ರೈತರಿಗೆ ಕೃಷಿ ಸೌಕರ್ಯ ನೀಡುತ್ತಿರುವ 'ಸಿಂಗಲ್ ವಿಂಡೋ ರಿಜಿಸ್ಟ್ರೇಷನ್' ಸಾಫ್ಟ್‌ವೇರ್
ಬೆಂಗಳೂರು ಜೂ.15: ಸರ್ಕಾರಿ ಸೌಲಭ್ಯಗಳನ್ನು ನಾಡಿನ ಜನರಿಗೆ ತ್ವರಿತಗತಿಯಲ್ಲಿ ತಲುಪಿಸುವ ಸಲುವಾಗಿ ರಾಜ್ಯ ಸರ್ಕಾರ ಬದಲಾದ ಕಾಲಘಟ್ಟದಲ್ಲಿ ಡಿಜಿಟಲ್ ವ್ಯವಸ್ಥೆಗೆ ಹೆಚ್ಚು ಆದ್ಯತೆ ಕೊಡುತ್ತಿದೆ. ಕೃಷಿ ಕ್ಷೇತ್ರದ ಹತ್ತಾರು ಯೋಜನೆಗಳು ರೈತರಿಗೆ ತಲುಪಿಸಲು ಆಧಾರ್ ಸಂಖ್ಯೆ ಆಧಾರಿತವಾದ 'ಸಿಂಗಲ್ ವಿಂಡೋ ರಿಜಿಸ್ಟ್ರೇಷನ್' ಎಂಬ ಸಾಫ್ಟ್‌ವೇರ್ ಅನ್ನು ಕೃಷಿ ಇಲಾಖೆ ಇತ್ತೀಚೆಗೆ ಲೋಕಾರ್ಪಣೆಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸರ್ಕಾರ, ಅನೇಕ ಭೂರಹಿತ ರೈತರು ಅಂದರೆ ಕೋಳಿ ಸಾಕಾಣಿಕೆ, ಹೈನುಗಾರಿಕೆ ಯಂತಹ ಕೃಷಿಕರು ಡಿಜಿಟಲ್ ವೇದಿಕೆಗಳತ್ತ ಮುಖ ಮಾಡಿದ್ದಾರೆ. ಕೃಷಿ ಇಲಾಖೆ ಅಥವಾ ಸಂಬಂಧಿಸಿದ ಕೆಲವು ಸಂಘ ಸಂಸ್ಥೆಗಳಿಗೆ ಆನ್ ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಸಂಘ (ಕೆಎಂಎಫ್) ಪ್ರತಿ ಲೀಟರ್ ಹಾಲಿಗೆ 4ರೂ. ಸಹಾಯಧನ ನೀಡುವ ಮೂಲಕ ರೈತರಿಗೆ ನೆರವಾಗಿದೆ ಎಂದು ತಿಳಿಸಿದೆ.
ಅರ್ಹರಿಗೆ ವಿವಿಧ ಯೋಜನೆಗಳ ಲಾಭ ತಲುಪಿಸಬಹುದು
ರೈತರು ಸರ್ಕಾರದ ಯಾವ ಯಾವ ಯೋಜನೆಗಳ ಲಾಭ ಪಡೆದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಹೀಗಾಗಿ ಆಧಾರ್ ಸಂಖ್ಯೆ ನೀಡಿ ಸರಳವಾಗಿ ನೋಂದಣಿಯಾಗುವಂತೆ ರೂಪಿಸಲಾದ ಸಾಪ್ಟ್ ವೇರ್ ಗೆ ಈಗಾಗಲೇ ಚಾಲನೆ ದೊರೆತಿದೆ. ಇದರಿಂದ ರೈತರಿಗೆ ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಆಹಾರ ಸರಬರಾಜು, ಹೈನುಗಾರಿಕೆ, ರೇಷ್ಮೆ ಕೃಷಿ ಸೇರಿದಂತೆ ಹಲವಾರು ಯೋಜನೆಗಳು ಸರ್ಕಾರದ ಈ ಸಾಪ್ಟವೇರ್ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ. ಅರ್ಹರಿಗೆ ಯೋಜನೆಗಳ ಲಾಭ ತಲುಪಿರುವ ಬಗ್ಗೆ ಈ ಸಾಪ್ಟವೇರ್ ನಿಂದ ಮಾಹಿತಿ ಸಿಗಲಿದೆ.

'ಒನ್ ವಿಂಡೋ ರಿಜಿಸ್ಟ್ರೇಷನ್' ಪ್ರಯೋಜನ ಹೇಗೆ?:
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ತೋಟಗಾರಿಕೆ ಜಂಟಿ ನಿರ್ದೇಶಕ ಶಕೀಲ್ ಅಹ್ಮದ್ ಅವರು, ಒನ್ ವಿಂಡೋ ಸಾಫ್ಟ ವೇರ್ ಮೂಲಕ ತೋಟಗಾರಿಕಾ ಬೆಳೆಯಾದ ಹಣ್ಣುಗಳಿಗೆ ಇಲ್ಲವೇ ಅವುಗಳ ಪ್ರಕಾರಗಳಿಗೆ ಸಿಂಗಲ್ ಡಿಜಿಟ್ ರೂಪದಲ್ಲಿ ಗುರುತಿಸಬಹುದು. ತೋಟಗಾರಿಕೆ ಯೋಜನೆಗಳ ಲಾಭವನ್ನು ಪಿಎಂ ಕಿಸಾನ್ ಯೋಜನೆಯಡಿ ನೇರವಾಗಿ ರೈತರಿಗೆ ತಲಪಿಸಬಹುದು.
ಕನಿಷ್ಠ ಬೆಂಬಲ ಬೆಲೆ ಪಾವಿತಿಸುವಿಕೆ, ವಿಶೇಷ ಆರ್ಥಿಕ ನೆರವು, ಜಾತಿ ಪ್ರಮಾಣಪತ್ರ ದೃಢೀಕರಣ, ಪಡೀತರ ಚೀಟಿ ಯೋಜನೆಗಳಿಗೆ ಲಭ್ಯವಾಗುವ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ತಲುಪಿಸಲು ಸಾಫ್ಟವೇರ್ ಸಹಕಾರಿಯಾಗುತ್ತದೆ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಕೂಡ ಇದರಲ್ಲೇ ಮಾಹಿತಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಉದ್ದೇಶಿತ ಯೋಜನೆಯ ಕೆಲವು ಅಂಶಗಳು ಹೀಗಿವೆ...
1. ತೋಟಗಾರಿಕೆ ಬೆಳೆಯ ದತ್ತಾಂಶ, ಇಳುವರಿ ಕುರಿತು ಹಾಗೂ ಮಳೆಗಾಲ, ಬೇಸಿಗೆ ಮತ್ತು ಚಳಿಗಾಲಕ್ಕೆ ತಕ್ಕಂತೆ ವಸ್ತುಸ್ಥಿತಿಗಳನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ತಲುಪಿಸಲು ಇದು ನೆರವಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2. ರಾಜ್ಯದಲ್ಲಿ ಕೃಷಿ ಸಂಬಂಧಿ ಮೊಬೈಲ್ ಅಪ್ಲಿಕೇಷನ್ ಬಳಸುವಲ್ಲಿ ತರಬೇತಿ ಪಡೆದ ಸ್ಥಳಿಯ ಯುವ ಸಮೂಹಗಳನ್ನು ಗುರುತಿಸಿ 2.1 ಕೋಟಿ ಪ್ಲಾಟ್ ಗಳನ್ನಾಗಿ ಮಾಡಲಾಗಿದೆ. ಇದು ಸರಳ ದತ್ತಾಂಶ ಸಂಗ್ರಹಣೆ ಸಾಧ್ಯವಾಗಿಸುತ್ತದೆ.

3. ರಾಗಿ, ಭತ್ತ, ಕಡಲೆ, ಜೋಳ, ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಉತ್ಪಾದನೆ ವಾರ್ಷಿಕ ಮತ್ತು ವಲಯವಾರು ಪ್ರಮಾಣ, ಮೌಲ್ಯಮಾಪನ ಮಾಡಬಹುದು.
4. ಅತೀವೃಷ್ಟಿ, ಬರಗಾಲದಂತ ಸನ್ನಿವೇಶದಲ್ಲಿ ಬೆಳೆಗಳ ಮೌಲ್ಯಮಾಪ, ಬೆಳೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವಲ್ಲಿ ಸಾಫ್ಟವೇರ್ ಮಹತ್ವ ಪಾತ್ರ ವಹಿಸುತ್ತದೆ.
5. ತೋಟಗಾರಿಕೆ ಇಲಾಖೆ, ಕೃಷಿ ಇನ್ನಿತರ ಎಲ್ಲ ಇಲಾಖೆಗಳ ಯೋಜನೆ ಪಡೆಯಲು ಆಯಾ ಇಲಾಖೆಗಳ ಸಾಫ್ಟವೇರ್ ಇಲ್ಲವೇ ಮೊಬೈಲ್ ಅಪ್ಲಕೇಷನ್ ಗಳಲ್ಲಿ ನೋಂದಣಿ ಆಗಬೇಕಿತ್ತು. ಪ್ರಸ್ತುತ ಈ ಒನ್ ವಿಂಡೋ ಸಾಫ್ಟವೇರ್ ಬಹುನೋಂದಣಿ ತಪ್ಪಿಸಿ ರೈತರಿಗೆ ಒಂದರಲ್ಲಿ ಸಾಕಷ್ಟು ಮಾಹಿತಿ ನೀಡಲಿದೆ.
6. ತೋಟಗಾರಿಕೆ ವ್ಯಾಪ್ತಿಯಲ್ಲಿ ಹಣ್ಣುಗಳನ್ನು ಬೆಳೆಯುವ ರೈತರು 7.8 ದಶಲಕ್ಷಕ್ಕೂ ಅಧಿಕ ಮಂದಿ ಸಾಫ್ಟವೇರ್ ನೋಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
7. ಈ ಸಾಫ್ಟವೇರ್ ಅನ್ನು ರಾಜ್ಯದ ನ್ಯಾಷನಲ್ ಇನ್ ಫ್ಯಾರ್ಮೆಟಿಕ್ ಸೆಂಟರ್ ಘಟಕ ಅಭಿವೃದ್ಧಿಪಡಿಸಿದ್ದು, ಬೆಳೆ ಸಮೀಕ್ಷೆ ಅಪ್ಲಿಕೇಷನ್ ಅನ್ನು ರಾಜ್ಯ ಎಲೆಕ್ಟ್ರನಿಕ್ಸ್ ಡೆವಲಪ್ ಮೆಂಟ್ ಕಾರ್ಪೋರೇಷನ್ ಸಿದ್ಧಪಡಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಜತೆ ಸಂಯೋಜಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications