ಲಾಕ್‌ಡೌನ್ ಮಧ್ಯೆ ಕಲುಬುರ್ಗಿ ರೈತ ಆತ್ಮಹತ್ಯೆ: ಎಚ್‌ಡಿಕೆ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 31: ಕೊರೊನಾ ಸೋಂಕು ತಡೆಗಟ್ಟಲು ಇಡೀ ದೇಶಕ್ಕೆ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಸಹಜವಾಗಿ ದಿನಗೂಲಿ ಕಾರ್ಮಿಕರು, ರೈತರು, ಸಣ್ಣ ಪುಟ್ಟ ಕೈಗಾರಿಕೆಗಳಿಗೆ ಭಾರಿ ಸಂಕಷ್ಟ ಎದುರಾಗಲಿದೆ. ಇಂತಹ ಪರಿಸ್ಥಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ನಡುವೆ ಕಲುಬುರ್ಗಿಯಲ್ಲೊಬ್ಬ ರೈತ ತಾನು ಬೆಳೆದ ಕಲ್ಲಂಗಡಿ ಹಣ್ಣನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಈ ಘಟನೆಗೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಸಮಸ್ಯೆ ಬಗೆಹರಿಸದೇ ಹೋದರೆ ಅದರ ಪರಿಣಾಮಗಳು ಭೀಕರವಾಗಿರುತ್ತವೆ ಎಂದು ನಾನು ನಿನ್ನೆಯೇ ಹೇಳಿದ್ದೆ.ಕಲ್ಲಂಗಡಿ ಮಾರಾಟ ಮಾಡಲಾಗದೇ ಕಲಬುರ್ಗಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಆ ಭೀಕರತೆಗೆ ಸಾಕ್ಷಿ.ಸರ್ಕಾರ ರೈತರ ರಕ್ಷಣೆಗೆ ತಕ್ಷಣವೇ ಧಾವಿಸಬೇಕು.ಯುದ್ಧದ ನಡುವೆ ನಮ್ಮವರನ್ನು ನಾವು ರಕ್ಷಿಸಿಕೊಳ್ಳುವುದೇ ನಾಯಕತ್ವ @BSYBJP
— H D Kumaraswamy (@hd_kumaraswamy) March 31, 2020
''ರೈತರ ಸಮಸ್ಯೆ ಬಗೆಹರಿಸದೇ ಹೋದರೆ ಅದರ ಪರಿಣಾಮಗಳು ಭೀಕರವಾಗಿರುತ್ತವೆ ಎಂದು ನಾನು ನಿನ್ನೆಯೇ ಹೇಳಿದ್ದೆ. ಕಲ್ಲಂಗಡಿ ಮಾರಾಟ ಮಾಡಲಾಗದೇ ಕಲಬುರ್ಗಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಆ ಭೀಕರತೆಗೆ ಸಾಕ್ಷಿ. ಸರ್ಕಾರ ರೈತರ ರಕ್ಷಣೆಗೆ ತಕ್ಷಣವೇ ಧಾವಿಸಬೇಕು. ಯುದ್ಧದ ನಡುವೆ ನಮ್ಮವರನ್ನು ನಾವು ರಕ್ಷಿಸಿಕೊಳ್ಳುವುದೇ ನಾಯಕತ್ವ @BSYBJP'' ಎಂದು ಟ್ವೀಟ್ ಮಾಡಿ ಸರ್ಕಾರವನ್ನ ಎಚ್ಚರಿಸಿದ್ದಾರೆ.

ಅಂದ್ಹಾಗೆ, ಕಲ್ಲಂಗಡಿ ಬೆಳೆದು, ಮಾರಾಟ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಲಾಡ ಚಿಂಚೋಳಿ ಗ್ರಾಮದ ನಿವಾಸಿ. ಚಂದ್ರಕಾಂತ ಬಿರಾದಾರ (45) ನೇಣಿಗೆ ಶರಣಾದ ರೈತ. ನಿನ್ನೆ ರಾತ್ರಿ ಜಮೀನಿನಲ್ಲಿಯೇ ನೇಣು ಹಾಕಿಕೊಂಡಿದ್ದಾನೆ. ಚಂದ್ರಕಾಂತ 3 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು.
ಏಪ್ರಿಲ್ 14ರವರೆಗೂ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆ ನಗರಗಳಲ್ಲಿ, ಹೆದ್ದಾರಿಗಳಲ್ಲಿ ಸಾರಿಗೆ ವ್ಯವಸ್ಥೆ ಬಂದ್ ಮಾಡಲಾಗಿದೆ. ತಾನು ಬೆಳೆದ ಕಲ್ಲಂಗಡಿ ಹಣ್ಣನ್ನು ಸಾಗಾಟ ಮಾಡಲು ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಮನನೊಂದು ರೈತ ಸಾವನ್ನಪ್ಪಿದ್ದಾನೆ.












Click it and Unblock the Notifications