ದಿಲ್ಲಿ ರೈತ ಹೋರಾಟ ಮುಂದುವರಿಯಲಿದೆ; ಏಕೆ?
ದೆಹಲಿಯ ರೈತ ಚಳವಳಿ ಒಂದು ವರ್ಷ ಪೂರೈಸುವ ಮೊದಲು, ಪವಿತ್ರ ಗುರುನಾನಕ್ ಜಯಂತಿ ದಿನವಾದ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರೂ ಕೃಷಿ ಕಾಯಿದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಇದಕ್ಕೆ ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ರೈತ ಚಳವಳಿಗೆ ಸಂದ ಜಯ ಎಂದರೆ ಮತ್ತೆ ಹಲವರು ರೈತರ ಮುಂದೆ ಮಂಡಿಯೂರಿದ ಆಡಳಿತಾರೂಢ ಬಿಜೆಪಿ ಸರ್ಕಾರ ಎಂದಿದ್ದಾರೆ. ಮೋದಿಯವರ ಮಾತುಗಳನ್ನು ನಂಬಲೊಲ್ಲದ ಅನೇಕರು ಮೂರು ಕಾಯಿದೆಗಳನ್ನು ಹಿಂಪಡೆಯುವ ತನಕ ಮೋದಿ ಮಾತುಗಳನ್ನು ನಂಬಬಾರದು ಎಂದಿದ್ದಾರೆ. ಮುಂದುವರೆದು ಇದು ಪಂಜಾಬ್ ಮತ್ತು ಉತ್ತರಪ್ರದೇಶದ ಚುನಾವಣೆ ಗಿಮಿಕ್ ಎಂದೂ ಹೇಳುತ್ತಿದ್ದಾರೆ.
ಈ ಎಲ್ಲಾ ಅಭಿಪ್ರಾಯಗಳನ್ನು ಗೌರವಿಸುತ್ತಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರೂ ಕೃಷಿ ಕಾಯಿದೆಗಳನ್ನು ಹಿಂಪಡೆಯುವುದಾಗಿ, ಅದಕ್ಕೆ ಬೇಕಾದ ಕಾನೂನಾತ್ಮಕ ಪ್ರಕ್ರಿಯೆಯನ್ನು ಈ ತಿಂಗಳ ಕೊನೆಯಲ್ಲಿ ಬರುವ ಸಂಸತ್ ಅಧಿವೇಶನದಲ್ಲಿ ಪೂರೈಸುವುದಾಗಿ, ಇಲ್ಲಿ ಆರೋಪ- ಪ್ರತ್ಯಾರೋಪಗಳನ್ನು ಮಾಡಲು ನಾನು ನಿಮ್ಮೆದುರು ಬಂದಿಲ್ಲ, ನಾವು ಮೂರೂ ಕಾಯಿದೆಗಳನ್ನು ಹಿಂಪಡೆಯಲು ತೀರ್ಮಾನಿಸಿದ್ದೇವೆ. ಅದನ್ನು ಪ್ರಕಟಿಸಲು ಬಂದಿದ್ದೇನೆ ಎಂದು ಹೇಳಿರುವುದು ದೆಹಲಿ ಮತ್ತು ದೇಶಾದ್ಯಂತ ಹೋರಾಟನಿರತ ರೈತರಿಗೆ ಸಂದ ಜಯ ಎಂದು ಹೇಳಲೇಬೇಕು.
ಆದರೆ ದಿಲ್ಲಿಯ ರೈತ ಹೋರಾಟ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕೆಂದಷ್ಟೇ ಆಗಿರಲಿಲ್ಲ, ಅದರ ಜೊತೆಗೆ ರೈತರ ಎಲ್ಲಾ ಬೆಳೆಗಳಿಗೆ ಶಾಸನ ಬದ್ಧವಾದ, ಖಾತ್ರಿಯಾದ ಬೆಂಬಲ ಬೆಲೆ (ಸಿ2+50%) ನೀಡಬೇಕೆಂಬುದೂ ಆಗಿತ್ತು. ಅದರ ಜೊತೆಗೆ ವಿದ್ಯುಚ್ಛಕ್ತಿ ಖಾಸಗೀಕರಣ ಕೂಡಾ ಆಗಬಾರದೆಂಬ ಬೇಡಿಕೆ ಇತ್ತು. ಇದೀಗ ಮೂರು ಕಾಯಿದೆಗಳನ್ನು ಹಿಂಪಡೆದು ರೈತರಿಗೆ ಮನೆಗೆ ಹೋಗಿ ಎಂದು ಹೇಳಿರುವ ಮೋದಿ ಮಾತನ್ನು ರೈತರು ಒಪ್ಪುವುದಿಲ್ಲ. ಇನ್ನುಳಿದ ಬೇಡಿಕೆಗಳನ್ನೂ ಈಡೇರಿಸಬೇಕು ಅಷ್ಟೇ ಅಲ್ಲದೆ ಕಾಯಿದೆಗಳನ್ನು ಹಿಂಪಡೆಯುವ ತನಕ ಚಳುವಳಿ ದಿಲ್ಲಿಯಿಂದ ಕಾಲು ತೆಗೆಯುವುದಿಲ್ಲ ಎಂದು ಹೇಳಿದ್ದು, ಆ ಬಗ್ಗೆ ಪ್ರಕಟಣೆ ಅಷ್ಟೇ ಬಾಕಿ ಇದೆ.
