ಮಾರ್ಚ್ 5ರಿಂದ ಬೆಂಗಳೂರಿನಲ್ಲಿ ತೋಟಗಾರಿಕಾ ಮೇಳ
ಬೆಂಗಳೂರು, ಮಾರ್ಚ್ 03: ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮೂರು ದಿನಗಳ ತೋಟಗಾರಿಕೆ ಮೇಳ 2024 ಆಯೋಜನೆ ಮಾಡಲಾಗಿದೆ.
ಈ ಬಾರಿಯ ತೋಟಗಾರಿಕೆ ಮೇಳವನ್ನು 'ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು' ಎಂಬ ಶೀರ್ಷಿಕೆಯಡಿ ಆಯೋಜನೆ ಮಾಡಲಾಗಿದೆ. ಮಾರ್ಚ್ 5, 6 ಮತ್ತು 7ರಂದು ತೋಟಗಾರಿಕೆ ಮೇಳ ನಡೆಯಲಿದೆ.

ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಿಂದಲೂ ಸಹ ರೈತರು, ಆಸಕ್ತರು ಆಗಮಿಸುತ್ತಾರೆ. ಆದ್ದರಿಂದ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಐಸಿಎಆರ್ ಉಪ ಪ್ರಧಾನ ವ್ಯವಸ್ಥಾಪಕ (ತೋಟಗಾರಿಕೆ ವಿಜ್ಞಾನ) ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸ್ಟಾರ್ಟ್ ಅಪ್‌ಗಳಿಗೆ ಆದ್ಯತೆ: ತೋಟಗಾರಿಕೆ ಕ್ಷೇತ್ರದಲ್ಲಿ ಯುವ ರೈತರು ಹಾಗೂ ತಂತ್ರಜ್ಞರಿಗೆ ಪ್ರೋತ್ಸಾಹ ನೀಡಲು ಈ ಬಾರಿ ಸ್ಟಾರ್ಟಪ್‌ಗಳಿಗೆ ಒತ್ತು ನೀಡಲಾಗಿದೆ. ಬೀಜ ಸಂಸ್ಕರಣಾ ಘಟಕ, ಇನ್‌ಕ್ಯುಬೇಷನ್ ಸೆಂಟರ್‌ಗಳ ಬಗ್ಗೆಯೂ ಆಸಕ್ತರಿಗೆ ಮೇಳದಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆ ಮಿಲೆಟ್ ಜ್ಯೂಸ್. ಈಗಾಗಲೇ ಡ್ರ್ಯಾಗನ್ ಪ್ರೂಟ್ ತಳಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸುತ್ತಿದೆ. ಇದೀಗ ಈ ಹಣ್ಣಿಗೆ ಕೆಲವು ಸಿರಿಧಾನ್ಯಗಳನ್ನು ಮಿಶ್ರಣ ಮಾಡಿ ಮಿಲೆಟ್ ಜ್ಯೂಸ್ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ವಿಶಿಷ್ಟ ರುಚಿ ಮತ್ತು ಅನುಭವ ನೀಡುವ ಈ ಜ್ಯೂಸ್ ಮೇಳದ ಆಕರ್ಷಣೆಯಾಗಿದೆ.
ಈ ಬಾರಿಯ ತೋಟಗಾರಿಕೆ ಮೇಳದಲ್ಲಿ 300ಕ್ಕೂ ಅಧಿಕ ಮಳಿಗೆಗಳು ಇರಲಿವೆ. ಹೊಸ ತಳಿಗಳು, ಹೊಸ ಆವಿಷ್ಕಾರಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗುತ್ತದೆ. ಈರುಳ್ಳಿ ನಾಟಿ ಮಾಡುವ ಯಂತ್ರ, ಅಧಿಕ ಇಳುವರಿಯ ಆರ್ಕಾ ನಿಹಿರ ಮೆಣಸಿನಕಾಯಿ ಹಾಗೂ ಆರ್ಕಾ ಬೃಂಗರಾಜ ಸೊರಗು ರೋಗ ನಿರೋಧಕ ತಳಿಗಳನ್ನು ಮೇಳದಲ್ಲಿ ಕಾಣಬಹುದು.
ಸ್ಮಾರ್ಟ್ ನೀರಾವರಿ, ಸಸ್ಯ ಆರೋಗ್ಯ ಕ್ಲಿನಿಕ್, ಸಸಿಗಳನ್ನು ಖರೀದಿ ಮಾಡಲು ಮಾಲ್ ಮಾದರಿಯ ನರ್ಸರಿ ವ್ಯವಸ್ಥೆಯನ್ನು ಮೇಳದಲ್ಲಿ ಮಾಡಲಾಗಿದೆ. ಮೇಳದಲ್ಲಿ ಪಾಳ್ಗೊಳ್ಳಲು ಆನ್‌ಲೈನ್ ಮೂಲಕ ನೋಂದಣಿ ವ್ಯವಸ್ಥೆ ಮಾಡಲಾಗಿದೆ. 150ಕ್ಕೂ ಮಳಿಗೆಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ.
ತೋಟಗಾರಿಕೆ ಮೇಳದ ಕುರಿತು ರೈತರಿಗೆ ಮಾಹಿತಿ ನೀಡಲು ಮತ್ತು ಸಹಾಯಕ್ಕಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 9403891704 ಆಗಿದೆ.












Click it and Unblock the Notifications