ರೈತರ ನೀರಾವರಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್: ಇಲ್ಲವಾದಲ್ಲಿ ಸಬ್ಸಿಡಿಗೆ ತಡೆ
ಬೆಂಗಳೂರು, ಜುಲೈ 08: ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ಕೃಷಿ ಪಂಪ್ ಸೆಟ್‌ಗಳ ಆರ್‌ಆರ್ ಸಂಖ್ಯೆಯನ್ನು ಗ್ರಾಹಕರ ಆಧಾರ್ ಸಂಖ್ಯೆಗಳಿಗೆ ಜೋಡಿಸುವ ಕಾರ್ಯವನ್ನು ಆರಂಭಿಸಿದೆ. ಇದರಿಂದಾಗಿ ರೈತರು ಗೊಂದಲಗೊಂಡಿದ್ದಾರೆ.
10 ಹೆಚ್‌ಪಿ ವರೆಗಿನ ರೈತರ ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲಾಗುತ್ತಿದೆ. ಇಂಧನ ಇಲಾಖೆ ನೀಡಿರುವ ಸೂಚನೆ ಅನ್ವಯ ಎಸ್ಕಾಂಗಳು ಈ ಕಾರ್ಯಕ್ಕೆ ಚಾಲನೆ ನೀಡಿವೆ.

ಎಸ್ಕಾಂಗಳು ಐಪಿಸೆಟ್‌ಗಳ ಆರ್. ಆರ್. ಸಂಖ್ಯೆಗಳನ್ನು ಗ್ರಾಹಕರ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಬೇಕು. ವಿಫಲವಾದರೆ, ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡದ ಆರ್. ಆರ್. ಸಂಖ್ಯೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸಬ್ಸಿಡಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೆಇಆರ್‌ಸಿ ತನ್ನ ಆದೇಶದಲ್ಲಿ ತಿಳಿಸಿದೆ.
ಆದ್ದರಿಂದ ಎಲ್ಲಾ ಅಧಿಕೃತ ಐಪಿ ಸೆಟ್ ಹೊಂದಿರುವ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಐಪಿ ಸೆಟ್ ಆರ್. ಆರ್. ನಂಬರ್‌ಗೆ ಲಿಂಕ್ ಮಾಡಲು ಹತ್ತಿರದ ಲೈನ್‌ಮ್ಯಾನ್, ಮೀಟರ್ ರೀಡರ್, ವಿದ್ಯುತ್ ಸರಬರಾಜು ಕಂಪನಿ ಶಾಖೆಯ ಉಪ ವಿಭಾಗದವರನ್ನು ಸಂಪರ್ಕಿಸಬೇಕು.
ಸಬ್ಸಿಡಿ ಕಡಿತದ ಆತಂಕ: ಆಧಾರ್ ಸಂಖ್ಯೆಯನ್ನು ಐಪಿ ಸೆಟ್ ಆರ್. ಆರ್. ನಂಬರ್‌ಗೆ ಲಿಂಕ್ ಮಾಡದಿದ್ದರೆ ಭವಿಷ್ಯದಲ್ಲಿ ಕೃಷಿ ಇಲಾಖೆಯಿಂದ ಸಿಗುವ ಸಬ್ಸಿಡಿ ನಿಂತು ಹೋಗುವ ಆತಂಕ ರೈತರಲ್ಲಿ ಉಂಟಾಗಿದೆ. ಸರ್ಕಾರದ ಎಲ್ಲಾ ಸಬ್ಸಿಡಿ ಯೋಜನೆಗಳಿಗೆ ಈಗಾಗಲೇ ಆಧಾರ್ ಲಿಂಗ್ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ 2024-25ನೇ ಸಾಲಿನಲ್ಲಿ ದರ ಪರಿಷ್ಕರಣೆ ಮಾಡುವ ಆದೇಶದಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಿದೆ. ಆದ್ದರಿಂದ ಎಸ್ಕಾಂಗಳು 10 ಹೆಚ್‌ಪಿ ಪಂಪ್ ಸೆಟ್ ಹೊಂದಿರುವ ರೈತರ ಆಧಾರ್ ಸಂಖ್ಯೆಯನ್ನು ಸಂಗ್ರಹ ಮಾಡುತ್ತಿದೆ.
ಹಲವು ಸಂದರ್ಭದಲ್ಲಿ ಆಧಾರ್ ಸಂಖ್ಯೆ, ಐಪಿ ಸೆಟ್ ಆರ್. ಆರ್. ನಂಬರ್‌ಗೆ ಹೊಂದಿಕೆಯಾಗುತ್ತಿಲ್ಲ. ಹಿಂದೆ ಕೃಪಿ ಪಂಪ್‌ಸೆಟ್‌ಗಳನ್ನು ಅಪ್ಪ, ಅಜ್ಜನ ಹೆಸರಿನಲ್ಲಿ ನೋಂದಣಿ ಮಾಡಿಸಲಾಗಿದೆ. ಆದರೆ ಈಗ ರೈತರು ತಮ್ಮ ಆಧಾರ್ ನಂಬರ್ ನೀಡುತ್ತಿದ್ದು, ಸಮಸ್ಯೆಗೆ ಕಾರಣವಾಗಿದೆ.
ಆಧಾರ್ ಸಂಖ್ಯೆಯನ್ನು ಐಪಿ ಸೆಟ್ ಆರ್. ಆರ್. ನಂಬರ್‌ಗೆ ಲಿಂಕ್ ಮಾಡುವ ಪ್ರಕ್ರಿಯೆ ಇನ್ನೂ ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲಿ ಇದೆ. ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಇನ್ನೂ ಆದೇಶ ಹೊರಡಿಸಿಲ್ಲ. ಆದರೆ ಲಿಂಕ್ ಮಾಡದಿದ್ದರೆ ಸಬ್ಸಿಡಿ ತಡೆ ಹಿಡಿಯಲಾಗುತ್ತದೆ ಎಂಬುದು ರೈತರ ಆತಂಕ.
ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ 34.17 ಲಕ್ಷ ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಎಸ್ಕಾಂಗಳಿಗೆ 10 ರಿಂದ 11 ಕೋಟಿಯನ್ನು ಪಾವತಿ ಮಾಡುತ್ತಿದೆ. ಅಕ್ರಮವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದಿರುವುದು ಪತ್ತೆ ಹಚ್ಚಲು ಆಧಾರ್ ಲಿಂಕ್ ಮಾಡಲಾಗುತ್ತಿದೆ ಎಂಬುದು ಸದ್ಯದ ಮಾಹಿತಿ.
ಕೆಲವು ವ್ಯಕ್ತಿಗಳು ಎರಡು, ಮೂರು ಪಂಪ್‌ಸೆಟ್‌ಗಳಿಗೆ ಸರ್ಕಾರದ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಸರ್ಕಾರದ ಉಚಿತ ವಿದ್ಯುತ್ ಯೋಜನೆ ಸರಿಯಾದ ರೈತರನ್ನು ತಲುಪಬೇಕು ಎಂದು ಖಚಿತಪಡಿಸಿಕೊಳ್ಳಲು ಆಧಾರ್ ಮತ್ತು ಕೃಷಿ ಪಂಪ್ ಸೆಂಟ್ ಲಿಂಕ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ.












Click it and Unblock the Notifications