ರೈತರಿಂದ ಗ್ರಾಹಕರಿಗೆ; ಹಣ್ಣು, ಅಣಬೆ, ಜೇನು ಪ್ರದರ್ಶನದ ವಿಶೇಷತೆಗಳು
ಕೊಪ್ಪಳ, ಮಾರ್ಚ್ 07: ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಅಣಬೆ ಮತ್ತು ಜೇನು ಉತ್ಪನ್ನಗಳು. ವಿದೇಶಿ ಸೇಬು ಹಾಗೂ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದೆ.
ಶಿವರಾತ್ರಿ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಕೊಪ್ಪಳ ನಗರದಲ್ಲಿ ವಿವಿಧ ಬಗೆಯ ಹಣ್ಣುಗಳು, ಅಣಬೆ ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದೆ. ಮಾರ್ಚ್ 6 ರಿಂದ 9ರ ತನಕ ಈ ಮೇಳ ನಡೆಯಲಿದೆ.

ಕೊಪ್ಪಳದ ತೋಟಗಾರಿಕಾ ಇಲಾಖೆ 'ರೈತರಿಂದ ನೇರ ಗ್ರಾಹಕರಿಗೆ' ಎಂಬ ಆಶಯದಡಿ ಆಯೋಜಿಸಿರುವ ಹಣ್ಣು ಮತ್ತು ಜೇನು ಹಬ್ಬಕ್ಕೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು.
ಶಾಸಕರು ಜೇನು, ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಮತ್ತು ಹಾಗೂ ಉತ್ಪನ್ನಗಳನ್ನು ವಿಕ್ಷೀಸಿದರು. ಬಳಿಕ ಹಣ್ಣುಗಳಿಂದ ಅಲಂಕೃತವಾದ ಫೋಟೋ ಪಾಯಿಂಟ್‌ನಲ್ಲಿ ಫೋಟೋ ತೆಗೆಸಿಕೊಂಡು ತೋಟಗಾರಿಕೆ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಕೃಷಿಕರಿಗೆ ಸಹಾಯಕವಾಗುವ ಡ್ರೋನ್: ಹಣ್ಣು ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಜೇನು, ಅಣಬೆ ಸೇರಿದಂತೆ ವಿವಿಧ ಹಣ್ಣುಗಳನ್ನು ಮತ್ತು ಹಾಗೂ ಉತ್ಪನ್ನಗಳನ್ನು ವಿಕ್ಷೀಸಿ, ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಈ ಮೇಳದ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇಳದಲ್ಲಿ ಎಲ್ಲಾ ಹಣ್ಣುಗಳು ಹಾಗೂ ಅವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಹಕರ ಆರೋಗ್ಯ ವೃದ್ಧಿ ದೃಷ್ಟಿಯಿಂದ ಮಾರಾಟ ಮಾಡಲಾಗುತ್ತಿದೆ. ಮೇಳದಲ್ಲಿ ರೈತರಿಗೆ ಉಚಿತವಾಗಿ ಸ್ಟಾಲ್‌ಗಳನ್ನು ಹಾಕಲು ಅವಕಾಶ ಕಲ್ಪಿಸಲಾಗಿದ್ದು, 17ಕ್ಕೂ ಹೆಚ್ಚು ಹಣ್ಣು ಬೆಳೆಗಾರರು, 10 ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಕೂಡ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ.
ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳದ ನೂರಾರು ಸದಸ್ಯ ರೈತರಿಂದ ವಿವಿಧ ಹಣ್ಣುಗಳನ್ನು ಖರೀದಿಸಿ, ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸಿದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಲಿದೆ.
ಬೆಳೆಗಳಿಗೆ ರಸಾಯನಿಕ ಸಿಂಪಡಿಸಲು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ & ಎರೋ ಸ್ಪೇಸ್ ಕಂಪನಿ, ಬೆಂಗಳೂರು ಇವರ ವತಿಯಿಂದ ಸಿದ್ಧಪಡಿಸಲಾದ ಕೃಷಿ ಡ್ರೋನ್‌ಗಳು ಜೇನು ಮತ್ತು ಹಣ್ಣು ಮೇಳದಲ್ಲಿ ಗಮನ ಸೆಳೆದವು. ಭಾರತ ಸರ್ಕಾರದ ಮಾನ್ಯತೆ ಪಡೆದ ಹಾಗೂ ಉನ್ನತ ಕೃಷಿ ಸಂಶೋಧನಾ ಕೇಂದ್ರ ಸಂಸ್ಥೆಯಿಂದ ಅಧ್ಯಯನ ಮಾಡಲಾದ ಈ ಕೃಷಿ ಡ್ರೋನ್‌ನಿಂದಾಗಿ ಕೃಷಿಕರಿಗೆ ಶೇ.50ರಷ್ಟು ಹಣ ಉಳಿತಾಯ ಮಾಡಬಹುದು.
ರಸಾಯನಿಕ ಔಷಧಿ ಸಿಂಪಡಿಸಲು ಕೆಲಸಗಾರರ ಅವಲಂಬಯನ್ನು ಕಡಿಮೆ ಮಾಡುವುದಲ್ಲದೇ 5 ನಿಮಿಷದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಿಸಬಹುದು. ಸಮ ಸಿಂಪಡಣೆಯಿಂದ ಶೇ.20ರಷ್ಟು ಬೆಳೆ ಇಳುವರಿಯನ್ನು ಹೆಚ್ಚಿಸುತ್ತದೆ. ರಸಾಯನಿಕಗಳೊಂದಿಗೆ ನೇರ ಸಂಪರ್ಕದ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ನೀರಿನ ಬಳಕೆಯನ್ನು ಶೇ.90ರಷ್ಟು ಕಡಿಮೆ ಮಾಡುತ್ತದೆ.
ಹಣ್ಣು, ಜೇನು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಕೆಂಪು ಬಾಳೆ, ನೆಂದ್ರನ್ ಬಾಳೆ, ಬೆಣ್ಣೆ ಹಣ್ಣು, ಪಿಯರ್, ಲೀಚಿ, ವಿದೇಶಿ ಸೇಬು ಹಾಗೂ ವಿವಿಧ ಹಣ್ಣುಗಳನ್ನು ಹಾಗೂ ಹಣ್ಣಿನ ವಿವಿಧ ಸಂಸ್ಕರಿಸಿದ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲು ಆಕರ್ಷಣೀಯವಾದ ರಟ್ಟಿನ ಡಬ್ಬಿಗಳನ್ನು ವಿತರಿಸಲಾಗುತ್ತಿದೆ.
ಇವುಗಳ ಮೇಲೆ ರೈತರ ಹೆಸರು, ಹಣ್ಣುಗಳು ಅವುಗಳ ವಿವಿಧ ತಳಿ, ಅಲ್ಲದೇ ದರವನ್ನು ಕೂಡಾ ಮುದ್ರಿಸಿದ್ದು, ರೈತರಿಗೂ, ಗ್ರಾಹಕರಿಗೂ ಇದು ಅತ್ಯಂತ ಪ್ರಯೋಜನಕಾರಿ. ಇದರಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಎಲ್ಲಾ ಹಣ್ಣುಗಳು ಹಾಗೂ ರೈತರ ಹೆಸರು ಕೂಡಾ ದೂರ ದೂರಕ್ಕೆ ತಲುಪಿದಂತೆ ಆಗುತ್ತದೆ.
ಇದಲ್ಲದೇ ಎಲ್ಲಾ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗ್ರಾಹಕರಿಗೆ ಇದೊಂದು ವಿಶಿಷ್ಟ ಅನುಭವ ನೀಡುತ್ತಿದೆ.












Click it and Unblock the Notifications