ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಹಿತಕರ; ಮಂಡ್ಯ ಡಿಸಿ

ಮಂಡ್ಯ, ಡಿಸೆಂಬರ್ 23; "ರಾಗಿ, ನವಣೆ, ಸಜ್ಜೆ ಹೀಗೆ ವಿವಿಧ ಸಿರಿಧಾನ್ಯಗಳಿವೆ. ಕೊಬ್ಬಿನಾಂಶ ಕಡಿಮೆ ಹೊಂದಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಹಿತಕರ" ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲ ಕೃಷ್ಣ ಹೇಳಿದರು.

ಶುಕ್ರವಾರ ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.

"ಸಿರಿಧಾನ್ಯ 15ನೇ‌ ಶತಮಾನದಲ್ಲೇ ಬಳಕೆಯಲ್ಲಿತ್ತು. ಆಗಲೇ ರಾಗಿಯನ್ನು ಗ್ರಾಮಧಾನ್ಯ ಎಂದು ಪ್ರಚಾರಪಡಿಸಲಾಗಿತ್ತು. ಸಿರಿಧಾನ್ಯ ಎಲ್ಲಾ ಹವಮಾನಕ್ಕೂ ಹೊಂದಿಕೊಂಡು ಕಡಿಮೆ ಕೀಟಬಾಧೆ, ಹೆಚ್ಚು ರೋಗಕ್ಕೆ ಒಳಗಾಗದೇ, ಕಡಿಮೆ ಮಳೆ ಇದ್ದರೂ ಬೆಳೆಯುತ್ತದೆ. ಈ ಹಿನ್ನಲೆಯಲ್ಲಿ ಕಡಿಮೆ ಖರ್ಚು ಮಾಡಿ ಸಿರಿಧಾನ್ಯ ಬೆಳೆದು ರೈತರು ಹೆಚ್ಚಿನ ಆದಾಯ ಗಳಿಸಬಹುದು" ಎಂದರು.

Eating Millet Will Help For Good Health Says Mandya DC

"ಸಿರಿಧಾನ್ಯ ಮೊದಲು ಬಡವರ ಆಹಾರವಾಗಿತ್ತು. ಇಂದು ವೈದ್ಯರು ಇದರ ಮಹತ್ವವನ್ನು ತಿಳಿಸಿ ಶ್ರೀಮಂತರೂ ಸೇರಿದಂತೆ ಎಲ್ಲರೂ ಸೇವಿಸುತ್ತಿದ್ದಾರೆ. ರೈತರನ್ನು ಸಿರಿಧಾನ್ಯ ಬೆಳೆಯುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಸಿರಿಧಾನ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸಬೇಕು" ಎಂದು ಕರೆ ನೀಡಿದರು.

"ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿಸಲು ಮಾನ್ಯ ಪ್ರಧಾನಮಂತ್ರಿಗಳು ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ 2023 ಅನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿರುತ್ತಾರೆ‌. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯವರು ಸಾರ್ವಜನಿಕರು, ರೈತರಲ್ಲಿ ಅರಿವು ಮೂಡಿಸಲು ಇಂದು ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್. ಹುಲ್ಮನಿ ಮಾತನಾಡಿ, "ಮಾಜಿ ಪ್ರಧಾನಮಂತ್ರಿ ದಿವಂಗತ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥ ರೈತದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವರ್ಷ ಸಿರಿಧಾನ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ" ಎಂದರು.

Eating Millet Will Help For Good Health Says Mandya DC

"ಸಿರಿಧಾನ್ಯ ಭಾರತೀಯ ಆಹಾರ ಪದ್ಧತಿಗೆ ಹೊಸದಲ್ಲ. ನಮ್ಮ ಪೂರ್ವಜರು ಹೆಚ್ಚು ಸಿರಿಧಾನ್ಯವನ್ನು ಆಹಾರವಾಗಿ ಬಳಸಿ ಗಟ್ಟಿ ಮಟ್ಟಾಗಿ ಆರೋಗ್ಯವಾಗಿದ್ದರು. ಸಿರಿಧಾನ್ಯಕ್ಕೆ ನಾವು ಇಂದು ಮಹತ್ವವನ್ನು ನೀಡಿ, ಹೆಚ್ಚಿನ ಬಳಕೆಗೆ ಮುಂದಾಗಿದ್ದೇವೆ" ಎಂದು ತಿಳಿಸಿದರು.

"ಮೊದಲು ಅಕ್ಕಿಯನ್ನು ಶ್ರೀಮಂತರೂ ಮಾತ್ರ ಸೇವಿಸುತ್ತಿದ್ದರೂ, ಸಿರಿಧಾನ್ಯ ಬಡವರ ಪಾಲಾಗಿತ್ತು. ಇಂದು ಬದಲಾವಣೆಯಾಗಿ ಸಿರಿಧಾನ್ಯ ಶ್ರೀಮಂತರ ಪಾಲಾಗಿದೆ. ಸಿರಿಧಾನ್ಯವನ್ನು ರೈತರು ಹೆಚ್ಚು ಬೆಳೆದು ಎಲ್ಲರಿಗೂ ಸೇವನೆಗೆ ಲಭ್ಯವಾಗುವಂತೆ ಮಾಡಬೇಕು. ರೈತರ ಆದಾಯ ಸಹ ಹೆಚ್ಚಬೇಕು" ಎಂದು ಆಶಿಸಿದರು.

ಕೃಷಿಗೂ ಸಹ ಬೇಡಿಕೆ ಬರುವ ದಿನ ದೂರವಿಲ್ಲ: "ದೇಶಕ್ಕೆ ಅನ್ನ ನೀಡುವ ಕೃಷಿ ಪದ್ಧತಿ ಮಾತ್ರ ಸರ್ವಕಾಲಿಕವಾಗಿ ಉಳಿಯುತ್ತದೆ. ಕೃಷಿ ಜೀವನ ಕಷ್ಟಕರ ಎಂದು ಬೇರೆ ಉದ್ಯೋಗ ಹುಡುಕಿ ಹೊರಟವರ ಸಂಖ್ಯೆ ಹೆಚ್ಚು, ವ್ಯವಸಾಯ ಜೀವನಕ್ಕೆ ಪ್ರಮುಖ ಎಂದು ತಿಳಿದಿದ್ದರೂ ಹೆಚ್ಚು ಜನ ವಿಮುಖರಾಗಿದ್ದಾರೆ. ಕೃಷಿ ಹಾಗೂ ರೈತ ಉದ್ಯೋಗಕ್ಕೂ ಬೇಡಿಕೆ ಬರುವ ದಿನ ದೂರವಿಲ್ಲ" ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್. ಹುಲ್ಮನಿ ತಿಳಿಸಿದರು.

ಕೃಷಿ ಇಲಾಖೆ ವತಿಯಿಂದ ರೈತ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕೃಷಿಯಲ್ಲಿ ಬಹಳ ಸವಾಲುಗಳಿವೆ. ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚು. ಕೃಷಿಯಲ್ಲಿ ಕಾರ್ಮಿಕರ ಕೊರತೆ ಇದೆ. ಯಂತ್ರೋಪಕರಣ ಆಧುನಿಕ ಪದ್ಧತಿ ಬಳಸಲು ಹಣದ ಕೊರತೆ ಇದೆ. ರೈತರು ಸಂಘಟಿತರಾಗಿ ಗುಂಪುಗಳನ್ನು ಮಾಡಿಕೊಂಡು ತಮಗೆ ಬೇಕಿರುವ ಯಂತ್ರೋಪಕರಣಗಳನ್ನು ಖರೀದಿಸಿ ಬಳಸುವ ಮನಸ್ಥಿತಿ ಬೆಳಸಿಕೊಳ್ಳಬೇಕಿದೆ" ಎಂದರು.

"ಕೃಷಿ ಲಾಭದಾಯಕ ಹುದ್ದೆಯಾಗಬೇಕು, ಹಿಂದಿನ ಕಾಲದಲ್ಲಿ ಬೆಲ್ಲದಲ್ಲಿ ಮಾಡಿದ ಟೀ ಎಂದರೆ ಅದು ಬಡವರು ಕುಡಿಯುವ ಟೀ ಎನ್ನುತ್ತಿದ್ದರೂ, ಇಂದು ಪೋಷಕಾಂಶ ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿದ್ದು, ಶ್ರೀಮಂತರು ಇಂದು ಹೆಚ್ಚು ಬೆಲ್ಲದಿಂದ ಮಾಡಿದ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದಾರೆ. ಈ ಬದಲಾವಣೆ ಗಮನಿಸಿದಾಗ, ಮಂಡ್ಯ ಜಿಲ್ಲೆಯಲ್ಲಿ ಬೆಲ್ಲಕ್ಕೆ ಹೆಚ್ಚು ಬೇಡಿಕೆ ಬರಬೇಕು ಆದರೆ ಇಂದು ಕೇವಲ 1600 ಆಲೆಮನೆಗಳು ಕಾರ್ಯನಿರ್ವಹಿಸುತ್ತಿದೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+