Grape Price Decrease: ಮಳೆಯಿಂದಾಗಿ ಬೆಲೆ ಕಳೆದುಕೊಂಡ ದ್ರಾಕ್ಷಿ: ಪರಿಹಾರಕ್ಕಾಗಿ ಬೆಳೆಗಾರರಿಂದ ಒತ್ತಾಯ
ಚಿಕ್ಕಬಳ್ಳಾಪುರ ಮೇ 26: ಬರಗಾಲದಲ್ಲೂ ಕಷ್ಟ ಪಟ್ಟು ಬೆಳೆದ ದ್ರಾಕ್ಷಿ, ಕಟಾವಿಗೆ ಬರುವ ವೇಳೆಗೆ ಮಳೆ ಬಿದ್ದು ಹಾಳಾಗತೊಡಗಿದೆ. ಇದರಿಂದಾಗಿ ದ್ರಾಕ್ಷಿ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಲ್ಲೆಡೆ ಧಾರಾಕಾರ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರ ಕಣ್ಣೀರು ಇಡುವಂತಾಗಿದೆ. ಒಂದೆಡೆ ದ್ರಾಕ್ಷಿ ಹಣ್ಣಿಗೆ ಬೇಡಿಕೆ ಇಲ್ಲದೇ ಬೆಲೆ ಕುಸಿತವಾದರೆ, ಮತ್ತೊಂದೆಡೆ ಕೊಯ್ಲಿಗೆ ಬಂದಿರುವ ದ್ರಾಕ್ಷಿ ಮಳೆಯಿಂದಾಗಿ ತೋಟಗಳಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ದ್ರಾಕ್ಷಿ ಬೆಳೆಗಾರರ ಬದುಕು ಕತ್ತಲೆಯಂತಾಗಿದೆ.

ಹೌದು ಕಳೆದ 20 ದಿನಗಳ ಹಿಂದೆಯಷ್ಟೇ ಮಳೆ ಇಲ್ಲದ ಕಾರಣ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದ ದ್ರಾಕ್ಷಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ದಿಢೀರ್ ಬೆಲೆ ಕುಸಿತವಾಗಿದ್ದು, ಇದರಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೋದಷ್ಟು ಬೆಲೆ ಹೋಗಲಿ ತೋಟದಲ್ಲಿ ಸರಕು ಖಾಲಿಯಾದರೆ ಸಾಕು ಎಂದು ದ್ರಾಕ್ಷಿ ಬೆಳೆ ಮಾರಾಟಕ್ಕೆ ಇಟ್ಟರೂ ದ್ರಾಕ್ಷಿ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಕಾಡಿ ಬೇಡಿ ವ್ಯಾಪಾರಸ್ಥರ ಬೆನ್ನು ಬಿದ್ದರೆ ಸಾಲ ನೀಡುವುದಾದರೆ ಸರಕು ಖಾಲಿ ಮಾಡುವ ಭರವಸೆ ನೀಡುವ ಸ್ಥಿತಿ ಒದಗಿ ಬಂದಿದೆ.
ಬೇಸಿಗೆಯ ಬಿಸಿಲಿನ ತಾಪದಲ್ಲಿ ದ್ರಾಕ್ಷಿ ಬೆಳೆಯುವುದು ಅಷ್ಟು ಸುಲಭವಲ್ಲ. ಹಾಗಾಗಿ ಈ ಬಾರಿ ದ್ರಾಕ್ಷಿ ಬೆಳೆಗೆ ಬೆಳೆಗಾರರು ಲಕ್ಷಗಟ್ಟಲೇ ಬಂಡವಾಳ ಸುರಿದು, ಬಂಡವಾಳ ಹಿಂಪಡೆಯುವ ನಿರೀಕ್ಷೆಯಲ್ಲಿ ಇದ್ದಾರೆ.
ಉಳುಮೆ, ನೀರು, ಗೊಬ್ಬರ, ಹೊಸ ಮಣ್ಣು, ಔಷಧಿ ರಸಗೊಬ್ಬರ, ಕೂಲಿ ಆಳು ಹೀಗೆ.. ಹಲವು ಬಗೆಯಲ್ಲಿ ಬೆಳೆ ನಿರ್ವಹಣೆಗೆ ಸಾಕಷ್ಟು ಖರ್ಚು ಮಾಡಿದ್ದಾರೆ. ಈಗ ದ್ರಾಕ್ಷಿ ಬೆಲೆ ಕುಸಿತಕ್ಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಹಾಕಿದ ಬಂಡವಾಳವು ಸಹ ವಾಪಸ್ಸು ಬರುವ ಯಾವುದೇ ಖಾತ್ರಿ ಇಲ್ಲದೇ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ಮಳೆಯಿಂದ ಭಾರೀ ನಷ್ಟ:
ಕಳೆದ ವರ್ಷ ಇದೇ ಸೀಸನ್‍ನಲ್ಲಿ ದ್ರಾಕ್ಷಿ ಕೆ.ಜಿಗೆ 35 ರಿಂದ 40 ರೂ.ವರೆಗೆ ಇತ್ತು. ಈ ವರ್ಷ 15 ದಿನಗಳ ಹಿಂದೆ ಸರಾಸರಿ 30 ರೂ. ಮೇಲೆ ದ್ರಾಕ್ಷಿ ಮಾರಾಟವಾಗಿದೆ. ಮಳೆ ಬಿದ್ದ ಬಳಿಕ ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಿದ್ದು, ಈಗ ಖರೀದಿಸಲು ಮುಂದೆ ಬರುವವರು ಇಲ್ಲದಂತಾಗಿದೆ.
ಕೊಳೆಯುತ್ತಿರುವ ಹಣ್ಣು:
ಕಳೆದ ಹಲವು ದಿನಗಳಿಂದ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ, ಸಂಪೂರ್ಣ ಹಣ್ಣಾದ ದ್ರಾಕ್ಷಿ ಬಿರುಕು ಬಿಟ್ಟು ಕೊಳೆತು ಹೋಗುತ್ತಿದೆ, ಸಾಲದೆಂಬಂತೆ ಇಡೀ ದ್ರಾಕ್ಷಿ ಗೊಂಚಲನ್ನು ನಾಶಗೊಳಿಸುತ್ತಿದೆ. ಕೊಳೆತ ದ್ರಾಕ್ಷಿ ಹಣ್ಣನ್ನು ಗೊನೆಯಿಂದ ಬಿಡಿಸಿ ಬಿಸಾಕಬೇಕು ಇಲ್ಲದಿದ್ದರೆ ಗೊನೆ ಸಂಪೂರ್ಣ ನಾಶ ಗೊಳಿಸುತ್ತದೆ, ಇದನ್ನು ಕಿತ್ತೆಸೆಯಲು ಕೂಲಿಯಾಳುಗಳ ಹೊರೆ ಹೆಚ್ಚುವಾರಿಯಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಬೊಮ್ಮಗಾನಹಳ್ಳಿ, ಕಮ್ಮಗುಟ್ಟಹಳ್ಳಿ, ಅರೂರು, ಪೇರೆಂಸಂದ್ರ, ಆದೇಗಾರಹಳ್ಳಿ, ದೊಡ್ಡಮರಳಿ, ಡಿ.ಹೊಸುರು, ಹೊಸಹಳ್ಳಿ, ಯಲುವಹಳ್ಳಿ, ದೇವಿಶೆಟ್ಟಹಳ್ಳಿ, ಕುಪ್ಪಹಳ್ಳಿ, ಚದಲುಪುರ, ಕೊತ್ತನೂರು, ನಂದಿ, ಅರಸನಹಳ್ಳಿ, ಪಟ್ರೇನಹಳ್ಳಿ, ಮತ್ತಕದಹಳ್ಳಿ, ಕಣಿತಹಳ್ಳಿ, ಗವಿಗಾನಹಳ್ಳಿ, ಕೊಳವನಹಳ್ಳಿ, ಶ್ರೀರಾಮಪುರ, ಅಗಲಗುರ್ಕಿ ಸೇರಿದಂತೆ ಬಹುತೇಕ ಕಡೆ ನೂರಾರು ಎಕರೆ ದ್ರಾಕ್ಷಿ ತೋಟಗಳು ಕೊಯ್ಲಿಗೆ ಬಂದಿದ್ದು, ದ್ರಾಕ್ಷಿಗೆ ಬೇಡಿಕೆ ಬರುವ ನಿರೀಕ್ಷೆಯಲ್ಲಿ ದೇವರ ಮೊರೆ ಹೋಗಿದ್ದಾರೆ.

ಆತಂಕ ಶುರು:
ಸರಾಸರಿ ಇನ್ನು ಐದು ದಿನ ವಾರದೊಳಗೆ ದ್ರಾಕ್ಷಿ ತೋಟಗಳಲ್ಲಿ ಹಣ್ಣು ಕೊಯ್ಲು ನಡೆಯದಿದ್ದರೆ ಟನ್‍ಗಟ್ಟಲೇ ದ್ರಾಕ್ಷಿ ತಿಪ್ಪೆ ಪಾಲಾಗಲಿದೆ. ಹೀಗಾಗಿ ಬೆಲೆ ಕುಸಿತದ ಸಮಯದಲ್ಲಿ ಬೆಳೆದ ದ್ರಾಕ್ಷಿಯನ್ನು ಮಾರಾಟ ಮಾಡುವುದು ಹೇಗೆ ಎಂಬ ಆತಂಕ ಬೆಳೆಗಾರರನ್ನು ಆವರಿಸಿದೆ.
ಬೇಡಿಕೆ ಕುಸಿತಕ್ಕೆ ಕಾರಣವೇನು?
ಓರಿಸ್ಸಾ, ಬಿಹಾರ, ಮಹಾರಾಷ್ಟ್ರದ ಸೇರಿದಂತೆ ದೇಶದ ವಿವಿಧೆಡೆಗೆ ಜಿಲ್ಲೆಯಿಂದ ದ್ರಾಕ್ಷಿ ರಫ್ತು ಆಗಲಿದೆ. ಈಗ ಆ ಭಾಗದಲ್ಲಿ ಶೀತಲೀಕರಣ ಘಟಕಗಳಲ್ಲಿನ ದ್ರಾಕ್ಷಿಯನ್ನು ಮಾರುಕಟ್ಟೆ ಬಿಟ್ಟಿರುವ ಪರಿಣಾಮ ಈ ಭಾಗದ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾಗಿದೆ. ಇನ್ನೂ 15 ದಿನಗಳ ಕಾಲದವರೆಗೂ ಅಲ್ಲಿಗೆ ಅಷ್ಟಾಗೀ ದ್ರಾಕ್ಷಿ ಬೇಡಿಕೆಯಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಬೆಳೆದ ದ್ರಾಕ್ಷಿಗೆ ಬೇಡಿಕೆ ಇಲ್ಲವಾಗಿದೆ.
ಕಳೆದ ವರ್ಷ ಜೂನ್ ಮೇ ತಿಂಗಳಲ್ಲಿ ದ್ರಾಕ್ಷಿಯ ಉತ್ತಮ ಫಸಲು ಬಂದಾಗ, ಕೊಳ್ಳುವವರಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ನಾವು ಕೇಳಿದಷ್ಟು ದರಕ್ಕೆ ಕೊಳ್ಳಲು ಖರೀದಿದಾರರು ಸಿದ್ಧರಿದ್ದರು. ಕಳೆದ ವರ್ಷ ಮಾವಿನ ಹಣ್ಣಿನ ಹೊಡೆತ ಇದ್ದರೂ ದ್ರಾಕ್ಷಿ ಕೆ.ಜಿಗೆ 40 ರಿಂದ 50 ರೂ.ವರೆಗೆ ಮಾರಾಟ ಮಾಡಿದ್ದೇವು. ಆದರೆ, ಈಗ ಮಾವಿನ ಹೊಡೆತ ಇಲ್ಲದಿದ್ದರೂ ಕೊಟ್ಟಷ್ಟು ಬೆಲೆಗೆ ಮಾರಾಟ ಮಾಡಲು ಸಿದ್ಧವಿದ್ದರೂ ವ್ಯಾಪಾರಸ್ಥರು ಖರೀದಿಗೆ ಮುಂದಾಗದಿರುವುದು ಬೇಸರವಾಗಿದೆ ಎಂದು ದ್ರಾಕ್ಷಿ ಬೆಳೆಗಾರರು ಆಳಲು ತೋಡಿಕೊಂಡಿದ್ದಾರೆ.
ಶೀತಲೀಕರಣ ಘಟಕದ ಕೊರತೆ:
ರೈತರು ಸಂಕಷ್ಟಕ್ಕೆ ಸಿಲುಕಲು ಮುಖ್ಯವಾಗಿ ದ್ರಾಕ್ಷಿ ಬೆಳೆಗಾರರಿಗೆ ಬೇಕಾದ ಶೀತಲೀಕರಣ ಘಟಕದ ಕೊರತೆ ಎದ್ದು ಕಾಣುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಬಿಜಾಪುರ ಜಿಲ್ಲೆ ಹೊರತುಪಡಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ. ಬೆಲೆ, ಬೇಡಿಕೆ ಕುಸಿತದ ಸಂದರ್ಭದಲ್ಲಿ ದ್ರಾಕ್ಷಿಯನ್ನು ದೀರ್ಘ ಕಾಲದವರೆಗೂ ಉತ್ತಮ ಗುಣಮಟ್ಟದಿಂದ ಕಾಯ್ದುಕೊಳ್ಳಲು ಜಿಲ್ಲೆಯಲ್ಲಿ ಶೀತಲೀಕರಣ ಘಟಕ ಇಲ್ಲ. ರೈತರ ಪಾಲಿಗೆ ಇದು ದೊಡ್ಡ ಸಮಸ್ಯೆಯಾಗಿದೆ.
ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆಂದೇ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ದ್ರಾಕ್ಷಿ ಬೆಳೆಗಾರರನ್ನು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ. ಪ್ರಸ್ತುತ ದ್ರಾಕ್ಷಿ ಬೆಳೆಗಾರರ ಬದುಕು ಬಾಣಲೆ ಇಂದ ಬೆಂಕಿಗೆ ಬಿದ್ದಂತಾಗಿದ್ದು, ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ದ್ರಾಕ್ಷಿ ಬೆಳೆಗಾರ ತ್ರಿಭುವನ್, ಒಂದು ಎಕರೆಯಲ್ಲಿ ದಿಲ್‍ಖುಷ್ ತಳಿಯ ದ್ರಾಕ್ಷಿ ಬೆಳೆದಿರುವೆ. ಈವರೆಗೆ ಸುಮಾರು 5 ಲಕ್ಷ ಖರ್ಚು ತಗಲಿದೆ. ಇಳುವರಿ ಚೆನ್ನಾಗಿ ಬಂದು ಈಗ ಕಟಾವಿಗೆ ಸಿದ್ಧವಿದೆ. ಆದರೆ ಖರೀದಿಸುವವರೇ ಇಲ್ಲ. ಮಳೆಯಿಂದ ಹಣ್ಣು ಡ್ಯಾಮೆಂಜ್ ಆಗುತ್ತಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications