Coconut Farming: ತೆಂಗು ಇಳುವರಿ ಹೆಚ್ಚಾಗಲು ಮಳೆಗಾಲದಲ್ಲಿ ಹೀಗೆ ಮಾಡಿ
ತಡವಾಗಿಯಾದರೂ ಮುಂಗಾರು ಚುರುಕಗೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಅಡಿಕೆ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೂ ಕೂಡ ಹಾರೈಕೆ ಮಾಡುವ ಮೂಲಕ ಇಳುವರಿ ಹೆಚ್ಚಿಸಬಹುದು.
ತೆಂಗು ಕೃಷಿಯಲ್ಲಿ ಇಳುವರಿ ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು, ಅದರಲ್ಲೂ ಸಾವಯವ ರೀತಿಯಲ್ಲೇ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ಇಳುವರಿಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬಹುದಾಗಿದೆ.

ಎಳನೀರು, ತೆಂಗು ಇಳುವರಿ ಬರುತ್ತಿರುವ ಮರಗಳಿಗೆ ಈ ರೀತಿಯ ಆರೈಕೆ ಮಾಡುವುದು ಮರಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಸಾವಯವ ವಿಧಾನ ಆಗಿರುವುದರಿಂದ ತೋಟಕ್ಕೂ ಉತ್ತಮವಾಗಿರುತ್ತದೆ.
ಈ ರೀತಿ ಮಾಡಿ
ಮೈಸೂರು ಜಿಲ್ಲೆಯ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕರಾದ ಯೋಗೇಶ್ ಜಿ.ಹೆಚ್. ಈ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ತೆಂಗು ಆರೈಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
ತೆಂಗಿನ ಗಿಡಗಳ 4 ಅಡಿ ಸುತ್ತ ಬೆಳೆದಿರುವ ಕಳೆಗಳನ್ನು ಕಿತ್ತು ತೆಳ್ಳಗೆ ಪಾತಿ ಮಾಡಿ ಇಳಿಜಾರಿಗೆ ಅಡ್ಡಲಾಗಿ, ಗಿಡಗಳ ಕೆಳಭಾಗದಲ್ಲಿ ಅರ್ಧಚಂದ್ರಾಕೃತಿ ಮಣ್ಣಿನ ಬದು ಹಾಕಿದರೆ ಮೇಲಿಂದ ಹರಿದು ಬರುವ ಮಳೆನೀರು ನಿಲ್ಲಲು ಅನಕೂಲವಾಗಿ ತೆಂಗಿನ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. (ಆಳವಾಗಿ ಕೊಚ್ಚುವುದು ಬೇಡ)

ಕಳೆಗಳನ್ನು ಕಿತ್ತು ಪಾತಿ ಮಾಡಿದ ನಂತರ 2 ಕೆ.ಜಿ. ಅಲಸಂದೆ, 2 ಕೆ.ಜಿ. ಸೆಣಬು, 2 ಕೆ.ಜಿ. ಹುರುಳಿ ಬೆರೆಸಿಕೊಂಡು ಒಂದು ರಾತ್ರಿ ನೆನೆಸಿಟ್ಟು ಪ್ರತೀ ಗಿಡದ ಪಾತಿಯಲ್ಲಿ ಕಾಲು ಕೆ.ಜಿ. ನೆನೆಸಿದ ಬೀಜಗಳನ್ನು ಪಾತಿಯಲ್ಲಿ ಚೆಲ್ಲಿ ಅದರ ಮೇಲೆ ಎರಡು ಬುಟ್ಟಿ ತಿಪ್ಪೆಗೊಬ್ಬರ ಹಾಕಬೇಕು. ಮಳೆ ಬಂದನಂತರ ಈ ಬೀಜಗಳು ಹುಟ್ಟಿ ಹುಲುಸಾಗಿ ಬೆಳೆದು ಹಸಿರೆಲೆ ಗೊಬ್ಬರವಾಗುತ್ತದೆ.
ಇದರಿಂದ ಆಗುವ ಅನುಕೂಲ:
ಇದರಿಂದ ತೆಂಗಿನ ಗಿಡದ ಸುತ್ತಲೂ ಕಳೆಗಳು ನಿಯಂತ್ರಣವಾಗುತ್ತವೆ. ಸಾವಯವ ಸಾರಜನಕ ಲಭ್ಯವಾಗಿ ಮಳೆನೀರು ಇಂಗುವ ಮೂಲಕ ಸಾವಯುವ ಇಂಗಾಲದ ಪ್ರಮಾಣ ಹೆಚ್ಚಾಗುತ್ತದೆ.
ಇದರಿಂದ ಎರೆಹುಳು ಪ್ರಮಾಣ ಹೆಚ್ಚಾಗಿ, ಇಳುವರಿಯಲ್ಲಿ ಹೆಚ್ಚಳ ಉಂಟಾಗುತ್ತದೆ. ವರ್ಷಪೂರ್ತಿ ಎಳನೀರು, ಕಾಯಿ, ಕೊಬ್ಬರಿ ನೀಡುವ ತೆಂಗಿನ ಮರಕ್ಕೆ ಇದೊಂದು ಉಪಯುಕ್ತ ಆರೈಕೆಯಾಗಿದೆ.
5 ವರ್ಷ ಮೇಲ್ಪಟ್ಟ ಮರಗಳ ಆರೈಕೆ
ಇನ್ನು 5 ವರ್ಷ ಮೇಲ್ಪಟ್ಟ ಮೇಲ್ಪಟ್ಟ ಮರಗಳ ನಿರ್ವಹಣೆ ಮಾಡಲು. ತೆಂಗಿನ ಮರದ 5 ಅಡಿ ಸುತ್ತಳತೆಯಲ್ಲಿ ಕಳೆ ಕಿತ್ತು ಮಳೆ ನೀರು ನಿಲ್ಲುವಂತೆ ಮಾಡಿ ಬದು ಹಾಕಬೇಕು.
ಪ್ರತಿಗಿಡಕ್ಕೆ 50 ಕೆ.ಜಿ ತಿಪ್ಪೆಗೊಬ್ಬರ, 5 ಕೆ.ಜಿ. ಬೇವಿನಹಿಂಡಿ, 50 ಗ್ರಾಂ ಎನ್‌ಪಿಕೆ ಕನ್ಸಾರ್ಶಿಯ ಹಾಕಿ 100 ಗ್ರಾಂ ಅಲಸಂದೆ/ಹುರುಳಿ ಬಿತ್ತನೆ ಮಾಡಬಹುದು.
ರಸಗೊಬ್ಬರ ನಿರ್ವಹಣೆ: 1 ಕೆ.ಜಿ. 20:20:0:13, 1 ಕೆ.ಜಿ. ಪೊಟ್ಯಾಶ್, ಜಿಪ್ಸಂ/ಸುಣ್ಣ 250 ಗ್ರಾಂ, ಮೆಗ್ನೀಶಿಯಂ ಸಲ್ಫೇಟ್ 100 ಗ್ರಾಂ, ಜಿಂಕ್ ಸಲ್ಫೇಟ್ 50 ಗ್ರಾಂ, ಬೋರಾಕ್ಸ್ ಹಾಕಿ ಮಣ್ಣಿನ ಮಿಶ್ರಣ ಮಾಡಿ ಬೆಳೆ ತ್ಯಾಜ್ಯದಿಂದ ಮಲ್ಚಿಂಗ್ ಮಾಡಬಹುದು. ಸಾಧ್ಯವಾದರೆ ವರ್ಷಕ್ಕೆ ಎರಡು ಬಾರಿ ಜೀವಾಮೃತ ನೀಡಬಹುದು.












Click it and Unblock the Notifications