ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ, ಮೈಸೂರಲ್ಲಿ ನಿಲ್ಲದ ಪ್ರತಿಭಟನೆ
ಮೈಸೂರು, ಫೆ. 6: ಯುಪಿಎ ಸರ್ಕಾರ 2013ರಲ್ಲಿ ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆಗೆ ಎನ್‌ಡಿಎ ಸರ್ಕಾರ ತಂದಿರುವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಇನ್ನೂ ಮುಂದುವರಿದಿದೆ. ಹಿಂಕಾಲ್‌ನಲ್ಲಿ ಗುರುವಾರ ಮೈಸೂರು-ಹುಣಸೂರು ರಸ್ತೆ ಹಾಗೂ ಔಟರ್ ರಿಂಗ್ ರೋಡ್ ಜಂಕ್ಷನ್‌ನಲ್ಲಿ ಪ್ರತಿಭಟನೆ ಮುಂದುವರಿದಿದೆ. ಇದರಿಂದ ಕೆಲಕಾಲ ಸಂಚಾರ ಸಮಸ್ಯೆ ಉಂಟಾಗಿತ್ತು.
ಮಾಜಿ ಸಚಿವ ಎ.ಎಚ್. ವಿಶ್ವನಾಥ ನೇತೃತ್ವದಲ್ಲಿ ಜಮಾಯಿಸಿದ ರೈತರು ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ನರೇಂದ್ರ ಮೋದಿ ಅವರು ಬ್ರಿಟಿಷ್ ಸರ್ಕಾರದ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿದರು.

ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ರೈತರನ್ನು ಅಣಕಿಸುವಂತಿದೆ. ಲೋಕಸಭೆಯಲ್ಲಿ ಚರ್ಚೆಗೊಳಪಡಿಸದೆ ತಿದ್ದುಪಡಿ ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ಹಾಗೂ ಜನವಿರೋಧಿ ನೀತಿ ಎಂದು ಟೀಕಿಸಿದರು. [ಮೈಸೂರಿಂದ ಕೇರಳಕ್ಕೆ ವಿದ್ಯುತ್, ರೈತರ ಪ್ರತಿಭಟನೆ]
ಕಾರ್ಪೊರೇಟ್ ಲಾಬಿಗೆ ಮಣಿದು ನರೇಂದ್ರ ಮೋದಿ ಈ ತಿದ್ದುಪಡಿ ತಂದಿದ್ದಾರೆ. ಇದರಿಂದ ರೈತರಿಗೆ ಆಗುವ ಅನ್ಯಾಯದ ಅರಿವಿದೆ. ಆದ್ದರಿಂದ ಹೋರಾಟ ಅನಿವಾರ್ಯ ಎಂದು ವಿಶ್ವನಾಥ ಹೇಳಿದ್ದಾರೆ.
ಭೂ ಸ್ವಾಧೀನ ಕಾಯ್ದೆಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಮೂರನೇ ಪ್ರತಿಭಟನೆಯಾಗಿದೆ. ತಿದ್ದುಪಡಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications