ದೆಹಲಿಯಲ್ಲಿ ರೈತರ ಮಹಾಪಂಚಾಯತ್; ಅನ್ನದಾತರ 9 ಬೇಡಿಕೆಗಳೇನು?
ನವದೆಹಲಿ, ಆಗಸ್ಟ್ 22: ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಸೋಮವಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ 'ಮಹಾಪಂಚಾಯತ್' ನಡೆಯುತ್ತಿದ್ದೆ. ವಿವಿಧ ರಾಜ್ಯಗಳಿಂದ ಸಾವಿರಾರು ರೈತರು ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆಯೇ ಪ್ರತಿಭಟನಾ ಸ್ಥಳಕ್ಕೆ ತಲುಪಿದ್ದಾರೆ.
ಕೆಲವೆಡೆ ರೈತರನ್ನು ಜಂತರ್ ಮಂತರ್ ತಲುಪದಂತೆ ತಡೆಯಲಾಗುತ್ತಿದೆ ಎಂದು ಎಸ್‌ಕೆಎಂ ಮುಖಂಡರು ಆರೋಪಿಸಿದ್ದಾರೆ. ಆದರೆ, ದೆಹಲಿ ಪೊಲೀಸರು ರೈತರ ಆರೋಪಗಳನ್ನು ನಿರಾಕರಿಸಿದ್ದಾರೆ.
"ಎಸ್‌ಕೆಎಂ ಕಿಸಾನ್ ಮಹಾಪಂಚಾಯತ್ ಘೋಷಿಸಿದೆ. ಈಗಾಗಲೇ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಇತರ ರಾಜ್ಯಗಳ ರೈತರು ನವದೆಹಲಿಗೆ ತೆರಳಿದ್ದಾರೆ. ಇದು ಒಂದು ದಿನದ ಕಾರ್ಯಕ್ರಮವಾಗಿದ್ದು ಸಂಪೂರ್ಣ ಶಾಂತಿ ಮತ್ತು ಶಿಸ್ತಿನಿಂದ ನಡೆಯಲಿದೆ. ಪಂಚಾಯತ್‌ನ ಸಮಯವು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಇರುತ್ತದೆ" ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಮಹಾಪಂಚಾಯತ್ ಬಳಿಕ ಭಾರತದ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗುವುದು. "ಸರಕಾರ ಯಾವುದೇ ರೀತಿಯ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿದರೆ, ಅದಕ್ಕೆ ಸರಕಾರವೇ ಹೊಣೆಯಾಗುತ್ತದೆ" ಎಂದು ರೈತ ಸಂಘಟನೆ ತಿಳಿಸಿದೆ.
ಕಿಸಾನ್ ಪಂಚಾಯತ್‌ನ ಒಂಬತ್ತು ಬೇಡಿಕೆಗಳು ಹೀಗಿವೆ.
1. ಲಖೀಂಪುರ ಖೇರಿ "ಹತ್ಯಾಕಾಂಡ"ದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ರೈತರ ಕುಟುಂಬಗಳಿಗೆ ನ್ಯಾಯ ನೀಡಬೇಕು. ಕಳೆದ ಒಂಬತ್ತು ತಿಂಗಳಿನಿಂದ ಜೈಲಿನಲ್ಲಿರುವ ರೈತರ ಬಿಡುಗಡೆಯಾಗಬೇಕು. ಲಖೀಂಪುರ ಖೇರಿ ಹತ್ಯಾಕಾಂಡದ ಪ್ರಮುಖ ಅಪರಾಧಿ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಬಂಧಿಸಬೇಕು.
2. "C2+50% ಸೂತ್ರ" ದ ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸಬೇಕು. MSP ಯನ್ನು ಖಾತರಿಪಡಿಸಲು ಕಾನೂನನ್ನು ಮಾಡುವ ಭರವಸೆ ನೀಡಬೇಕು.

3. ದೇಶದ ಎಲ್ಲ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು.
4. ವಿದ್ಯುತ್ ತಿದ್ದುಪಡಿ ಮಸೂದೆ 2022 ರದ್ದಾಗಬೇಕು.
5. ಕಬ್ಬಿನ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಮತ್ತು ಕಬ್ಬಿನ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು.
6. ಭಾರತವು WTO ದಿಂದ ಹೊರಬರಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು.
7. ರೈತರ ಚಳವಳಿ ಸಂದರ್ಭದಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು.
8. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ಬಾಕಿ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.
9. ಅಗ್ನಿಪಥ ಯೋಜನೆ ಹಿಂಪಡೆಯಬೇಕು.
ಇನ್ನು, ದೆಹಲಿ-ಯುಪಿ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications