ಜನರನ್ನು ಸೆಳೆದ ತೋಟಗಾರಿಕಾ ಇಲಾಖೆ ಫಲಪುಷ್ಪ ಪ್ರದರ್ಶನ
ಕೊಪ್ಪಳ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ತೋಟಗಾರಿಕೆಯ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ಕೊಪ್ಪಳ, ಮಾರ್ಚ್ 12; ಕೊಪ್ಪಳ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸಹಾಯ ಪಡೆದು ರೈತರು ಬೆಳೆದ ದಾಳಿಂಬೆ, ದ್ರಾಕ್ಷಿ, ಕಲ್ಲಂಗಡಿ, ಬಾಳೆ, ಪಪ್ಪಾಯ, ಮೋಸಂಬಿ, ಸೀತಾಫಲ, ಅಂಜೂರ ಹಾಗೂ ವಿವಿಧ ಬಗೆಯ ಹೂ, ಹಣ್ಣು, ತರಕಾರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಈ ಪ್ರದರ್ಶನ ಜನರನ್ನು ತನ್ನತ್ತ ಸೆಳೆಯಿತು.
ಕೊಪ್ಪಳ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ತೋಟಗಾರಿಕೆಯ ಫಲಪುಷ್ಪ ಪ್ರದರ್ಶನ ಮಳಿಗೆಯು ಜನರನ್ನು ಸೆಳೆಯಿತು. ಜನರು ವಿವಿಧ ಹೂ, ಹಣ್ಣುಗಳನ್ನು ಉತ್ಸಾಹದಿಂದ ವೀಕ್ಷಿಸಿ ಮೊಬೈಲ್‌ಗಳಲ್ಲಿ ಫೋಟೋ ತೆಗೆದುಕೊಂಡರು. ಮಳಿಗೆ ವೀಕ್ಷಿಸಿದ ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತೋಟಗಾರಿಕೆ ಇಲಾಖೆ ರೂಪಿಸಿರುವ ಫಲಪುಷ್ಪ ಪ್ರದರ್ಶನವು ಕೊಪ್ಪಳ ಜನತೆಗೆ ಆಹ್ಲಾದಕರ ಅನುಭವ ನೀಡಿದೆ ಎಂದರು.

ಪ್ರದರ್ಶನದಲ್ಲಿ ವಿವಿಧ ಬಗೆಯ ಹೂ, ಹಣ್ಣುಗಳ ಮಾದರಿಗಳು ಗಮನ ಸೆಳೆಯುತ್ತಿವೆ. 4000 ವರ್ಷಗಳ ಇತಿಹಾಸ ಹೊಂದಿರುವ ಗಂಗಾವತಿ ತಾಲ್ಲೂಕಿನ ಚಿಕ್ಕ ಬೆಣಕಲ್ ಮಹಾಶಿಲಾ ತಾಣ ಮೋರೇರ ಬೆಟ್ಟದ ಮಹತ್ವ ಮತ್ತು ಇತಿಹಾಸ ತಿಳಿಸಲು ಸಾವಿರಾರು ಹೂಗಳನ್ನು ಜೋಡಿಸಿ ನಿರ್ಮಿಸಿದ್ದ ಮಾದರಿ ವಿಶೇಷವಾಗಿತ್ತು. ಕೊಪ್ಪಳ ಜಿಲ್ಲೆಯ ಮಾದರಿಯನ್ನು ಸಹ ವಿವಿಧ ಹೂಗಳನ್ನು ಜೋಡಿಸಿ ನಿರ್ಮಿಸಲಾಗಿದೆ.
50 ಮಾದರಿಯ ವಿವಿಧ ಬಣ್ಣದ ಗುಲಾಬಿ, ಜರ್ಬೇರಾ, ಸೇವಂತಿಗೆ, ಚೆಂಡೂ ಹೂ, ಕಾರ್ನೇಷೀಯನ್, ಲಿಲ್ಲಿ, ಪಿಟೋನಿಯಾ, ಜಿಪ್ಸೋಫಿಲಾ ಹಾಗೂ ವಿವಿಧ ಕುಂಡಗಳಲ್ಲಿ ಬೆಳೆದ ಅಲಂಕಾರಿಕ ಗಿಡಗಳಿಂದ ವಿವಿಧ ಮಾದರಿಗಳನ್ನು ಆಕರ್ಷಕವಾಗಿ ರಚಿಸಲಾಗಿದೆ. ಬೋನ್ಸಾಯಿ ಅಂದರೆ 15 ರಿಂದ 20 ವರ್ಷದ ಕುಬ್ಜ ಗಿಡಗಳನ್ನು ಅತ್ಯಂತ ಆಕರ್ಷಣೀಯವಾಗಿ ಗ್ರಾನೈಟ್ ಕಲ್ಲು ಕಂಬಗಳಿಂದ ಜೋಡಿಸಲಾಗಿದೆ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಕೆತ್ತಲಾಗಿದೆ.

ಹಳೆಯ ವಾಹನಗಳ ಟಾಯರ್‌ಗಳನ್ನು ಅಲಂಕಾರಿಕವಾಗಿ ವಿವಿಧ ಬಣ್ಣಗಳಿಂದ ವಿವಿಧ ಹೂಗಳನ್ನು ಕುಂಡಗಳಲ್ಲಿ ಜೋಡಿಸಲಾಗಿದೆ. ಹಳೆಯ ಬಾಟಲಿಗಳು, ವಿವಿಧ ಗಾಜಿನ ವಸ್ತುಗಳನ್ನು ಉಪಯೋಗಿಸಿ ವಿವಿಧ ಬಣ್ಣಗಳ ಹೂಗಳನ್ನು ಬಳಸಿ ಹೂ ದಾನಿಗಳನ್ನು ಜೋಡಿಸಲಾಗಿದೆ.
ಸೆಲ್ಫಿ ಪಾಯಿಂಟ್: ಹೃದಯದ ಆಕಾರದ ಆಕೃತಿ ನಿರ್ಮಿಸಿ, ವಿವಿಧ ಗುಲಾಬಿ ಹೂಗಳನ್ನು ಜೋಡಿಸಿ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದ್ದು, ಸಾಕಷ್ಟು ಯುವಕರಿಂದ ಎಲ್ಲಾ ವಯಸ್ಸಿನ ಜನರು ಸಂತೋಷದಿಂದ ಸೆಲ್ಫಿಯನ್ನು ತಾ ಮುಂದು ನಾ ಮುಂದು ಎಂದು ಫೋಟೋ ತೆಗೆಯಿಸಿಕೊಳ್ಳುವುದು ಕಂಡು ಬಂದಿತು. ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯ ಪಡೆದು ರೈತರು ಬೆಳೆದ ದಾಳಿಂಬೆ, ದ್ರಾಕ್ಷಿ, ಕಲ್ಲಂಗಡಿ, ಬಾಳೆ, ಪಪ್ಪಾಯ, ಮೋಸಂಬಿ, ವಾಟರ್ ಆಪಲ್, ಸೀತಾಫಲ, ಅಂಜೂರ ಹಾಗೂ ವಿವಿಧ ಬಗೆಯ ಹೂ, ಹಣ್ಣು, ತರಕಾರಿಗಳು ಹೊಸ ಬಗೆಯ ಹಣ್ಣುಗಳ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲು ಆಕರ್ಷಿಣಿಯವಾದ ರಟ್ಟಿನ ಡಬ್ಬಿಗಳನ್ನು ಸಹ ಪ್ರದರ್ಶನದಲ್ಲಿ ಇಡಲಾಗಿದ್ದು, ಇವುಗಳ ಮೇಲೆ ರೈತರ ಹೆಸರು, ಹಣ್ಣುಗಳು ಅವುಗಳ ವಿವಿಧ ತಳಿ, ಅಲ್ಲದೇ ದರ ಕೂಡ ಮುದ್ರಿಸಿದ್ದು, ರೈತರಿಗೂ, ಗ್ರಾಹಕರಿಗೂ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಎಲ್ಲಾ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿದೆ.
ಕೊಪ್ಪಳದಲ್ಲಿ ಪೇರಲೆ, ಪಪ್ಪಾಯ, ಮಾವು, ಕಲ್ಲಂಗಡಿ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ಬೆಳೆಯಲಾಗುತ್ತಿರುವ ಹತ್ತಾರು ಹಣ್ಣುಗಳ ವಿವಿಧ ತಳಿಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ಫೆಬ್ರವರಿ ತಿಂಗಳಿನಲ್ಲಿ ಹಣ್ಣುಗಳ ಮಹಾಮೇಳ-2023 ಆಯೋಜನೆ ಮಾಡಿತ್ತು. ಇದಕ್ಕೆ ರೈತರು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.












Click it and Unblock the Notifications