ಕಾಂಗ್ರೆಸ್- ಎನ್ ಸಿಪಿ patch-up ಆಯ್ತಾ?

ಪಕ್ಷದ ಅಧಿನಾಯಕ ಶರದ್ ಪವಾರ್ ಮತ್ತು ಸ್ವತಃ ತಮ್ಮ ರಾಜೀನಾಮೆ ಬಗ್ಗೆ ಎದ್ದಿರುವ ಊಹಾಪೋಹದ ಬಗ್ಗೆ ಮಾತನಾಡಿದ ಪ್ರಫುಲ್ ಪಟೇಲ್ ಅವರು ರಾಜೀನಾಮೆ ಮತ್ತು NCPಯ ಭಾವನೆಗಳನ್ನೊಳಗೊಂಡ ಸಮಗ್ರ ವಿಚಾರದ ಬಗ್ಗೆ ಶರದ್ ಪವಾರ್ ಅವರು ಪ್ರಧಾನಿ ಸಿಂಗ್ ಗೆ ಪತ್ರ ಬರೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
UPA ಮೈತ್ರಿಯಿಂದ NCP ಹೊರಬರುವ ಕುರಿತು ಶರದ್ ಪವಾರ್ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ತುರ್ತು ಸಭೆ ನಡೆಸಿದ ಬಳಿಕ ಸಚಿವ ಪ್ರಫುಲ್ ಪಟೇಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪವಾರ್-ಪಟೇಲ್ ರಾಜೀನಾಮೆ ನೀಡಿಲ್ಲ : ಕಾಲಕಾಲಕ್ಕೆ ಕಾಂಗ್ರೆಸ್ ಪಕ್ಷದ 'ನಿರ್ದಿಷ್ಟ ಗುಂಪು' NCP ತೇಜೋವಧೆಯಲ್ಲಿ ತೊಡಗಿದೆ. ಇದನ್ನು ಸಹಿಸಲಾಗದು. ಕಾಂಗ್ರೆಸ್ ತಮ್ಮ ಪಕ್ಷಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ ಸಚಿವ ಪ್ರಫುಲ್ ಪಟೇಲ್ ತಾವಿಬ್ಬರೂ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಕ್ಷಿಪ್ರ ದಂಗೆಯೆದ್ದ ಕೃಷಿ ಸಚಿವ ಶರದ್ ಪವಾರ್ ಅವರು ಭರ್ಜರಿ 'ಫಸಲು' ಗಳಿಸಿದ್ದಾರೆ ಎನ್ನಲಾಗಿದೆ.
ಹಿಂದಿನ ಸುದ್ದಿ:
ರಾಹುಲ್ ಗಾಂಧಿ ಪ್ರಧಾನಿ ಕುರ್ಚಿ ಮೇಲೆ ಟವಲ್ ಹಾಕಲು ಹವಣಿಸುತ್ತಿರುವ ಬೆನ್ನಲ್ಲೇ ಯುಪಿಎ ಮೈತ್ರಿಕೂಟದಲ್ಲಿ ಕಾಣಿಸಿಕೊಂಡ ಬಿರುಕು ದೊಡ್ಡದಾಗಿದೆ.
'ನಂಬರ್ ಟು' ಸ್ಥಾನ ತನಗೇ ಸಲ್ಲಬೇಕು ಎಂದು ಹಠ ಹಿಡಿದಿರುವ ಕೇಂದ್ರ ಸಚಿವ ಶರದ್ ಪವಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಜತೆಗೆ, ಭಾರಿ ಕೈಗಾರಿಕೆ ಸಚಿವ ಪ್ರಫುಲ್ ಪಟೇಲ್ ಅವರೂ ರಾಜೀನಾಮೆ ನೀಡಲಿದ್ದಾರೆ. ಇಂದು ಬೆಳಗ್ಗೆ ಇಬ್ಬರೂ ಕಾಂಗ್ರೆಸ್ ಅಧ್ಯೆಕ್ಷೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸೋನಿಯಾ ಭೇಟಿ ಮುಗಿಯುತ್ತಿದ್ದಂತೆ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು NCP ಧುರೀಣರು ಶರದ್ ಪವಾರ್ ಅವರ ನಿವಾಸದಲ್ಲಿ ಸಭೆ ಸೇರಿದ್ದಾರೆ.
