ಧಾರವಾಡ: ರೈತರ ಕಡೆಗೆ ಗಮನಹರಿಸಿ, ಸಚಿವರ ವಿರುದ್ಧ ಹೊರಟ್ಟಿ ಆಕ್ರೋಶ
ಧಾರವಾಡ, ಅಕ್ಟೋಬರ್, 20: ಸರ್ಕಾರಗಳು ತೋಟಗಾರಿಕೆ ಮಾಡುವ ರೈತರನ್ನು ಬೆಂಬಲಿಸಬೇಕು. ತೋಟಗಾರಿಕೆ ಹಾಗೂ ಕೃಷಿ ರೈತನ ಬೆನ್ನೆಲುಬಾಗಿದೆ. ತೋಟಗಾರಿಕೆ ಕೃಷಿಯನ್ನು ಮುಂದುವರಿಸಿಕೊಂಡು ಹೋಗಲು ಇಲಾಖೆಗೆ ಸಂಬಂಧಿಸಿದ ಸಚಿವರು, ಕಾರ್ಯದರ್ಶಿಗಳು ರೈತರನ್ನು ಬೆಂಬಲಿಸಬೇಕು. ಅನ್ನ ಹಾಕುವವರ ಬಗ್ಗೆ ಚಿಂತನೆ ಮಾಡುವ ಬದಲು ಬರಿ ರಾಜಕಾರಣ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಗಳಲ್ಲಿ ರಾಜಕಾರಣ ಹೆಚ್ಚಾಗಿದೆ ಎಂದು ಧಾರವಾಡದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ರೈತರ ಕಡೆಗೆ ಗಮನಹರಿಸುವಂತೆ ಮನವಿ
ಈಗಿನ ಕೆಲ ಸಚಿವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರು ಕೇವಲ ಕ್ಷೇತ್ರದ ಮಂತ್ರಿ ಆಗಿದ್ದಾರೆ. ಸರ್ಕಾರ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಮಾಡಬೇಕು. ಉತ್ತರ ಕರ್ನಾಟಕಕ್ಕೆ ಯಾವ ಜನಪ್ರತಿನಿಧಿಗಳು ಭೇಟಿ ನೀಡುವುದಿಲ್ಲ. ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಕೆಲವರು ಇಲ್ಲಿನ ಸಮಸ್ಯೆಗಳನ್ನು ಕಂಡು ಕಾಣದಂತೆ ಕುರುಡರಂತೆ ಅಡ್ಡಾಡುತ್ತಿದ್ದಾರೆ. ಇವತ್ತಿನ ರಾಜಕಾರಣ ಕಲುಷಿತ ವಾತಾವರಣದಿಂದ ಕೂಡಿದೆ. ಮಂತ್ರಿಗಳಾದವರು ಸರಿಯಾಗಿ ಜನಪರ ಕೆಲಸಗಳನ್ನು ಮಾಡುತ್ತಿಲ್ಲ. ಬೆಂಗಳೂರು ಬಿಟ್ಟು ಹೊರ ಬರುವ ಪದ್ಧತಿ ಅವರಿಗೆ ಇಲ್ಲ. ನಾಳೆ ಜಿಲ್ಲೆಗೆ ಸಿಎಂ ಬರುತ್ತಿದ್ದು, ರೈತರ ಸಮಸ್ಯೆ ಬಗ್ಗೆ ಅವರ ಬಳಿ ಚರ್ಚಿಸಲಿದ್ದೇನೆ. ಮಂತ್ರಿಗಳನ್ನು ಎಚ್ಚರಿಸುವಂತೆ ಹೇಳುತ್ತೇನೆ ಎಂದರು.

ಸಚಿವರ ವಿರುದ್ಧ ಹೊರಟ್ಟಿ ಆಕ್ರೋಶ
ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಬೆಳೆಗಳನ್ನು ಕಳೆದುಕೊಂಡ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸಿಎಂ, ಡಿಸಿ ಹಾಗೂ ಸಿಇಒ ಈ ಬಗ್ಗೆ ಸಭೆ ಮಾಡಿದ್ದಾರೆ. ಅಧಿಕಾರಿಗಳು ಸೆಕ್ರೆಟರಿಗಳು ಕೆಲಸ ಮಾಡಬೇಕು. ಅವರು ಬೆಂಗಳೂರಿನಲ್ಲಿಯೇ ಕುಳಿತುಕೊಂಡರೆ ರೈತರ ಕಷ್ಟಗಳನ್ನು ಕೇಳುವುದು ಯಾರು? ಕೃಷಿ ಹಾಗೂ ತೋಟಗಾರಿಕೆಯ ಅಧಿಕಾರಿಗಳು ಇಂದಿನ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ನೌಕರಿ ಮಾಡಿ ಸಂಬಳ ತೆಗೆದುಕೊಳ್ಳುವದಷ್ಟೇ ಅಧಿಕಾರಿಗಳ ಕೆಲಸವಾಗಿದೆ ಎಂದು ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ರಾಜಕೀಯ ಸಭೆಗೆ ಮಾತ್ರ ಸಿಮೀತ ಎಂಬ ಪ್ರಶ್ನೆಗೆ ಇದನ್ನು ಸಿಎಂ ಎದುರಲ್ಲೇ ಹೇಳಿ, ನಾನು ಹೇಳಿದರೆ ತಪ್ಪಾಗುತ್ತದೆ. ಇಂತಹ ಕಾರ್ಯಕ್ರಮಕ್ಕೆ ಮಂತ್ರಿಗಳು, ಅಧಿಕಾರಿಗಳು ಎಲ್ಲರೂ ಬರಬೇಕು ಎಂದರು.












Click it and Unblock the Notifications