ತೋಟದಲ್ಲಿ ಕೆಂಪಿರುವೆ, ಗೆದ್ದಲು ಕಾಟ ಹೆಚ್ಚಾಗಿದೆಯಾ? ಇಲ್ಲಿದೆ ಪರಿಹಾರ
ಕೆಂಪಿರುವೆ ಅಥವಾ ಕೆಂಜಿಗಗಳು ಗಿಡಗಳಿಗೆ ಏನೂ ಹಾನಿ ಮಾಡುವುದಿಲ್ಲ. ಬದಲಾಗಿ ತೋಟಗಳಲ್ಲಿ ಕೋತಿಗಳ ಹಾವಳಿಯನ್ನು ಕಡಿಮೆ ಮಾಡುತ್ತವೆ. ಕೋತಿಗಳ ಕೂದಲಲ್ಲಿ ಇವು ಸೇರಿಕೊಂಡು ಕಚ್ಚುವುದರಿಂದ ಕೋತಿಗಳು ತೋಟದ ಕಡೆ ಬರುವುದಿಲ್ಲ.
ಮಾವಿನ ತೋಟದಲ್ಲಿ ಮರಿ ಮತ್ತು ನೊಣಗಳನ್ನು ತಿನ್ನುವ ಮೂಲಕ ಹಣ್ಣು ನೊಣದ ಬಾಧೆಯನ್ನು ಕಡಿಮೆ ಮಾಡುತ್ತವೆ. ಆದರೂ ರೈತರು, ಕೆಲಸಗಾರರಿಗೆ, ಅಡಿಕೆ, ತೆಂಗು ಕೊಯ್ಲು ಮಾಡುವಾಗ ಇವು ಕಚ್ಚುವುದರಿಂದ ಹಲವರು ಭಯಪಡುತ್ತಾರೆ. ಕೆಂಜಿರುವೆ ಕಾಟದಿಂದ ಬೇಸತ್ತಿದ್ದರೆ ಅವುಗಳ ನಿಯಂತ್ರಣಕ್ಕೆ ಈ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಮೈಸೂರು ಜಿಲ್ಲೆಯ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕರಾದ ಯೋಗೇಶ್ ಜಿ.ಹೆಚ್. ಈ ಮಾಹಿತಿಯನ್ನು ಹಂಚಿಕೊಂಡಿದ್ದು ಕೆಂಜಿರುವೆ ಮತ್ತು ಗೆದ್ದಲುಗಳನ್ನು ನಿಯಂತ್ರಿಸುವ ಕ್ರಮಗಳನ್ನು ಹಂಚಿಕೊಂಡಿದ್ದಾರೆ.
ಕೆಂಜಿರುವೆ ನಿಯಂತ್ರಣ ವಿಧಾನ
ಸಣ್ಣ ಕೆಂಪುಬಣ್ಣದ ಇರುವೆಗಳನ್ನು ಸಾಕುವುದರಿಂದ ಕೆಂಜಿರುವೆಗಳನ್ನು ನಿಯಂತ್ರಿಸಬಹುದಾಗಿದೆ. ರಸ ತೆಗೆದ ಕಬ್ಬಿನ ಜಲ್ಲೆಗಳನ್ನು ಜಮೀನಿನಲ್ಲಿ ಹಾಕುವ ಮೂಲಕ ಸಣ್ಣ ಕೆಂಪು ಇರುವೆಗಳು ಜಾಸ್ತಿಯಾಗುತ್ತವೆ. ಸಣ್ಣ ಕೆಂಪು ಇರುವೆ ಸಂಖ್ಯೆ ಹೆಚ್ಚಾದರೆ ದೊಡ್ಡ ಕೆಂಪಿರುವೆಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ಗೂಡುಗಳನ್ನು ಕತ್ತರಿಸಿ ತೆಗೆದು ಹಾಕಿದರೆ ದೊಡ್ಡ ಕೆಂಜಿರುವೆಗಳು ಮತ್ತೆ ಬರುವುದಿಲ್ಲ.
ಒಂದು ಲೀಟರ್ ನೀರಿಗೆ 10 ಗ್ರಾಂ ನೀಮ್ ಸೋಪು / ಹೊಂಗೆ ಸೋಪು ಅಥವಾ ಬೇವಿನ ಕೀಟನಾಶಕ ಬೆರೆಸಿ ಕೆಂಪಿರುವೆ ಗೂಡು ಮತ್ತು ಮರಗಳಿಗೆ ಚೆನ್ನಾಗಿ ಸಿಂಪಡಿಸಿದರೆ ಇವುಗಳ ಬಾಧೆಯನ್ನು ಕಡಿಮೆ ಮಾಡಬಹುದು.
ಸಕ್ಕರೆ ಪಾಕದಲ್ಲಿ ಬೋರಿಕ್ ಪೌಡರ್ ಮಿಶ್‌ರಣ ಮಾಡಿ ಹಾನಿಗೀಡಾದ ಮರಗಳ ಕಾಂಡಗಳಿಗೆ ಹಚ್ಚಿದರೆ ಕೆಂಪಿರುವೆಗಳು ಸೇವಿಸಿ ಸಾಯುತ್ತವೆ.
ಗೆದ್ದಲು ನಿಯಂತ್ರಣ ಮಾಡಲು ಜೈವಿಕ ಕ್ರಮಗಳು
ಹಲವು ಸಂದರ್ಭಗಳಲ್ಲಿ ಅಂತರ್ಜಲ ಮಟ್ಟ ಗುರುತಿಸಲು ಮತ್ತು ಹೆಚ್ಚಿಸಲು, ಮಣ್ಣಿನ ರಚನೆ ಚೃದ್ಧಿಸಲು, ಕಸಕಡ್ಡಿಗಳು ಬೇಗನೆ ಕೊಳೆಯುವಂತೆ ಮಾಡಲು ಗೆದ್ದಲು ಕೃಷಿ ಮತ್ತು ರೈತನಿಗೆ ಸಹಕಾರಿಯಾಗಿದೆ. ಆದರೂ ಕೆಲವು ಸಂದರ್ಭದಲ್ಲಿ ಗಿಡಗಳಿಗೆ ಬಾಧಿಸಿ ರೈತರಿಗೆ ತೊಂದರೆ ಕೊಡುತ್ತದೆ. ಗೆದ್ದಲುಗಳ ನಿಯಂತ್ರಣಕ್ಕೆ ಯಾವುದೇ ರಾಸಾಯನಿಕಗಳನ್ನು ಬಳಸಬಾರದು ಎಂದು ಕೃಷಿ ಅಧಿಕಾರಿಗಳು ಮನವಿ ಮಾಡುತ್ತಾರೆ.
ಪ್ರತಿ ಲೀಟರ್ ನೀರಿನಲ್ಲಿ 5-10 ಗ್ರಾಂ ಮೆಟರೈಸಿಯಂ ಅನಿಸೋಪ್ಲಿಯೆ ಎಂಬ ಜೈವಿಕ ಕೀಟ ನಾಶಕ ಸಿಂಪಡನೆ ಮಾಡುವ ಮೂಲಕ ಗೆದ್ದಲನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಇದು ಕಡಿಮೆ ವೆಚ್ಚ ಮತ್ತು ರಾಸಾಯನಿಕ ಮುಕ್ತ ವಿಧಾನವಾಗಿದೆ.
ಮೆಟರೈಸಂ ಅನ್ನು ಹತ್ತಿರದ ಕೃಷ ವಿಶ್ವ ವಿದ್ಯಾನಿಯಲ, ಕೃಷಿ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಪಡೆಯಬಹುದು. ಮಣ್ಣಿನಲ್ಲಿ ತೇವಾಂಶವಿದ್ದು, ವಾತಾವರಣ ತಂಪಾಗಿರುವಾಗ ಅಂದರೆ ಡಿಸೆಂಬರ್-ಜನವರಿ ತಿಂಗಳಿನಲ್ಲಿ ಎಕರೆಗೆ 3-5 ಕೆಜಿ ಮೆಟರೈಸಿಯಂ ಅನ್ನು ನೀರಿನಲ್ಲಿ ಕರಗಿಸಿ ಮರಗಳಿಗೆ, ತ್ಯಾಜ್ಯಗಳಿಗೆ, ಮಣ್ಣಿಗೆ ಮತ್ತು ಗೆದ್ದಲಿನ ಗೂಡುಗಳಿಗೆ ಸಿಂಪಡನೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಗೆದ್ದಲು ನಿರ್ವಹಣೆಗೆ ಬ್ಯೂವೇರಿಯಾ ಬಾಸಿಯಾನ ಎನ್ನುವ ಜೂವಿಕ ಕೀಟನಾಶಕವನ್ನು ಬಳಸಬಹುದು ಎಂದು ಶಿಫಾರಸ್ಸು ಮಾಡಲಾಗಿದೆ.












Click it and Unblock the Notifications