ಹಾಸನದ ಗ್ರಾಮದಲ್ಲಿ ಜಿಯಾಲಜಿ ಇಲಾಖೆ ಅಧಿಕಾರಿಗಳು: ಸಿಕ್ಕಿದೆ ಭಾರಿ ನಿಕ್ಷೇಪ?
ಹಾಸನ, ನವೆಂಬರ್ 24: ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಶಶಿವಾಳ ಗ್ರಾಮದ ರೈತರು ತೀವ್ರ ಆತಂಕದಲ್ಲಿದ್ದಾರೆ. ಗ್ರಾಮದಲ್ಲಿ ಭಾರಿ ನಿಕ್ಷೇಪವೊಂದು ಪತ್ತೆ ಆಗಿದೆ ಎಂಬುದೇ ಅವರ ಆತಂಕಕ್ಕೆ ಕಾರಣ.
ಹೌದು, ಕಳೆದ ಮೂರು ದಿನಗಳಿಂದ ಅರಸಿಕೆರೆ ತಾಲ್ಲೂಕಿನ ಶಶಿವಾಳ ಗ್ರಾಮದಲ್ಲಿ ಜಿಯಾಲಜಿ ಇಲಾಖೆಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಹಲವು ಯಂತ್ರಗಳನ್ನು ಹಿಡಿದುಕೊಂಡು ನೆಲದ ಪರಿಶೀಲನೆ ನಡೆಸುತ್ತಿದ್ದಾರೆ ಕೆಲವು ಕಡೆ ಕೆಂಪು ಬಾವುಟಗಳನ್ನು ಇಟ್ಟು ಗುರುತು ಸಹ ಮಾಡಿದ್ದಾರೆ.

ಕೆಲವು ದಿನಗಳಿಂದಲೂ ಈ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಅರಸಿಕೆರೆಯ ಶಶಿವಾಳದಲ್ಲಿ ಭಾರಿ ನಿಕ್ಷೇಪವೇನೋ ಸಿಕ್ಕಿದೆ ಎಂಬ ಊಹೆ ಎಲ್ಲೆಡೆ ಹರಿದಾಡುತ್ತಿದೆ. ಇದರಿಂದ ಸ್ಥಳೀಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ರೈತರ ಜಮೀನುಗಳಲ್ಲಿ ಸಹ ಈ ಅಧಿಕಾರಿಗಳು ಯಂತ್ರಗಳ ಮುಖಾಂತರ ಪರಿಶೀಲನೆ ಮಾಡುತ್ತಿದ್ದು, ಜಮೀನಿನಲ್ಲಿಯೇ ಬಾವುಟಗಳನ್ನು ನೆಟ್ಟಿದ್ದಾರೆ. ಇದು, ಭೂಮಿ ಕಳೆದುಕೊಳ್ಳುವ ಭಯವನ್ನು ರೈತರಲ್ಲಿ ಹುಟ್ಟುಹಾಕಿದೆ.
ಈ ಬಗ್ಗೆ ತಹಶೀಲ್ದಾರ್ ಅವರಿಗೂ ಪೂರ್ಣ ಮಾಹಿತಿ ಇಲ್ಲ. ಇನ್ನು ಶಾಸಕರು ಗ್ರಾಮಸ್ಥರಿಗೆ ಅಭಯ ನೀಡಿದ್ದು, ನಾಳೆ ಶಶಿವಾಳ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.












Click it and Unblock the Notifications