ಕಲಬುರಗಿ ರೈತರಿಗೆ ಹೊಸ ಸಂಕಷ್ಟ..ತೊಗರಿಗೆ ರೋಗಬಾಧೆ: ಇಲ್ಲಿದೆ ಪರಿಹಾರ
ಬೆಂಗಳೂರು, ನವೆಂಬರ್ 26: ಕಲಬುರಗಿ ಜಿಲ್ಲೆಯಲ್ಲಿ ನವಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಕಾರಣದಿಂದ ತೇವಾಂಶದ ಕೊರತೆಯಾಗಿದೆ ಹಾಗೂ ಒಣಬೇರು ಕೊಳೆ ರೋಗ ಹಾಗೂ ಮಚ್ಚೆರೋಗ ಕಂಡು ಬಂದಿರುವದರಿಂದ ತೊಗರಿ ಬೆಳೆ ಒಣಗಲಾರಂಭಿಸಿದೆ. ಹೀಗಾಗಿ ತೊಗರಿ ಬೆಳೆಗಾರರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ರೈತರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕಲಬುರಗಿ ಜಿಲ್ಲೆಯಲ್ಲಿ ವಾಡಿಕೆ ಮಳೆ 17.4 ಮಿ.ಮಿ ಆಗಿದ್ದು, 5.6 ಮಿ.ಮಿ ಕಡಿಮೆ ಮಳೆಯಾಗಿರುತ್ತದೆ. ಇದರಿಂದ ಕಡಿಮೆ ಆಳ ಮತ್ತು ಮಧ್ಯಮ ಆಳದ ಭೂಮಿಯಲ್ಲಿ ತೇವಾಂಶದ ಕೊರತೆ ಕಂಡು ಬಂದಿರುತ್ತದೆ. ಬಿತ್ತನೆಯಾದ ತೊಗರಿ ಬೆಳೆಯಲ್ಲಿ ತೇವಾಂಶದ ಬಾಧೆಗೆ ಮ್ಯಾಕ್ರೋಫೋಮಿನಾ ಫೆಜಿಯೊಲ್ಕೆ ಶೀಲಿಂದ್ರದಿಂದ ಬರುವ ಒಣ ಬೇರು ಕೊಳೆ ರೋಗ ಹೆಚ್ಚಾಗಿ ಕಾಣಿಸಿಕೊಂಡಿರುತ್ತದೆ. ಅದರೊಂದಿಗೆ ಫೈಟೊಪ್ಲೋರಾ ಮಚ್ಚೆ ರೋಗವು ಅಲ್ಲಲ್ಲಿ ಉಲ್ಬಣಿಸಿರುವುದು ಕಂಡು ಬಂದಿರುವುದರಿಂದ ತೊಗರಿ ಒಣಗಲಾರಂಬಿಸಿರುತ್ತದೆ ಎಂದು ಬೆಳೆ ಒಣಗುತ್ತಿರುವುದಕ್ಕೆ ಸಚಿವರು ವಿವರಿಸಿದ್ದಾರೆ.

ಈ ಸಂಬಂಧದಲ್ಲಿ ಕೃಷಿ ಇಲಾಖೆ ನೀಡಿರುವ ಮುಂಜಾಗ್ರತಾ ಕ್ರಮಗಳ ವಿವರ ಇಲ್ಲಿದೆ.
ಬೆಳೆಯಲ್ಲಿ ಹಸಿ ಆರದಂತೆ ಸತತ ಅಂತರ ಬೇಸಾಯ ಮಾಡಬೇಕಲ್ಲದೆ, ಭೂಮಿ ಎರೆಬಿಡಿ (ಬಿರುಕು) ಬಿಡದಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯಲ್ಲಿ ಶೇ 90ರ ಸಹಾಯ ಧನದಲ್ಲಿ ಲಭ್ಯವಿರುವ ತುಂತುರು ನೀರಾವರಿ ಘಟಕ ಹಾಗೂ ಶೇ.50ರ ಸಹಾಯ ಧನದಲ್ಲಿ ಲಭ್ಯವಿರುವ ಪಿವಿಸಿ ಪೈಪು ಹಾಗೂ ಎಚ್‌ಡಿಪಿಇ ರೋಲ್ ಪೈಪುಗಳನ್ನು ಬಳಸಿ ಸಮೀಪದ ಬಾವಿ ಅಧವಾ ಬೋರವೆಲ್‌ನಿಂದ ಸಾಲು ಬಿಟ್ಟು ಸಾಲು ನೀರು ಹಾಯಿಸುವುದು.
ಶಿಲೀಂದ್ರದಿಂದ ಬರುವ ರೋಗವನ್ನು ನಿಯಂತ್ರಿಸಲು 5-10 ಗ್ರಾ ಟ್ರೈಕೊಡರ್ಮ (ಜೈವಿಕ ಶಿಲೀಂದ್ರನಾಶಕ) ಅಥವಾ ಕಾರ್ಬೇಂಡೆಜಿಮ್ ಹಾಗೂ ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತಿ ಲೀಟರ ನೀರಿಗೆ 2.5 ಗ್ರಾಂ ಬೆರಸಿ ಗಿಡದ ಕಾಂಡ ಅಥವಾ ಬೇರಿಗೆ ಸಿಂಪಡಿಸಬೇಕು. ಟ್ರೈಕೊಡರ್ಮ (ಜೈವಿಕ ಶಿಲೀಂದ್ರನಾಶಕ) ಮತ್ತು ಕಾರ್ಬೇಂಡೆಜಿಮ್ ಹಾಗೂ ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರ ನಾಶಕಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ50ರ ಸಹಾಯ ಧನದಲ್ಲಿ ಲಭ್ಯವಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications