ಬೆಂಗಳೂರಲ್ಲಿ ಜ.20ರಿಂದ ಮೂರು ದಿನ 'ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ -2023': ಬಿ.ಸಿ.ಪಾಟೀಲ್
ಬೆಂಗಳೂರು, ಜನವರಿ 06: ರೈತರಿಗೆ ಮಾರುಕಟ್ಟೆ ಒದಗಿಸಲು, ಸಾವಯವ ಮತ್ತು ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ ಜೊತೆಗೆ ಆರೋಗ್ಯಕರ ಜವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಜನವರಿ 20ರಿಂದ ಮೂರು ದಿನ ಬೆಂಗಳೂರಿನಲ್ಲಿ 'ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ -2023' ಆಯೋಜಿಸಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ರಾಜ್ಯ ಕೃಷಿ ಇಲಾಖೆ ವತಿಯಿಂದ ಮೂರು ದಿನ (ಜ.20-22) 'ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ' ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ನಗರದಲ್ಲಿ ಗುರುವಾರ ಸಿರಿಧಾನ್ಯ ಮೇಳದ ಪೂರ್ವಭಾವಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಲಾಗಿದೆ ಎಂದರು.

ಜನವರಿ 20ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 'ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ' ಉದ್ಘಾಟಿಸಲಿದ್ದಾರೆ. ವಿವಿಧ ರಾಜಕೀಯ ಗಣ್ಯರು ಮತ್ತು ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಚರ್ಚಾಗೋಷ್ಠಿಗಳು, ಸಾವಯವ ಮತ್ತು ಸಿರಿಧಾನ್ಯಗಳ ಪ್ರದರ್ಶನ ಮಳಿಗೆಗಳು, ಸಿರಿಧಾನ್ಯ ಉತ್ಪನ್ನಗಳು, ಸಭೆ, ಕಾರ್ಯಾಗಾರಗಳು ಇರಲಿವೆ. ಒಟ್ಟು ಸುಮಾರು 100ಕ್ಕೂ ಹೆಚ್ಚು ಕಂಪನಿಗಳು 200ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ರೈತರು ಮತ್ತು ಸಾರ್ವಜನಿಕರನ್ನು ಆಕರ್ಷಿಸಲಿವೆ.
ವಿಶೇಷವಾಗಿ ಮೇಳದಲ್ಲಿ ಸಿರಿಧಾನ್ಯ ಬೆಳೆಗಾರರು, ಗ್ರಾಹಕರು, ರಫ್ತುದಾರರು, ಸಂಪರ್ಕ ಕಲ್ಪಿಸುವ ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜನರು ಜಂಕ್ ಫುಡ್ ಗುಲಾಮಗಿರಿಯಿಂದ ಹೊರ ಬರಬೇಕು. ಆರೋಗ್ಯಕರ ಆಹಾರ ಶೈಲಿಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಅಂದಾಗ ಮಾತ್ರವೇ ಸದೃಢ ಜೀವನ ನಮ್ಮದಾಗುತ್ತದೆ ಎಂದು ಸಚಿವರು ಕರೆ ನೀಡಿದರು.

ಜನವರಿ 14ಕ್ಕೆ ಜಾಗೃತಿ ವಾಕಥಾನ್
ಜನವರಿ 14 ರಂದು ಸಿರಿಧಾನ್ಯ ಸಾವಯವ ಕುರಿತು ಜಾಗೃತಿಗೆ ಕಬ್ಬನ್‌ಪಾರ್ಕಿನಲ್ಲಿ ವಾಕ್‌ಥಾನ್ ನಡೆಯಲಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಿರಿಧಾನ್ಯ ಸಾವಯವ ಮೇಳ ನಡೆಯುತ್ತಿ. ಸಿರಿಧಾನ್ಯ ಬಳಕೆ ಮತ್ತು ಬೆಳೆಯುವಲ್ಲಿ ಕರ್ನಾಟಕ ದೇಶಕ್ಕೆ ಮಾದರಿ ಆಗಿದೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ನಂತರ ಸಾರ್ವಜನಿಕರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಿದ್ದಾರೆ ಎಂದರು. ಇದೇ ವೇಳೆ ಅಂತಾರಾಷ್ಟ್ರೀಯ ಸಿರಿಧಾನ್ಯ ಮಾಹಿತಿ ಸುಲಭವಾಗಿ ಎಲ್ಲಿರಿಗು ಲಭ್ಯವಾಗುವಂತೆ ಅಭಿವೃದ್ಧಿ ಪಡಿಸಲಾದ ವೆಬ್‌ಸೈಟ್ ಒಂದನ್ನು ಕೃಷಿ ಸಚಿವರು ಬಿಡುಗಡೆ ಮಾಡಿದರು.
ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ.ಪುತ್ರನ್, ಆಯುಕ್ತ ಶರತ್, ಕೆಪೆಕ್ ಅಧ್ಯಕ್ಷ ವಿರೂಪಾಕ್ಷಪ್ಪ ,ಕೆಮಿಕ್ ನಿರ್ದೇಶಕ ಪದ್ಮನಾಭಯ್ಯ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications