ಬರಗಾಲ; ಜಾನುವಾರುಗಳಿಗೆ ಮೇವು ಸಂರಕ್ಷಿಸಿಡಲು ಕರೆ
ಶಿವಮೊಗ್ಗ, ನವೆಂಬರ್ 07; ಈ ಬಾರಿ ನೈಋತ್ಯ ಮುಂಗಾರು ಮಳೆ ಕೈಕೊಟ್ಟು ಸಂಕಷ್ಟ ತಂದಿದೆ. ಒಂದು ಕಡೆ ಜನರು ಮತ್ತೊಂದು ಕಡೆ ಪ್ರಾಣಿಗಳು ಬೇಸಿಗೆಯಲ್ಲಿ ಪರದಾಟ ನಡೆಬೇಕಾಗಿದೆ. ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಸಹ ಎದುರಾಗುವ ನಿರೀಕ್ಷೆ ಇದೆ.
ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಜಿಲ್ಲೆಯ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಯುವ ಧಾನ್ಯಗಳ ಕಟಾವಣೆಯಾದ ನಂತರ ಜಾನುವಾರುಗಳು ತಿನ್ನಲು ಯೋಗ್ಯವಾದ ಮೇವನ್ನು ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಲಾಗಿದೆ.

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ರೈತರಿಗೆ ಈ ಕುರಿತು ಕರೆ ನೀಡಿದ್ದಾರೆ. ಭತ್ತ, ಮುಸುಕಿನ ಜೋಳ, ಜೋಳ, ಗೋಧಿ, ರಾಗಿ, ಬಾಜ್ರಾ, ಕಡಲೆಕಾಯಿ, ಸಿರಿಧಾನ್ಯ, ಎಲ್ಲಾ ದ್ವಿದಳ ಧಾನ್ಯದ ಬೆಳೆಗಳು, ಅವರೆ, ಉದ್ದು, ಅಲಸಂದೆ, ತೊಗರಿ, ಹೆಸರುಬೇಳೆ, ಕಡಲೆಕಾಳು ಮತ್ತು ಹುರುಳಿ ಮುಂತಾದ ಬೆಳೆಗಳ ಹುಲ್ಲುಗಳನ್ನು ಬಣವೆ ಹಾಕಿ ಸಂರಕ್ಷಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮೇವನ್ನು ಸುಡಬೇಡಿ; ಮೇವನ್ನು ಸುಡದೆ, ಮಳೆ ನೀರಿನಿಂದ ಕೊಳೆತು ಹೋಗದಂತೆ ಜಾಗರೂಕತೆಯಿಂದ ಶೇಖರಿಸಿಟ್ಟುಕೊಳ್ಳಬೇಕು. ಒಂದು ವೇಳೆ ತಮ್ಮ ಬಳಿ ಇರುವ ಜಾನುವಾರುಗಳಿಗೆ ಬೇಕಾದ ಮೇವಿನ ಪ್ರಮಾಣಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚಿನ ಮೇವಿನ ಪ್ರಮಾಣ, ದರ, ತಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ/ ತಾಲೂಕಿನ ವೈಯಕ್ತಿಕ ರೈತರಿಗೆ ಮೇವಿನ ಅಭಾವ ಉಂಟಾದಲ್ಲಿ ತಮ್ಮ ವಿಳಾಸವನ್ನು ಅವರಿಗೆ ನೀಡಿ ಅವರಿಂದ ತಮ್ಮಲ್ಲಿರುವ ಹೆಚ್ಚುವರಿ ಮೇವನ್ನು ಖರೀದಿಸಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಜಿಲ್ಲೆಯಲ್ಲಿ ತೀವ್ರ ಮೇವಿನ ಕೊರತೆಯಾದಲ್ಲಿ ಸರ್ಕಾರವು ನೀಡುವ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್, ಜಿಲ್ಲೆಯಲ್ಲಿ ಶುಂಠಿ ಬೆಳೆಗೆ ಹೊದಿಕೆಗಾಗಿ ಒಣ ಹುಲ್ಲನ್ನು ಬಳಸುವುದು ಹೆಚ್ಚುತ್ತಿರುವುದರಿಂದ ಜಾನುವಾರುಗಳಿಗೆ ಒಣ ಮೇವಿನ ಕೊರತೆ ಉಂಟಾಗುವ ಸಂಭವ ಇದೆ. ಆದ್ದರಿಂದ ಒಣಹುಲ್ಲಿಗೆ ಬದಲಾಗಿ ಪರ್ಯಾಯ ವಸ್ತುಗಳನ್ನು ಬಳಸುವಂತೆ ಕರೆ ನೀಡಿದ್ದರು.
ಜಿಲ್ಲೆಯಾದ್ಯಂತ ತೋಟಗಾರಿಕೆ ಬೆಳೆ ಕ್ಷೇತ್ರ ಹೆಚ್ಚಾಗುತ್ತಿದ್ದು, ಭತ್ತ ಮತ್ತು ಇನ್ನಿತರೆ ಧಾನ್ಯಗಳ ಕ್ಷೇತ್ರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ಶಿವಮೊಗ್ಗ ಜಿಲ್ಲೆಯಾದ್ಯಂತ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲ್ಲಿ ಹೊದಿಕೆಗಾಗಿ ಒಣಹುಲ್ಲನ್ನು ಬಳಸುವುದು ಹೆಚ್ಚಾಗುತ್ತಿದೆ ಎಂದು ಹೇಳಿದ್ದರು.
ಶುಂಠಿಗೆ ಒಣಹುಲ್ಲು ಹೆಚ್ಚು ಬಳಕೆ ಮಾಡುವುದರಿಂದ ರೈತರ ಜಾನುವಾರುಗಳಿಗೆ ಒಣಮೇವಿನ ಕೊರತೆ ಉಂಟಾಗುವ ಸಂಭವವಿದೆ. ಇದರಿಂದಾಗಿ ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನೋಪಾಯ ನಡೆಸುತ್ತಿರುವ ರೈತಾಪಿ ಕುಟುಂಬದ ಜಾನುವಾರುಗಳಿಗೆ ಒಣ ಮೇವಿನ ಲಭ್ಯತೆ ಕಡಿಮೆಯಾಗಿ ಒಣ ಮೇವಿನ ದರ ಹೆಚ್ಚಾಗುವುದರಿಂದ ಆರ್ಥಿಕ ಹೊರೆಯಾಗುತ್ತಿದೆ ಎಂದು ತಿಳಿಸಿದ್ದರು.
ಶುಂಠಿ ಬೆಳೆಗೆ ಹೊದಿಕೆಗಾಗಿ ಒಣಹುಲ್ಲನ್ನು ಬಳಸುವುದನ್ನು ನಿಯಂತ್ರಿಸಿ ಪರ್ಯಾಯವಾಗಿ ಅಡಿಕೆ ಗರಿಗಳು/ ಕಾಡಿನಲ್ಲಿ ಸಿಗುವ ದರಗಲೆ/ ಇತ್ಯಾದಿ ಜಾನುವಾರುಗಳ ಮೇವಿಗೆ ಯೋಗ್ಯವಲ್ಲದ ಪದಾರ್ಥಗಳನ್ನು ಹೊದಿಕೆಗಾಗಿ ಬಳಸಲು ಶುಂಠಿ ಬೆಳೆಗಾರ ರೈತರಲ್ಲಿ ಕೋರಿದ್ದರು.












Click it and Unblock the Notifications