1 ಕೆಜಿ ರಾಜಮುಡಿ ಅಕ್ಕಿ ರೇಟು 100 ರೂ. ದಾಟಿ ಹೋಯ್ತು!
ಬೆಂಗಳೂರು, ಡಿಸೆಂಬರ್ 10; ಕರ್ನಾಟಕದಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ಬರಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತದ ಬೆಳೆಯ ಕೊರತೆ ಕಾರಣ ಮಾರುಕಟ್ಟೆಗೆ ಅಕ್ಕಿಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೆಲೆಗಳು ಏರಿಕೆಯಾಗಿವೆ.
ಇದೇ ಮೊದಲ ಬಾರಿಗೆ ರಾಜಮುಡಿ ಅಕ್ಕಿಯ ಬೆಲೆ ಕೆಜಿಗೆ 100 ರೂ. ಗಡಿ ದಾಟಿದೆ. ಮುಂದಿನ ತಿಂಗಳುಗಳಲ್ಲಿ ಅಕ್ಕಿಯ ದರ ಇನ್ನಷ್ಟು ಹೆಚ್ಚಳವಾಗುವ ಸೂಚನೆಯೂ ಸಿಕ್ಕಿದೆ. ರಾಜಮುಡಿ ಮಾತ್ರವಲ್ಲ ಸೋನಾ ಮಸೂರಿ ಅಕ್ಕಿಯ ದರದಲ್ಲಿಯೂ ಶೇ 25ರಷ್ಟು ಏರಿಕೆ ಕಂಡುಬಂದಿದೆ.

ದರದಲ್ಲಿ ಭಾರೀ ಏರಿಕೆ; ರಾಜಮುಡಿ ಅಕ್ಕಿ ಅಪರೂಪದ ಮತ್ತು ಪೌಷ್ಠಿಕಾಂಶವುಳ್ಳ ಕೆಂಪು ಅಕ್ಕಿಗಳಲ್ಲಿ ಒಂದು. ಮೈಸೂರು, ಹಾಸನ ಭಾಗದಲ್ಲಿ ಬೆಳೆಯುವ ಈ ಅಕ್ಕಿಗೆ ಭಾರೀ ಬೇಡಿಕೆ ಇದೆ. ಆದರೆ ಈ ಬಾರಿ ಬರ ಪರಿಸ್ಥಿತಿಯ ಕಾರಣ ಭತ್ತದ ಬೆಳೆಯಲ್ಲಿ ಕೊರತೆ ಉಂಟಾಗಿದೆ. ಇದರ ಪರಿಣಾಮ ಬೆಂಗಳೂರು ನಗರದಲ್ಲಿ ರಾಜಮುಡಿ ಅಕ್ಕಿ ಕೆಜಿ ದರ 100 ರಿಂದ 110 ರೂ. ಆಗಿದೆ.
ಕಳೆದ ತಿಂಗಳು 52 ರಿಂದ 60 ರೂ. ಇದ್ದ ಅಕ್ಕಿಯ ದರ ಏಕಾಏಕಿ ಏರಿಕೆ ಕಂಡಿದೆ. ಸಾವಯವ ಪದ್ಧತಿಯಲ್ಲಿ ಬೆಳೆದ ರಾಜಮುಡಿ ಅಕ್ಕಿಯ ದರ ಕೆಜಿಗೆ 130 ರೂ. ಇದೆ. ಕಳೆದ ವರ್ಷ ರಾಜಮುಡಿ ಭತ್ತದ ಕ್ವಿಂಟಾಲ್ ದರ 2,500 ರೂ. ಇತ್ತು. ಈ ಬಾರಿ 4 ಸಾವಿರ ರೂ.ಗಳಿಗೆ ಏರಿಕೆ ಕಂಡಿದೆ. 2022ರ ಡಿಸೆಂಬರ್‌ನ ಸಂಗ್ರವನ್ನು ಈಗ ಮಾರಾಟ ಮಾಡಲಾಗುತ್ತಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು ತಾಲೂಕುಗಳಲ್ಲಿ, ಕೊಡಗು ಜಿಲ್ಲೆಯ ಕುಶಾಲನಗರ ಭಾಗದಲ್ಲಿ ಈ ಬಾರಿ ನೈಋತ್ಯ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಭತ್ತದ ನಾಟಿ ಕಡಿಮೆಯಾಗಿದೆ.
ಹೇಮಾವತಿ ಡ್ಯಾಂ ನೀರನ್ನು ಬಳಕೆ ಮಾಡಿಕೊಂಡು ಭತ್ತವನ್ನು ಬೆಳೆಯುತ್ತಿದ್ದ ರೈತರು ಈ ಬಾರಿ ನಾಲೆಗಳಿಗೆ ನೀರು ಸರಿಯಾಗಿ ಸಿಗದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಕ್ಕ ಕಡಿಮೆ ನೀರಿನಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಭತ್ತದ ನಾಟಿ ಮಾಡದ ಕಾರಣ ಬೆಳೆ ಕೊರತೆ ಎದುರಾಗಿದೆ.
ದಿ ಹಿಂದೂ ಪತ್ರಿಕೆಗೆ ರಾಜಮುಡಿ ಭತ್ತದ ಬೆಳೆಗಾರರ ಸಂಘದ ಹೊಯ್ಸಳ ಎಸ್. ಅಪ್ಪಾಜಿ ನೀಡಿದ ಮಾಹಿತಿ ಪ್ರಕಾರ ವಾಡಿಕೆಯಂತೆ 1 ರಿಂದ 1.25 ಲಕ್ಷ ಎಕರೆ ಪ್ರದೇಶದಲ್ಲಿ ರಾಜಮುಡಿ ಭತ್ತ ಬೆಳೆಯಬೇಕಿತ್ತು. ಆದರೆ ಈ ಬಾರಿ ಅದು ಶೇ 30 ರಿಂದ 40ರಷ್ಟು ಕಡಿಮೆಯಾಗಿದೆ. ಕಡಿಮೆ ಭತ್ತ ಬೆಳೆದ ರೈತರು ಅದನ್ನು ಮಾರಾಟ ಮಾಡದೇ ತಮ್ಮ ಉಪಯೋಗಕ್ಕೆ ಇಟ್ಟುಕೊಳ್ಳುತ್ತಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ರೈತ ದತ್ತಾತ್ರೇಯ ಮಾಹಿತಿಯಂತೆ ನೀರಿನ ಕೊರತೆ ಕಾರಣ ರೈತರು ಭತ್ತದ ಬದಲು ಬೇರೆ ಬೆಳೆ ಬೆಳೆದಿದ್ದಾರೆ. ಹಲವು ರೈತರು ಈ ಬಾರಿ ಭತ್ತ ಬಿಟ್ಟು ರಾಗಿಯ ಮೊರೆ ಹೋಗಿದ್ದಾರೆ. ರಾಜಮುಡಿ ಅಕ್ಕಿಯ ಬೆಲೆ ಎಷ್ಟು ಏರಿಕೆಯಾದರೂ ಸಹ ಅದರಿಂದ ರೈತರಿಗೆ ಉಪಯೋಗವಾಗುತ್ತಿಲ್ಲ. ಕಟಾವು ಆಗುತ್ತಿದ್ದಂತೆ ರೈತರು ಬೆಳೆ ಮಾರಾಟ ಮಾಡುತ್ತಾರೆ. ಭತ್ತವನ್ನು ಸಂಗ್ರಹ ಮಾಡಿಕೊಂಡು ಮಾರಾಟ ಮಾಡುವವರು ಕಡಿಮೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಅಶೋಕ ನಗರದಲ್ಲಿ ಅಕ್ಕಿ ಮಾರಾಟ ಮಾಡುವ ಸತೀಶ್, "ರಾಜಮುಡಿ ಅಕ್ಕಿಯ ಬೆಲೆಯಲ್ಲಿ ಏರಿಕೆಯಾಗಿರುವುದು ಸತ್ಯ. ಆದರೆ ಭತ್ತವಿಲ್ಲದೇ ಅಕ್ಕಿ ಎಲ್ಲಿಂದ ಬರುತ್ತದೆ?. ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಎಷ್ಟು ಭತ್ತ ಬರುತ್ತದೆ ಎಂಬುದರ ಮೇಲೆ ಮುಂದಿನ ದಿನಗಳ ಬೆಲೆಗಳು ತೀರ್ಮಾನವಾಗುತ್ತದೆ. ರಾಜಮುಡಿ ಮಾತ್ರವಲ್ಲ ಎಲ್ಲಾ ಬಗೆಯ ಅಕ್ಕಿಯ ದರದಲ್ಲಿಯೂ ಏರಿಕೆ ಕಂಡುಬಂದಿದೆ" ಎಂದರು.












Click it and Unblock the Notifications