30 ಟನ್ ಕಲ್ಲಂಗಡಿ ಖರೀದಿಸಿ ಸರ್ಕಾರಿ ಸಿಬ್ಬಂದಿಗೆ ಹಂಚಿದ ಸತೀಶ್ ಜಾರಕಿಹೊಳಿ
ಬೆಳಗಾವಿ, ಏಪ್ರಿಲ್ 20: ಲಾಕ್ ಡೌನ್ ನಿಂದಾಗಿ ರೈತರಿಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ತೊಂದರೆಯಾಗಿರುವುದರಿಂದ ರೈತರಿಗೆ ನೆರವಾಗಲು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ, ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಜನರಿಗೆ ಹಂಚುವ ಕೆಲಸಕ್ಕೆ ಮುಂದಾಗಿದ್ದಾರೆ.
ನಿನ್ನೆ ಯಮನಕಮರಡಿ ಕ್ಷೇತ್ರದ ಹೆಬ್ಬಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಎಂಬ ರೈತನಿಂದ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದ 30 ಟನ್ ಕಲ್ಲಂಗಡಿ ಹಾಗೂ ಪೇರಲ ಹಣ್ಣು ಖರೀದಿಸಿದ್ದಾರೆ. ಖರೀದಿಸಿದ ಹಣ್ಣುಗಳನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವ ಯಮಕನಮರಡಿ ಹಾಗೂ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಂಚಲಾಗಿದೆ.
ಲಾಕ್ ಡೌನ್ ನಿಂದ ರೈತರು ಬೆಳೆದ ಫಸಲನ್ನು ಮಾರಾಟ ಮಾಡಲಾಗದೆ ನಾಶ ಪಡಿಸುತ್ತಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣು, ತರಕಾರಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ಇದೇ ರೀತಿ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶಾಸಕ ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಮೇ 3ರ ಬಳಿಕ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಬೇಕು. ಸಂಪೂರ್ಣ ಬಂದ್ ಮಾಡಲಾಗದು. ಕಾರ್ಖಾನೆ, ಕೃಷಿ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.












Click it and Unblock the Notifications