ಕೊಡಗಿನಲಿ ಮುಂಗಾರು ಮಳೆಯಲಿ ಸಮಸ್ಯೆಗಳ ಜೊತೆಯಲಿ

A common scene in Coorg during monsoon
ಮಡಿಕೇರಿ, ಜೂ. 5 : ಕಳೆದ ನಾಲ್ಕೈದು ದಿನಗಳಿಂದ ಕೊಡಗಿನಲ್ಲಿ ಮೋಡಕವಿದ ವಾತಾವರಣದೊಂದಿಗೆ ಮಳೆ ಸುರಿಯಲಾರಂಭಿಸಿದೆ. ಇದರಿಂದ ಇಲ್ಲಿನ ಜನ ಮುಂಗಾರು ಮಳೆ ಆರಂಭವಾಯಿತೆಂಬ ಸಂತಸದಲ್ಲಿದ್ದಾರೆ. ಹಾಗಾಗಿ ಪೇಟೆ ಪಟ್ಟಣಗಳಲ್ಲಿ ರಸ್ಸೋ... ರಸ್ಸೋ... ಎಲ್ಲೆಡೆಯೂ ಜನರು ