ಹೆಸರು ಬೆಳೆಗೆ ಕೀಟ ಮತ್ತು ರೋಗ ಬಾಧೆ; ವಿಜ್ಞಾನಿಗಳ ಭೇಟಿ
ಗದಗ, ಜುಲೈ 16 : ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿದರು. ಹೆಸರು ಬೆಳೆಗೆ ಕೀಟ ಮತ್ತು ರೋಗ ಬಾಧೆ ಇರುವ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದರು.
Recommended Video
ಬೆಟಗೇರಿ ಹೊಬಳಿಯ ಚಿಕ್ಕೊಪ್ಪ, ಹಿರೇಕೊಪ್ಪ, ಹುಯಿಲಗೋಳ, ಗಾವರವಾಡ ಮುಂತಾದ ಗ್ರಾಮಗಳಿಗೆ ಕೀಟ ಮತ್ತು ರೋಗ ಬಾಧಿತ ಕ್ಷೇತ್ರಗಳನ್ನು ವಿಜ್ಞಾನಿ ಡಾ. ಎಸ್. ಪಿ. ಹುಂಡೇಕರ ಇವರೊಂದಿಗೆ ಕೃಷಿ ಅಧಿಕಾರಿ ಹೇಮಾ ಮೊರಬ ಮತ್ತು ಸಹಾಯಕ ಕೃಷಿ ಅಧಿಕಾರಿ ಎಮ್. ಜಿ. ಬೆಟದೂರ ವೀಕ್ಷಿಸಿದರು
ಹೊಲದಲ್ಲಿಯೇ ರೈತರ ಜೊತೆ ಚರ್ಚೆಗಳನ್ನು ನಡೆಸಿದ ವಿಜ್ಞಾನಿಗಳು ವಿವಿಧ ಬೆಳೆಗಳ ರೋಗ ಮತ್ತು ಕೀಟಗಳ ನಿರ್ವಹಣಾ ಕ್ರಮಗಳ ಕುರಿತು ರೈತರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು.

ಹೆಸರಿನಲ್ಲಿ ಹಳದಿ ರೋಗದ ಬಾಧೆಗೊಳಗಾದ ಗಿಡಗಳನ್ನು ಗುರುತಿಸಿ ಅವುಗಳನ್ನು ಕಿತ್ತು ಮಣ್ಣಿನಲ್ಲಿ ಹೂಳಬೇಕು. ನಂತರ ಥೈಯೊಮಿಥಾಕ್ಸಾಮ್ 0.25 ಗ್ರಾಮ್ ಅಥವಾ ನಿಂಬಿಡಿನ್ 2.5 ಎಮ್.ಎಲ್. ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕು ಎಂದರು.
ಗೋವಿನ ಜೋಳದ ಪಾಲ ಸೈನಿಕ ಹುಳುವಿನ ಹತೋಟಿಗೆ ಎಮಾಮೆಕ್ಟಿನ್ ಬೆಂಜೋಯೇಟ 0.25 ಗ್ರಾಮ್ ಅಥವಾ ಕ್ಲೋರ್ಯಾಂಟಿನಿಲಿಪ್ರೊಲ 0.2 ಎಮ್.ಎಲ್. ಪ್ರತಿ ಲೀಟರ್ ನೀರಿಗೆ ಬೆರಸಿ ಸುಳಿಗೆ ನೇರವಾಗಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದರು.

ವಿಜ್ಞಾನಿ ಮತ್ತು ಅಧಿಕಾರಿಗಳು ಶೇಂಗಾ ಕ್ಷೇತ್ರಕ್ಕೆ ಭೇಟಿ ನೀಡಿದರು. ರೈತರಿಗೆ ಸೊರಗು ರೋಗದ ಬಾಧೆಗೆ ಒಳಗಾದ ಗಿಡಗಳನ್ನು ತೋರಿಸಿ, ಲಕ್ಷಣಗಳನ್ನು ತಿಳಿಸಿ, ರೋಗ ಬಾಧಿತ ಗಿಡಗಳನ್ನು ವಿಟಾವಾಕ್ಸ ಪುಡಿ 3 ಗ್ರಾಮ್/ಲೀಟರ್ ಮಿಶ್ರಣದಿಂದ ಚೆನ್ನಾಗಿ ತೊಯಿಸಬೇಕು ಎಂದು ಸಲಹೆ ನೀಡಿದರು.
ಹತ್ತಿಯಲ್ಲಿ ರಸ ಹೀರುವ ಕೀಟಗಳಿಗೆ ಪಿಪ್ರೊನಿಲ್ 2 ಎಮ್.ಎಲ್. ಅಥವಾ ಪೊನಿಕ್ ಅಮೈಡ 0.3 ಗ್ರಾಮ್ ಅಥವಾ ಇಮಿಡಾಕ್ಲೊಪ್ರಿಡ್ 0.3 ಎಮ್.ಎಲ್. ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಿಸಬೇಕು ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.












Click it and Unblock the Notifications