ಚಳವಳಿ ಮುಂದುವರೆಸಬೇಕಾದ ಅನಿವಾರ್ಯ
ಜನಾಭಿಪ್ರಾಯವನ್ನು ಗೌರವಿಸದೆ, ಚರ್ಚೆ ಮಾಡದೆ, ರೈತರನ್ನು ಸಂಪರ್ಕಿಸದೆ ತಂದಿದ್ದ ಮೂರು ಕಾರ್ಪೋರೇಟ್ ಪರ ಕೃಷಿ ಕಾಯಿದೆಗಳನ್ನು ಹಿಂಪಡೆಯುತ್ತೇವೆಂದು ತೀರ್ಮಾನ ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಬಹಳ ಗಂಭೀರವಾಗಿ ನೋಡಬೇಕಿದೆ. ಮೊದಲಿಗೆ ಈ ತೀರ್ಮಾನವನ್ನು ಪ್ರಕಟಿಸಲು ಅವರು ಆಯ್ಕೆ ಮಾಡಿಕೊಂಡಿರುವ ದಿನ, ಎರಡನೆಯದು ಇನ್ನೇನು ಮೂರ್ನಾಲ್ಕೂ ತಿಂಗಳಲ್ಲಿ ಬರುವ ಪಂಜಾಬ್ ಹಾಗೂ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ.
ಕೊಂಚ ಹಿಂದಕ್ಕೆ ಹೋಗಿ ನೋಡೋಣ. ದಿಲ್ಲಿಯ ರೈತ ಸತ್ಯಾಗ್ರಹಿಗಳನ್ನು ಇದು ಕೇವಲ ಎರಡು ರಾಜ್ಯಗಳ ರೈತರ ಪ್ರತಿರೋಧವಷ್ಟೇ ಎಂದು ಹೇಳಿದ್ದಲ್ಲದೆ, ಇಡೀ ದೇಶದ ರೈತರ ಚಳವಳಿ ಇದಲ್ಲ ಎಂದೂ ಅಣಕವಾಡಿತ್ತು. ಈಗ ಯಾವ ಎರಡು ರಾಜ್ಯಗಳ ಬಗ್ಗೆ ಮೋದಿ ಸರ್ಕಾರ ಮಾತನಾಡಿತ್ತೋ ಅದೇ ಎರಡು ರಾಜ್ಯಗಳಲ್ಲಿ ಚುನಾವಣೆ ಎದುರಾಗಿದೆ.

ಆ ಚುನಾವಣೆಯಲ್ಲಿ ರೈತರನ್ನು ಓಲೈಸಲು ಈ ತೀರ್ಮಾನ ಕೈಗೊಂಡಿದ್ದಾರೆ. ಇರಲಿ ಯಾವುದೋ ಕಾರಣಕ್ಕೆ ಹಿಂಪಡೆದರೂ ಸ್ವಾಗತಾರ್ಹವೇ. ಆದರೆ ಕಾಯಿದೆಗಳು ಹಿಂಪಡೆಯುವ ವಿಚಾರ ಇನ್ನೂ ಹೇಳಿಕೆ ಆಗಿದೆಯೇ, ಹಿಂಪಡೆಯುವ ಕಾನೂನು ಪ್ರಕ್ರಿಯೆ ಮುಗಿಯಬೇಕಿದೆ. ಹಾಗಾಗಿ ಕಾಯಿದೆಗಳನ್ನು ಹಿಂಪಡೆಯುವವರೆಗೂ ರೈತ ಚಳವಳಿ ಮುಂದುವರಿಯಬೇಕು.
ಎರಡನೆಯದು ಈಗಾಗಲೇ ಹೇಳಿದಂತೆ ಇನ್ನೂ ಬಾಕಿ ಉಳಿದಿರುವ ಬೇಡಿಕೆಗಳಾದ ಎಲ್ಲಾ ಕೃಷಿ ಬೆಳೆಗಳಿಗೆ ಶಾಸನಬದ್ಧವಾಗಿ ಖಾತ್ರಿಯಾದ ಬೆಂಬಲ ಬೆಲೆ ಪ್ರಕಟಿಸಬೇಕು. ವಿದ್ಯುಚ್ಛಕ್ತಿ ಖಾಸಗಿಕರಣ ಮಾಡಬಾರದು. ಅಲ್ಲಿಯವರೆಗೆ ದಿಲ್ಲಿಯ ಹೋರಾಟ ಮುಂದುವರೆಯಲೇಬೇಕು, ಮುಂದುವರೆಯಲಿದೆ.