ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವವೈವಿಧ್ಯ ದಿನ: ಜೀವ ಸರಪಳಿ ಕೊಂಡಿಗೆ ಮನುಜನೇ ʼಕಿಡಿʼ

By ಸೋಮನಗೌಡ ಎಸ್.ಎಂ. ಕಟ್ಟಿಗೆಹಳ್ಳಿ
|
Google Oneindia Kannada News

ಸತ್ಯ ಎನ್ನಿಸಿದ ಆ ಒಂದು ಮಾತು. 93 ವರ್ಷದ ವೃದ್ಧನಿಗೆ ಒಂದು ದಿನ ಆಕ್ಸಿಜನ್ ಅಳವಡಿಸಿದ್ದಕ್ಕೆ 16 ಸಾವಿರ ಬಿಲ್‌ ಕೈಗೆ ಕೊಟ್ಟರಂತೆ ಆಸ್ಪತ್ರೆಯವರು. ವೃದ್ಧನ ಕಣ್ಣಲ್ಲಿ ನೀರು ಬಂತಂತೆ.

ಡಾಕ್ಟರ್‌ ಕೇಳಿದರಂತೆ. ಯಾಕೆ ದುಃಖ? ಅದಕ್ಕೆ ವೃದ್ಧ ಹೇಳಿದನಂತೆ ""ಬಿಲ್‌ ನೋಡಿ ನನಗೆ ದುಃಖವಾಗಲಿಲ್ಲ ವೈದ್ಯರೇ... ಒಂದು ದಿನ ಉಸಿರು ಕೊಟ್ಟಿದ್ದಕ್ಕೆ 16 ಸಾವಿರ ರೂಪಾಯಿ ಕಟ್ಟಲು ಚಿಂತೆ ಇಲ್ಲ. ಆದರೆ 93 ವರ್ಷ ನನಗೆ ಉಸಿರಾಡಲು ಗಾಳಿ ಕೊಟ್ಟ ಈ ಪ್ರಕೃತಿ ನನಗೆ ಯಾವುದೇ ಬಿಲ್‌ ಕೊಡಲಿಲ್ಲ. ಉಚಿತವಾಗಿ ಇಷ್ಟು ವರ್ಷ ನನಗೆ ಆಕ್ಸಿಜನ್ ಕೊಟ್ಟು ಕಾಪಾಡಿದ ಈ ಪ್ರಕೃತಿಯ ಋಣ ನಾ ಹೇಗೆ ತೀರಿಸಲಿ? ಎಂಬ ಚಿಂತೆ ಕಾಡುತ್ತಿದೆ ಎಂದರಂತೆ ಆ ವೃದ್ಧ. ವೈದ್ಯರಿಗೆ ಬಳಿ ಉತ್ತರವೇ ಇರಲಿಲ್ಲ.

ಜೀವ ವೈವಿಧ್ಯತೆಯ ಮೇಲೆ ಇಷ್ಟೊಂದು ಕೋಪ

ಜೀವ ವೈವಿಧ್ಯತೆಯ ಮೇಲೆ ಇಷ್ಟೊಂದು ಕೋಪ

ಇನ್ನೊಂದು ಆಶ್ಚರ್ಯ ಅನ್ನಿಸಿದ್ದು ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ಹಪಹಪಿಸುತ್ತಿದ್ದರೆ ನಮ್ಮ ಪುಟ್ಟ ಗ್ರಾಮದಲ್ಲಿ ಅಡಕೆ ಮರಕ್ಕೆ ಬೇವಿನ ಮರ, ಹುಣಸೇ ಮರ ಅಡ್ಡಿಯಾಗುತ್ತಿವೆ. ಆ ಮರದ ಮೂಲಕ ಅಳಿಲು, ಮಂಗಗಳು ಮತ್ತಿತರ ಪಕ್ಷಿಗಳು ಕುಳಿತು ಅಡಕೆ ಕಾಯಿಗಳನ್ನು ತಿಂದು ಹಾಳು ಮಾಡುತ್ತವೆ ಎಂದು ಒಬ್ಬ ರೈತ ತನ್ನ ಹೊಲದ ಸುತ್ತ ಇದ್ದ 20ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳನ್ನು ಮಷೀನ್ ಗರಗಸದಿಂದ ಕೇವಲ ಗಂಟೆಗಳಲ್ಲೇ ಕೊಂದೇ ಬಿಟ್ಟು.

ಮನುಷ್ಯನಿಗೆ ಯಾಕೆ ಈ ಪ್ರಕೃತಿಯ ಮೇಲೆ, ಜೀವ ವೈವಿಧ್ಯತೆಯ ಮೇಲೆ ಇಷ್ಟೊಂದು ಕೋಪ. ಕೋವಿಡ್ ಎಂಬ ಮಹಾಮಾರಿ ಇಡೀ ಜಗತ್ತಿನ ಮನುಜ ಸಂಕುಲವನ್ನೇ ಕಿತ್ತು ತಿನ್ನುತ್ತಿದೆ. ಕಾಣದ ವೈರಾಣುವಿನ ಈ ಕ್ರೂರತೆಗೆ ನಲುಗಿರುವ ಜನ ಶುದ್ಧಗಾಳಿಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡ್ತಿದ್ದಾರೆ. ಆದರೂ ಅನೇಕರಿಗೆ ಬುದ್ಧಿ ಬಂದಿಲ್ಲ. ಹಣ ಖರ್ಚು ಮಾಡಿ ಆಕ್ಸಿಜನ್ ಕೊಳ್ಳುವ ಜನರಿಗೆ ಒಂದು ಗಿಡ ನೆಟ್ಟ ಪೋಷಿಸುವ ಸಾಮಾನ್ಯ ಪರಿಸರ ಜ್ಞಾನ ಇಲ್ಲವಲ್ಲ ಎಂಬುದು ಖೇದಕರ.

ಜೀವ ವೈವಿಧ್ಯ ದಿನದ ಮಹತ್ವ

ಜೀವ ವೈವಿಧ್ಯ ದಿನದ ಮಹತ್ವ

ಪ್ರತಿ ವರ್ಷ ಮೇ 22 ಅನ್ನು ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಜೀವ ವೈವಿಧ್ಯದಿನ 1993ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಜೀವ ವೈವಿಧ್ಯ ದಿನವನ್ನು ಆಚರಿಸಲಾಯಿತು. ಇದೀಗ 26 ವರ್ಷಗಳಿಂದ ಈ ದಿನವನ್ನು ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಸಂಕಲ್ಪ ಮಾಡಲಾಗುತ್ತಿದೆ.

ಮರಗಳ ಮಾರಣಹೋಮ ಅಭಿವೃದ್ಧಿಯ ಹೆಸರಿನಲ್ಲಿ ಅವ್ಯಾಹತವಾಗಿ ನಡೆದ ಮರಗಳ ಕಡಿತದಿಂದಾಗಿ ಕಾಡು ಖಾಲಿ ಖಾಲಿಯಾಗುತ್ತಿದೆ. ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವಸಂಸ್ಥೆ ಈ ದಿನವನ್ನು ಮುಡಿಪಾಗಿಟ್ಟಿದೆ. ಕೊರೊನಾ ವೈರಸ್‌ ಮಾನವನನ್ನು ಕಾಡುತ್ತಿರುವ ಸಂದರ್ಭದಲ್ಲಿ ಜೀವವೈವಿಧ್ಯ ಅತ್ಯಂತ ಪ್ರಸ್ತುತ.