ಶರದ್ ಪವಾರ್ ರಾಜೀನಾಮೆ ಮತ್ತು ಯುಪಿ ಎ ಮೈತ್ರಿಕೂಟದಿಂದ ಎನ್ ಸಿಪಿ ದೂರವಾಗುತ್ತಿರುವ ಈ ಘಳಿಗೆಯಲ್ಲಿ ತಕ್ಷಣಕ್ಕೆ ಹಮೀದ್ ಅನ್ಸಾರಿ ಮತ್ತೊಮ್ಮೆ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಕಗ್ಗಂಟಾಗಲಿದೆ. ಇನ್ನು,ಎನ್ ಡಿಎ ಅಭ್ಯರ್ಥಿ ಜಸ್ವಂತ್ ಸಿಂಗ್ ಅವರಿಗೆ ಅನಾಯಾಸವಾಗಿ ಉಪ ರಾಷ್ಟ್ರಪತಿ ಸ್ಥಾನ ದಕ್ಕುವ ಸಾಧ್ಯತೆಗಳಿವೆ.
ಪ್ರಧಾನಿ ನಂತರದ ಸ್ಥಾನ ಶರದ್ ಪವಾರಿಗೂ?: ಯುಪಿಎ ಸರಕಾರದಲ್ಲಿ ಸೂಕ್ತ ಸ್ಥಾನಮಾನ ಕೋರಿ ಹಠ ಹಿಡಿದಿರುವ NCP ನಾಯಕ ಶರದ್ ಪವಾರ್ ಅವರನ್ನು ಸಮಧಾನಪಡಿಸಲು ಮೇಡಂ ಸೋನಿಯಾ ಕಸರತ್ತು ಆರಂಭಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ತ್ರಿ ಸದಸ್ಯರ ಸಮಿತಿ ರಚನೆಯಾಗಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಸದ್ಯದಲ್ಲೇ ಮಾತುಕತೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಈ ಮಧ್ಯೆ, ನಂಬರ್ ಟು ಸ್ಥಾನವನ್ನು (ಪ್ರಸ್ತುತ ಆಂಟನಿ) ತಾನೇ ಉಳಿಸಿಕೊಂಡರೂ ಪ್ರಧಾನಿ ಸಿಂಗ್ ಹೊರ ರಾಷ್ಟ್ರಗಳಿಗೆ ಹೋದಾಗ ಸರಕಾರವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಪವಾರ್ ಅವರಿಗೂ ವಹಿಸಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.
ರಾಜೀನಾಮೆಗೆ ಕಾರಣವೇನು?:
ಮುಖ್ಯವಾಗಿ NCP ಮತ್ತು ಅದರ ನಾಯಕ ಶರದ್ ಪವಾರ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂಬುದು ತಿರುಳು. ಕೇಂದ್ರ ಸಂಪುಟದ ಅನೇಕ ಮಹತ್ವದ ಸಮಿತಿಗಳಲ್ಲಿ NCPಗೆ ಮಣೆಹಾಕುತ್ತಿಲ್ಲ ಎಂಬ ಕೊರಗೂ ಕಾಡಿದೆ. ಪ್ರಣಬ್ ದಾ ಅವರಿಂದಾಗಿ ತೆರವಾಗಿರುವ ಲೋಕಸಭೆ ಆಡಳಿತ ಪಕ್ಷದ ನಾಯಕನ ಸ್ಥಾನವನ್ನು ತನಗೆ (NCP, ಶರದ್ ಪವಾರ್ ) ಕೊಡದೆ ರಕ್ಷಣಾ ಸಚಿವ ಆಂಟನಿಗೆ ಪ್ರಾಪ್ತಿಯಾಗಿರುವುದು NCPಯನ್ನು ಕೆರಳಿಸಿದೆ.
NCPಯ ಶರದ್ ಪವಾರ್ ಅವರು ಮೂರು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದವರು. ಪಿವಿ ನರಸಿಂಹ ರಾವ್ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ಅಲ್ಲಿಂದ ಮುಂದಕ್ಕೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿಯೂ ಪರಿಗಣಿತರಾಗಿದ್ದರು.












Click it and Unblock the Notifications