Kabini Dam: ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ, ಇನ್ನೊಂದು ವಾರದಲ್ಲಿ ಮಳೆಯಾಗದಿದ್ರೆ ಈ ಜಿಲ್ಲೆ ಜನರಿಗೆ ಸಂಕಷ್ಟ ಗ್ಯಾರಂಟಿ
ಮೈಸೂರು, ಸೆಪ್ಟೆಂಬರ್, 22: ರೈತರ ಬೆಳೆಗಳಿಗೆ ನೀರೊದಗಿಸಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಜನ, ಜಾನುವಾರುಗಳ ದಾಹ ತೀರಿಸುತ್ತಿದ್ದ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತವಾಗುತ್ತಲೇ ಇದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದ್ದು, ಜಲಾಶಯ ಬರಿದಾದರೆ ಮುಂದಿನ ಬದುಕು ಹೇಗೆ ಎಂಬ ಭಯವೂ ಕಾಡತೊಡಗಿದೆ.
ಮುಂಗಾರು ಆರಂಭವಾಗುತ್ತಿದ್ದಂತೆಯೇ ಕಾವೇರಿ ಕಣಿವೆಯಲ್ಲಿನ ಜಲಾಶಯಗಳ ಪೈಕಿ ಬಹುಬೇಗನೇ ಭರ್ತಿಯಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುತ್ತಿದ್ದ ಜಲಾಶಯ ಈ ಬಾರಿ ಬರಿದಾಗಿದ್ದು, ಇದನ್ನು ನಂಬಿದ ರೈತರು ಆಕಾಶ ನೋಡುವಂತಾಗಿದೆ. ಮಳೆ ಕಡಿಮೆ ಸುರಿದಿದ್ದರೂ ಜಲಾಶಯದಲ್ಲಿ ನೀರಿದೆ ಕೃಷಿಗೆ ಬಿಡುಗಡೆ ಮಾಡಬಹುದೆಂದು ಕಾದು ಕುಳಿತಿದ್ದ ರೈತರು ಇದೀಗ ಸಂಕಷ್ಟ ಎದುರಿಸುವಂತಾಗಿದೆ.

ಜನವರಿಯಿಂದಲೇ ಮಳೆಯ ಅಭಾವ ಕಾಡಿತ್ತು. ಜೂನ್ ನಂತರ ಮುಂಗಾರು ಚೇತರಿಸಿ ಕಳೆದ ವರ್ಷದಂತೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕಬಿನಿ ಜಲಾಶಯದ ನೀರನ್ನು ಆಶ್ರಯಿಸಿದ್ದ ರೈತರಿದ್ದರು. ಆದರೆ ಅಂದುಕೊಂಡಂತೆ ಯಾವುದೂ ಆಗಲೇ ಇಲ್ಲ. ಹೇಗೋ ಜುಲೈ ತಿಂಗಳಲ್ಲಿ ಒಂದಷ್ಟು ಮಳೆ ಸುರಿದಿದ್ದರಿಂದ ಜಲಾಶಯ ಭರ್ತಿಯಾಗುವತ್ತ ಸಾಗಿತ್ತು. ಆದರೆ ತಮಿಳುನಾಡಿಗೆ ನೀರು ಹರಿಸಿದ ಕಾರಣ ಮತ್ತೆ ಜಲಾಶಯದ ನೀರಿನ ಮಟ್ಟ ತಗ್ಗಿದ್ದಲ್ಲದೆ, ಒಳಹರಿವು ಕ್ಷೀಣಿಸಿದೆ.
ಕುಡಿಯುವ ನೀರಿಗೂ ಹಾಹಾಕಾರ
ಈ ನಡುವೆ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಹೊರಡಿಸಿದ್ದು, ಸರ್ಕಾರ ಆದೇಶ ಪಾಲನೆ ಮಾಡಲು ಮುಂದಾದರೆ ಕೆಆರ್‌ಎಸ್ ಜಲಾಶಯದ ಜೊತೆಗೆ ಕಬಿನಿ ಜಲಾಶಯದಿಂದ ನೀರು ಹರಿಸಿದ್ದೇ ಆದರೆ ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವುದಂತು ಖಚಿತ.
ಸದ್ಯ ಕಬಿನಿ ಜಲಾಶಯದಲ್ಲಿ 75.70 (14.65) ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿಯಾಗಿದ್ದು, ಇದರಲ್ಲಿ ಬಳಕೆ ಸಿಗುವುದು 11.99 ಟಿಎಂಸಿ ಮಾತ್ರ. ಉಳಿದ 7.52 ಟಿಎಂಸಿಯಲ್ಲಿ 6 ಟಿಎಂಸಿ ಡೆಡ್ ಸ್ಟೋರೆಜ್ ಆಗಿದೆ.
ಜಲಾಶಯದ ಇನ್ನುಳಿದ 1.52 ಟಿಎಂಸಿ ನೀರನ್ನು ಹಿನ್ನೀರಿನಲ್ಲಿರುವ ಅಪಾರ ಪ್ರಮಾಣದ ವನ್ಯಜೀವಿಗಳು ಹಾಗೂ ಜಲಚರಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವುದರಿಂದ ಆ ನೀರನ್ನು ಬಳಸುವಂತಿಲ್ಲ. ಇನ್ನು ಕಾವೇರಿ ಪ್ರಾಧಿಕಾರ ಮತ್ತು ಸುಪ್ರೀಂ ಆದೇಶದಂತೆ ಎರಡು ಬಾರಿ ಜಲಾಶಯದಿಂದ ಹೆಚ್ಚಿನ ನೀರು ಹರಿಸಿದ್ದರಿಂದ ಜಲಾಶಯದ ಸಂಗ್ರಹಮಟ್ಟದಲ್ಲಿ ಭಾರೀ ಕುಸಿತ ಕಂಡಿದ್ದು, ಮತ್ತೆ ಸುಪ್ರೀಂ ಆದೇಶ ಪಾಲನೆಗಾಗಿ ನೀರು ಹರಿಸಿದರೇ ಜಲಾಶಯ ಬರಿದಾಗಿ ಕುಡಿಯಲು ನೀರು ಸಿಗುವುದು ಕಷ್ಟವಾಗಲಿದೆ.
ಕಬಿನಿ ನೀರು ನಂಬಿದವರಿಗೆ ದೇವರೇ ಗತಿ
ಸಾಮಾನ್ಯವಾಗಿ ಕೇರಳದ ವೈನಾಡಿನಲ್ಲಿ ಮಳೆಯಾದರೆ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಾಗುತ್ತದೆ. ಆದರೆ ಬಾರಿ ಕೇರಳದಲ್ಲಿಯೂ ಸಮರ್ಪಕ ಮಳೆಯಾಗಿಲ್ಲ. ಕೇರಳದ ವೈನಾಡು ಹಾಗೂ ಹಿನ್ನೀರು ವ್ಯಾಪ್ತಿ ಪ್ರದೇಶದಲ್ಲಿ ಶೇಕಡಾ 52ರಷ್ಟು ಮಳೆ ಕೊರತೆ ಉಂಟಾದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದುಬರಲಿಲ್ಲ. ಮಳೆ ಬಾರದ ಕಾರಣ ಜಲಾಶಯ ವ್ಯಾಪ್ತಿಯ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳು ಕೂಡ ಬರದಿಂದ ತತ್ತರಿಸುತ್ತಿವೆ. ಹೀಗಿರುವಾಗ ಜಲಾಶಯದ ನೀರಿನ ಪ್ರಮಾಣವೂ ತಳ ಸೇರಿದರೆ ಮುಂದೇನು ಗತಿ ಎಂಬ ಭಯವೂ ಕಾಡಲಾರಂಭಿಸಿವೆ.
ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಮಾತನಾಡಿ, ಕೇರಳದ ವೈನಾಡು ಹಾಗೂ ಕಬಿನಿ ಜಲಾಶಯದ ಜಲಾನಯನ ವ್ಯಾಪ್ತಿಯಲ್ಲಿ ಈ ವರ್ಷ ಶೇಕಡಾ 62ರಷ್ಟು ಮಳೆ ಕೊರತೆಯಿದೆ. ಅದರಲ್ಲೂ ಕಳೆದ ಮೂರು ತಿಂಗಳು ಮಳೆ ತೀರಾ ಕ್ಷೀಣಿಸಿದೆ, ಈಗಿರುವ ಸಂಗ್ರಹ ಮಟ್ಟ ಕಾಯ್ದುಕೊಂಡರೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ. ಆದರೆ ಮುಂದಿನ ಬೆಳವಣಿಗೆ ಏನು ಆಗಲಿದೆಯೋ ಗೊತ್ತಿಲ್ಲ. ಒಂದು ವೇಳೆ ಕಬಿನಿಯಿಂದಲೂ ನೀರು ಹರಿಸಬೇಕಾದ ಪರಿಸ್ಥಿತಿ ಎದುರಾದರೆ ಕಬಿನಿಯನ್ನು ನಂಬಿದವರನ್ನು ದೇವರೇ ಕಾಪಾಡಬೇಕಿದೆ.












Click it and Unblock the Notifications