ; ಹೇಗಿರಲಿದೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್?
ಬೆಂಗಳೂರು, ಮಾರ್ಚ್ 24; ಕರ್ನಾಟಕದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಬಸವರಾಜ ಬೊಮ್ಮಾಯಿ ಮಾರ್ಚ್ 4ರಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಹಲವಾರು ಹೊಸ ಘೋಷಣೆಗಳನ್ನು ಮಾಡಿದ್ದರು.
ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹೈನುಗಾರಿಕೆ ಚಟುವಟಿಕೆಗಳಿಗೆ ನೆರವಾಗಲು 'ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್' ಸ್ಥಾಪನೆ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಘೋಷಣೆಯ ತ್ವರಿತಗತಿಯ ಅನುಷ್ಠಾನಕ್ಕೆ ಸರ್ಕಾರ ಚಾಲನೆ ನೀಡಿದೆ.
ಮಾರ್ಚ್ 23ರಂದು ಪ್ರಕಟವಾದ ಸರ್ಕಾರದ ಆದೇಶ ಸಂಖ್ಯೆ ಸಿಒ 60 ಸಿಸಿಬಿ 2022 ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಹೇಗಿರಲಿದೆ? ಎಂಬ ಚಿತ್ರಣವನ್ನು ನೀಡಿದೆ. ಸದರಿ ಬ್ಯಾಂಕಿಗೆ ಹಾಲು ಉತ್ಪಾದಕ ಸಂಘ, ಕರ್ನಾಟಕ ಹಾಲು ಮಹಾಮಂಡಳ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ 260 ಕೋಟಿ ರೂ. ಮತ್ತು ರಾಜ್ಯ ಸರ್ಕಾರವು 100 ಕೋಟಿ ರೂ. ಷೇರು ಬಂಡವಾಳವನ್ನು ಒದಗಿಸಲಿದೆ.
ಮಾರ್ಚ್ 22ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿದಂತೆ ಯೋಜನೆಯನ್ನು ಸಹಕಾರ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತದೆ. ಆದ್ದರಿಂದ ಬ್ಯಾಂಕ್ ಹೇಗಿರಲಿದೆ? ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ.

ಸದಸ್ಯತ್ವದ ಅವಕಾಶ
ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದಂತೆ ಸದಸ್ಯತ್ವದ ಅವಕಾಶದೊಂದಿಗೆ 'ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್' ಅನ್ನು ಸಹಕಾರ ಇಲಾಖೆಯು ಸ್ಥಾಪನೆ ಮಾಡುತ್ತದೆ. ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ಗೆ ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ಹಾಲು ಮಹಾಮಂಡಳ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ 260 ಕೋಟಿ ರೂ. ಅನುದಾನ ನೀಡಲಿವೆ. ರಾಜ್ಯ ಸರ್ಕಾರವು 100 ಕೋಟಿ ರೂ.ಗಳ ಷೇರು ಬಂಡವಾಳವನ್ನು ಒದಗಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

4 ವಿಭಾಗದ ಸದಸ್ಯತ್ವ
ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕಿಗೆ ಎ, ಬಿ, ಸಿ ಮತ್ತು ಡಿ ವರ್ಗ ಸೇರಿ 4 ವರ್ಗದ ಸದಸ್ಯತ್ವಕ್ಕೆ ಅವಕಾಶ ನೀಡಲಾಗಿದೆ. 'ಎ' ವರ್ಗದ ಸದಸ್ಯರು ರಾಜ್ಯದಲ್ಲಿನ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಕನಿಷ್ಠ 1 ಷೇರು ರೂ. 1000 ರೂ.ಗಳು.
'ಬಿ' ವರ್ಗದ ಸದಸ್ಯರು ರಾಜ್ಯದಲ್ಲಿನ ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘ ಕನಿಷ್ಠ 1 ಷೇರು ರೂ. 10 ಸಾವಿರ.
'ಸಿ' ವರ್ಗದ ಸದಸ್ಯರು ಕರ್ನಾಟಕ ರಾಜ್ಯದ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು ಕನಿಷ್ಠ 1 ಷೇರು ರೂ. 1 ಕೋಟಿ.
'ಡಿ' ವರ್ಗದ ಸದಸ್ಯರು ಕರ್ನಾಟಕ ಹಾಲು ಮಹಾಮಂಡಳ ಕನಿಷ್ಠ 1 ಷೇರು ರೂ. 50 ಕೋಟಿ.

ಸಾಲಗಳನ್ನು ವಿತರಣೆ ಮಾಡಲು ಕ್ರಮ
ಸದಸ್ಯತ್ವ ಮತ್ತು ಷೇರಿನ ಅವಕಾಶದಂತೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿ ಬ್ಯಾಂಕ್ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ರಾಜ್ಯದ ಹಾಲು ಉತ್ಪಾದಕರಿಗೆ ಸರಳ ನಿಬಂಧನೆಗಳೊಂದಿಗೆ ಹೈನುಗಾರಿಕೆ ಹಾಗೂ ಹೈನುಗಾರಿಕೆ ಸಂಬಂಧಿತ ಕಸುಬುಗಳನ್ನು ಕೈಗೊಳ್ಳಲು ಸಾಲವನ್ನು ವಿತರಣೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Recommended Video

ಬ್ಯಾಂಕ್ ರಚನೆಗೆ ಅಗತ್ಯ ಕ್ರಮ
ಬ್ಯಾಂಕ್ ಅನ್ನು ರಚನೆ ಮಾಡಲು ಯೋಜನಾ ವರದಿ, ಉಪ ನಿಯಮಗಳನ್ನು ರಚಿಸಿ ಬ್ಯಾಂಕ್ ಸ್ಥಾಪನೆಗೆ ಸಹಕಾರ ಸಂಘಗಳ ನಿಬಂಧಕರ ಮೂಲಕ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಆಡಳಿತಾತ್ಮಕ ಕ್ರಮವಿಡಲು ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಹಾಲು ಮಹಾಮಂಡಳ ಇವರಿಗೆ ಸರ್ಕಾರವು ನಿರ್ದೇಶನ ನೀಡಿದೆ.
ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಹಾಲು ಮಹಾಮಂಡಳ ಇವರು ಕೂಡಲೇ ಕಾರ್ಯ ಪ್ರವೃತ್ತರಾಗಿ ಬ್ಯಾಂಕಿನ ರಚನೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications