ಧಾರವಾಡದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಬೇಡಿಕೆ ಈಡೇರಿಕೆಗೆ 24 ಗಂಟೆ ಗಡುವು
ಧಾರವಾಡ, ನವೆಂಬರ್ 2 : ನಗರದಲ್ಲಿ ಕಬ್ಬು ಬೆಳೆಗಾರರು ವೈಜ್ಞಾನಿಕ ಬೆಲೆ ನಿಗದಿ, ಕಾರ್ಖಾನೆಗಳು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸೋಮವಾರದಿಂದಲೇ ಧರಣಿ ಆರಂಭಿಸಿರುವ ಕಬ್ಬು ಬೆಳೆಗಾರರು ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದ ಘಟನೆ ಕೂಡ ನಡೆದಿದೆ.
3ನೇ ದಿನಕ್ಕೆ ಕಾಲಿಟ್ಟಿರುವ ಪ್ರತಿಭಟನೆ ವೇಳೆ ರೈತರೆಲ್ಲರೂ ಜಿಲ್ಲಾಧಿಕಾರಿ ಮುಂದೆ ಎತ್ತುಗಳ ಜೊತೆ ಕಬ್ಬು ಹಿಡಿದು ಡೊಳ್ಳು ಬಾರಿಸುವ ಮೂಲಕ ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಸರ್ಕಾರದ ಭರವಸೆಗಳನ್ನು ಕೇಳಿ ಬೇಸತ್ತಿದ್ದು ಈ ಬಾರಿ ಸರ್ಕಾರದಿಂದ ಸ್ಪಷ್ಟಆದೇಶ ಬರುವವರೆಗೂ ಹಗಲು-ರಾತ್ರಿ ಧರಣಿ ಮುಂದುವರಿಸುವುದಾಗಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಸ್ಪಷ್ಟಪಡಿಸಿದ್ದಾರೆ.

ಇನ್ನೂ, ಸಕ್ಕರೆ ಸಹಕಾರ ಸಚಿವರ ತವರು ಜಿಲ್ಲೆಯಾಗಿರುವ ಧಾರವಾಡದಲ್ಲಿ ಎಲ್ಲಾ ಸಭೆ ಸಮಾರಂಭದಲ್ಲಿ ಭಾಗಿಯಾಗುವ ಸಚಿವರು ಪ್ರತಿಭಟನಾ ಸ್ಥಳಕ್ಕೆ ಮಾತ್ರ ಬಂದು ಪ್ರತಿಭಟನಾಕಾರರ ಮನವೊಲಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ರೊಚ್ಚಿಗೆದ್ದಿರುವ ರೈತರು ರೈತ ಮುಖಂಡ ಕುರಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟವನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಭಟನೆ ಕೈ ಬಿಡುವಂತೆ ಮಾಡಿದ ಮನವಿ ತಿರಸ್ಕರಿಸಿ ಬೇಡಿಕೆ ಈಡೇರಿಸುವವರೆಗೂ ಧರಣಿ ನಡೆಯಲಿದೆ ಎಂಬ ಸ್ಪಷ್ಟಸಂದೇಶವನ್ನು ಸರಕಾರಕ್ಕೆ ರವಾನಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹಾಗೂ ಶಾಸಕ ಅಮೃತ ದೇಸಾಯಿ, ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ಪ್ರಸಕ್ತ ಸಾಲಿಗೆ ಕಬ್ಬು ದರ ನಿಗದಿ ಕುರಿತು ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು. ಹೀಗಾಗಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.

ಆದರೆ ಸಚಿವರ, ಶಾಸಕರ ಮನವಿ ತಿರಸ್ಕರಿಸಿದ ಹೋರಾಟಗಾರರು, ಸತತ ನಾಲ್ಕು ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಹಲವು ಬಾರಿ ಸಭೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದರು.
ಕಬ್ಬು ದರವನ್ನು ವೈಜ್ಞಾನಿಕವಾಗಿ ಹೆಚ್ಚಿಸಬೇಕು. ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿರುವ ಬಾಕಿ ಹಣ ಬಿಡುಗಡೆ ಸೇರಿ ಬೇಡಿಕೆಗಳ ಬಗ್ಗೆ ಸರಕಾರ ಸ್ಪಷ್ಟತೀರ್ಮಾನ ಕೈಗೊಳ್ಳುವವರೆಗೂ ಹೋರಾಟ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸಂಘದ ಕುರುಬೂರು ಶಾಂತಕುಮಾರ್ ಸ್ಪಷ್ಟಪಡಿಸಿದರು.












Click it and Unblock the Notifications