ಪ್ರಕೃತಿ ಮೇಲೆ ಮಾನವನ ಪ್ರಹಾರ

ಪ್ರಕೃತಿ ಮೇಲೆ ಮಾನವನ ಪ್ರಹಾರ

ಕಳೆದ ಬಾರಿ ಇದೇ ತಿಂಗಳಲ್ಲಿ ಲಾಕ್‌ಡೌನ್‌ ಆದಾಗ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೀದಿ ಬೀದಿಗಳಲ್ಲಿ ನವಿಲುಗಳ ಓಡಾಟ, ಕೂಗಾಟ, ಕಂಡು ಬಂದವು. ವಿವಿಧ ಪಕ್ಷಿಗಳ ಸಂಗೀತ ಮುದ ನೀಡುತ್ತಿತ್ತು. ವಿಶ್ವದ ಅದೆಷ್ಟೋ ನದಿಗಳು ಶುಭ್ರವಾದವು, ಗಂಗೆ ಹೆಣಗಳ ತೇಲುವಿಕೆಯಿಂದ ಮುಕ್ತಿ ಪಡೆದು ನಮಾಮಿ ಗಂಗೆಯಾದಳು. ಕೊರೊನಾ ವೈರಸ್‌ ಕೂಡ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ಪ್ರಕೃತಿಯ ಸಹಜ ಪ್ರತಿಕ್ರಿಯೆಯ ಒಂದು ವಿನ್ಯಾಸ ಇರಬಹುದು ಎಂದು ಪರಿಸರ ವಿಜ್ಞಾನಿಗಳು ತರ್ಕಿಸಲು ಆರಂಭಿಸಿದರು.

ಲಾಕ್‌ಡೌನ್‌ಗಳ ಮೂಲಕ ಸ್ವಚ್ಛವಾದ ಪರಿಸರ, ಜಲಸಂಪನ್ಮೂಲ, ಕೂಡಿಕೊಂಡ ಓಜೋನ್ ಪದರ- ಇವೆಲ್ಲ ಇದಕ್ಕೆ ನಿದರ್ಶನವಾಗಿದ್ದವು. ಆದರೆ ಈ ಬಾರಿ ನೋಡಿ ಗಂಗೆಯಲ್ಲಿ ಹೆಣಗಳ ರಾಶಿ, ಹೆಣ ಸುಡಲು ಕಾಡು ಕಡಿದು ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಫ್ಯಾಕ್ಟರಿಯ ಹೊಗೆಯಂತೆ ಕಾಣುತ್ತಿದೆ. ಪ್ರಕೃತಿ ಮೇಲೆ ಮಾನವನ ಪ್ರಹಾರ ಒಂದಾ ಎರಡಾ? ""ಇನ್ನಾದರೂ ನಮ್ಮ ಜೀವವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನು ಉಳಿಸಲು ಪಣ ತೊಡದಿದ್ದರೆ ಮಾನವನೂ ಸರ್ವನಾಶವಾಗುವ ದಿನ ದೂರವಿಲ್ಲ'' ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಬಾರಿಯೇ ಎಚ್ಚರಿಸಿದೆ.

ಜೀವ ಸರಪಳಿ ಕೊಂಡಿಗೆ ಮನುಷ್ಯನೇ ಕಿರಾತಕ

ಜೀವ ಸರಪಳಿ ಕೊಂಡಿಗೆ ಮನುಷ್ಯನೇ ಕಿರಾತಕ

ವಸುಂಧರೆ ಇಡೀ ಜೀವ ಸಂಕುಲ ಇರುವ ಒಂದೇ ಒಂದು ಗ್ರಹ. ಇಂತಹ ವಿಶಿಷ್ಠವಾದ ಭೂ ಮಂಡಲದಲ್ಲಿ ಗಿಡಮೂಲಿಕೆ, ಕ್ರಿಮಿಕೀಟಗಳೂ ಸೇರಿದಂತೆ ಕೋಟ್ಯಂತರ ಜೀವಿಗಳಿವೆ. ಇವುಗಳ ಜೀವನ ಒಂದಕ್ಕೊಂದು ಹೆಣೆದುಕೊಂಡಿವೆ. ಆಹಾರ ಸರಪಳಿ ಒಂದು ಜೀವ ಇನ್ನೊಂದು ಜೀವವನ್ನು ಅವಲಂಭಿಸಿದೆ. ಇರುವೆಯಿಂದ ಹದ್ದಿನವರೆಗೂ, ಹುಲ್ಲಿನಿಂದ ಹಾಲದ ಮರದವರೆಗೂ ಆಹಾರ ಸರಪಳಿ ಹರಡಿಕೊಂಡಿದೆ. ಇವುಗಳಲ್ಲಿ ಒಂದು ಕೊಂಡಿ ನಾಶವಾದರೆ ಇಡೀ ಸರಪಳಿಯೇ ನಾಶವಾಗುತ್ತದೆ.

ಹವಾಮಾನ ವೈಪರೀತ್ಯ, ಜಲ ಸುರಕ್ಷತೆ, ಆಹಾರ ಸುರಕ್ಷತೆ ಮತ್ತು ಭದ್ರತೆ, ಮನುಷ್ಯನ ಆರೋಗ್ಯ, ವಿಪತ್ತು ನಿರ್ವಹಣೆ, ಆರ್ಥಿಕಾಭಿವೃದ್ಧಿ ಹೀಗೆ ಏನೇ ಇದ್ದರೂ ಸಹ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ನಿಜವಾದ ಪರಿಹಾರ ಪ್ರಕೃತಿ ಮಾತೆಯಲ್ಲಿದೆ. ಪ್ರಕೃತಿಯನ್ನು ನಾವು ಕಾಪಿಟ್ಟುಕೊಂಡರೆ ಮಾತ್ರೆ ಮನುಜನ ಉಳಿವು.

ಜೀವ ವೈವಿಧ್ಯವನ್ನು ನಾಶ ಮಾಡಿಸುವ ಅಭಿವೃದ್ಧಿ

ಜೀವ ವೈವಿಧ್ಯವನ್ನು ನಾಶ ಮಾಡಿಸುವ ಅಭಿವೃದ್ಧಿ

ನೋಡಿ ಬೆಂಗಳೂರಿನಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಇರುವ ಮರಗಳ ಸಂಖ್ಯೆ ಎಷ್ಟು ಗೊತ್ತಾ? ಕೇವಲ 23 ಲಕ್ಷ. ಈ ಅಲಕ್ಷ್ಯದಿಂದಲೇ ಮನುಜ ಆಕ್ಸಿಜನ್... ಆಕ್ಸಿಜನ್ ಎಂದು ಒದ್ದಾಡುತ್ತಿದ್ದಾನೆ. ಇದಕ್ಕೆ ಕಾರಣ ಅಭಿವೃದ್ಧಿಯ ಸ್ಫೋಟ ಅಲ್ಲವೇ?

ಇಷ್ಟಕ್ಕೆಲ್ಲಾ ಅನಾಹುತಗಳಿಗೆ ಕಾರಣ ಮನುಷ್ಯನ ವಿಕೃತಿ. ಪ್ರಕೃತಿಯನ್ನು ಪರಿಪರಿಯಾಗಿ ಹಿಂಸಿಸಿದ ಪರಿಣಾಮವೇ ಪರಿಸರ ಮನುಷ್ಯನನ್ನು ಸರ್ವನಾಶ ಮಾಡಲು ಮುಂದಾಗಿದೆ. ನಿಸರ್ಗವನ್ನು ನಾವು ಆರೋಗ್ಯಕರವಾಗಿ ಇಟ್ಟುಕೊಂಡರೆ, ಅದು ನಮ್ಮ ಬಹುತೇಕ ಸಮಸ್ಯೆಗಳನ್ನು ಪರಿಹರಿಸಲಿದೆ. ಜೀವ ವೈವಿಧ್ಯವನ್ನು ನಾಶ ಮಾಡಿ ನಡೆಸುವ ಅಭಿವೃದ್ಧಿ, ಅದು ಅಭಿವೃದ್ಧಿಯೇ ಅಲ್ಲ. ಅದರಿಂದ ದೀರ್ಘಕಾಲಿಕವಾಗಿ ನಾಶವೇ ಖಚಿತ. ಈಗ ಕಾಡುತ್ತಿರುವ ಕೋವಿಡ್ ಎರಡನೇ ಅಲೆಯ ಸಾವು ನೋವುಗಳಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಾ?

ಸಾಮೂಹಿಕ ಜೀವನ ನಾಶಕ್ಕೆ ಧರೆ ಸಿದ್ಧ

ಸಾಮೂಹಿಕ ಜೀವನ ನಾಶಕ್ಕೆ ಧರೆ ಸಿದ್ಧ

ರಾಜನ ಕಥೆ ಇಲ್ಲಿ ಪ್ರಸ್ತುತ. ಸುಭೀಕ್ಷವಾಗಿದ್ದ ರಾಜ್ಯದಲ್ಲಿ ಹಕ್ಕಿ-ಪಕ್ಷಿಗಳು, ಗೊರವಂಕ, ಬಿಳಿಕೊಕ್ಕರೆ, ಗುಬ್ಬಿಗಳು ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ರಾಜನಿಗೆ ರೈತರು ದೂರು ನೀಡುತ್ತಾರೆ. ರಾಜ ಅವುಗಳನ್ನು ಕೊಲ್ಲಿಸುತ್ತಾನೆ. ಪಟಾಕಿ ಸಿಡಿಸಿ ಓಡಿಸಿ ಎಂದು ಆದೇಶಿಸುತ್ತಾನೆ. ರಾಜನ ಆಜ್ಞೆಯನ್ನು ಪಾಲಿಸಿದ ಸೇವಕರು ನಿರಂತರ ಕೆಲಸದಲ್ಲಿ ಮಾಡಿ ಹೇಗೋ ಓಡಿಸುತ್ತಾರೆ. ಆಗ ಬಂತು ಫಜೀತಿ. ಬೆಳೆದ ಬೆಳೆಗೆ ಕೀಟ ಬಾಧೆ, ಎಲ್ಲಿ ನೋಡಿದರೂ ಮಿಡತೆಗಳೇ.

ರಾಜನಿಗೆ ಮತ್ತೆ ರೈತರಿಂದ ದೂರು ನಮ್ಮ ಬೆಳೆಯನ್ನು ಕೀಟಗಳು ತಿನ್ನುತ್ತಿವೆ ಹೀಗೆ ಆದರೆ ನಾವು ಸುಂಕ ಕಟ್ಟಲು ಆಗಲ್ಲ ಎಂದು. ಆಗ ರಾಜ ಮತ್ತೆ ಕೀಟ ತಿನ್ನಲು ಪಕ್ಷಿಗಳನ್ನು ಹುಡುಕಿತನ್ನಿ ಎಂದು ಸೇವಕರಿಗೆ ಆದೇಶಿಸುತ್ತಾನೆ. ಈ ಕಥೆಯ ಉದ್ದೇಶ ಇಷ್ಟೆ ಪ್ರಕೃತಿ ಒಂದನ್ನೊಂದು ಅವಲಂಬಿಸಿರುವಾಗ ಮಾನವನ ಆಸೆ ಬುರಕುತನಕ್ಕೆ ಏನೆನ್ನಬೇಕು.

ಸ್ಯಾನಿಟೈಸರ್ ಸಿಂಪಡಿಸಿ ತಿನ್ನುವ ಕಾಲ ಬಂದಿದೆ

ಸ್ಯಾನಿಟೈಸರ್ ಸಿಂಪಡಿಸಿ ತಿನ್ನುವ ಕಾಲ ಬಂದಿದೆ

ಒಂದು ಬೆಳೆಗೆ ಯಾವುದಾದರೂ ಕ್ರಿಮಿಗಳು ಬಂದು ಕಾಟ ಕೊಟ್ಟರೆ, ಅದನ್ನು ಇನ್ನೊಂದು ಕ್ರಿಮಿ ಅಥವಾ ಕೀಟಜಾತಿ ಬಂದು ತಿಂದು ವಾತಾವರಣದ ಸಮತೋಲನವನ್ನು ಜಾರಿಯಲ್ಲಿಡುತ್ತದೆ. ಮನುಷ್ಯ ಬೆಳೆಗಳಿಗೆ ರಾಸಾಯನಿಕ ಸಿಂಪಡಿಸುವುದರಿಂದ ನಾನಾ ಬಗೆಯ ನಿರಪಾಯಕಾರಿ, ಲಾಭಕಾರಕ ಕ್ರಿಮಿಕೀಟಗಳು ಕೂಡ ನಾಶವಾಗತೊಡಗಿದವು.

ಉದಾಹರಣೆಗೆ ಎಂಡೋಸಲ್ಫಾನ್ ದುರಂತ ಈಗಲೂ ಬೆಂಬಿಡದ ಭೂತನಂತೆ ಕಾಡುತ್ತಿದೆ. ಇಷ್ಟಾದರೂ ನಾವು ಎಚ್ಚೆತ್ತಿಲ್ಲ. ʼಎಣ್ಣೆ ಉಣ್ಣುವʼ ಸಂಕಟ ತಪ್ಪಿಲ್ಲ. ಈಗ ರಾಗಿಗೂ ಔಷಧ ಸಿಂಪಡಿಸುವ ಕಾಲ ಬಂದಿದೆ. ಪ್ರಸ್ತುತ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ತಿನ್ನುವ ಕಾಲ ಬಂದಿದೆ ಮುಂದೆ ಸ್ಯಾನಿಟೈಸರ್ ಸೇವಿಸಿ ಊಟ ಮಾಡುವ ಕಾಲ ಬಂದರೂ ಆಶ್ಚರ್ಯವಿಲ್ಲ.

ಜಾಗತಿಕ ಕಳವಳ ಸೃಷ್ಟಿ

ಜಾಗತಿಕ ಕಳವಳ ಸೃಷ್ಟಿ

ಐದನೇ ಜೀವನಾಶ 6.5 ಕೋಟಿ ವರ್ಷಗಳ ಹಿಂದೆ ನಡೆದಿದ್ದು, ಅದರಲ್ಲಿ ಡೈನೋಸಾರ್‌ಗಳು ನಾಶವಾಗಿದ್ದವು. ಆರನೇ ಸಮೂಹ ಜೀವನಾಶ ಈಗ, ಮಾನವನಿಂದಾಗಿ ನಡೆಯುತ್ತಿದೆ. ಸುಮಾರು ಶೇ.76ದಷ್ಟು ಸೇವಿಸಬಹುದಾದ ಆಹಾರಧಾನ್ಯಗಳ ಸಸ್ಯ ವೈವಿಧ್ಯವನ್ನು ಮಾನವ ಈಗಾಗಲೇ ನಾಶ ಮಾಡಿದ್ದಾನೆ. ಇಂದು ಜಗತ್ತಿನ ಶೇ.60 ಮಂದಿ ಕೇವಲ ಮೂರು ಧಾನ್ಯಗಳನ್ನು ಅವಲಂಬಿಸಿದ್ದಾರೆ. ಅಕ್ಕಿ, ಗೋಧಿ ಮತ್ತು ಜೋಳ. ಭಾರತದಲ್ಲಿ ಕೂಡ ಸಾವಿರಾರು ಭತ್ತದ ತಳಿಗಳು, ಜೋಳದ ತಳಿಗಳು, ಸಿರಿಧಾನ್ಯಗಳು ಎಲ್ಲವೂ ನಾಶವಾಗುತ್ತಾ ಬಂದಿವೆ. ಒಂದೊಂದು ಸಸ್ಯ, ಒಂದೊಂದು ಪ್ರಾಣಿ ನಾಶವಾದಂತೆ ಅದನ್ನು ಅವಲಂಬಿಸಿದ ಇನ್ನೂ ಹಲವು ಸಸ್ಯ- ಜೀವಿ- ಕ್ರಿಮಿ ಕೂಡ ನಾಶವಾಗುತ್ತವೆ.

ಗಾಳಿ ಎಲ್ಲರಿಗೂ ಬೇಕು, ಪೋಷಣೆ ಯಾರಿಗೂ ಬೇಡ

ಗಾಳಿ ಎಲ್ಲರಿಗೂ ಬೇಕು, ಪೋಷಣೆ ಯಾರಿಗೂ ಬೇಡ

2020ನ್ನು ಪರಿಸರ ವಿಜ್ಞಾನಿಗಳು "ಸೂಪರ್‌ ಇಯರ್' ಅಥವಾ "ಮಾಡು ಇಲ್ಲವೇ ಮಡಿ' ಕ್ರಿಯೆಗೆ ಆಸ್ಪದ ಮಾಡಿಕೊಡಲಿರುವ ವರ್ಷ ಎಂದು ಕರೆದಿದ್ದರು. 2011- 2020 ವಿಶ್ವಸಂಸ್ಥೆಯ ಜೀವವೈವಿಧ್ಯ ದಶಕವೆಂದು ಕರೆಯಲಾಗಿತ್ತು. ಸಾವಿರಾರು ಜೀವತಳಿಗಳು ವಿನಾಶದ ಅಂಚಿನಲ್ಲಿವೆ. ಜಾಗತಿಕ ತಾಪಮಾನ ಅಪಾಯಕಾರಿ ಮಟ್ಟ ಮುಟ್ಟಿದೆ. ಜಾಗತಿಕ ಪರಿಸರ ಪ್ರಾಕೃತಿಕ ತುರ್ತುಪರಿಸ್ಥಿತಿ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಎಲ್ಲ ಸರಿ ಇದ್ದಿದ್ದರೆ ಈ ಜೀವವೈವಿಧ್ಯದ ನೆನಪಿನ ಆಚರಣೆಗಳು ನಡೆಯಬೇಕಿತ್ತು. ಆದರೆ ಕೊರೊನಾ ಬಂದು ಮನುಷ್ಯನನ್ನು ಸುಮ್ಮನೆ ಕೂರಿಸಿದೆ.

ಒಟ್ಟಿನಲ್ಲಿ ನಿಸರ್ಗ ಎಂದರೆ ಪ್ರಶ್ನಾತೀತ ವಿಸ್ಮಯ. ಹಸಿರು ಕಾನನದ ನಡುವಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು, ಗರ್ಜಿಸುವ ಹುಲಿ, ಘೀಳಿಡುವ ಆನೆ ಎಲ್ಲವೂ ಅದ್ಭುತ. ಪ್ರಕೃತಿ ಎಲ್ಲರಿಗೂ ಬೇಕು, ಗಾಳಿ ಎಲ್ಲರಿಗೂ ಬೇಕು. ಆದರೆ ಪೋಷಣೆ ಯಾರಿಗೂ ಬೇಡ. ಈ ಜಗತ್ತಿನ ಸೌಂದರ್ಯ ಅಡಗಿರುವುದೇ ಜೀವ ವೈವಿಧ್ಯಗಳಿಂದಾಗಿ. ಆಹಾರ ಸರಪಣಿಯಲ್ಲಿ ಯಾವುದೇ ಕೊಂಡಿ ಕಳಚಿದರೂ ಈ ಭೂಮಿಗೆ ಅಪಾಯ ತಪ್ಪಿದ್ದಲ್ಲ. ಆಹಾರ ಸರಪಳಿಯ ಕೊಂಡಿ ಎಂದಿಗೂ ಮುರಿಯದಂತೆ, ಅಡಿಗಡಿಗೆ ಸಲಹೆ ಜತನ ಮಾಡುತ್ತಿರುವ ಸೃಷ್ಟಿಶಕ್ತಿಯೆದುರು ಮನುಷ್ಯ ತಲೆಬಾಗಲೇಬೇಕು.

English summary
Every year May 22nd is celebrated as International Biodiversity Day. Biodiversity Day was celebrated for the first time in December 1993.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X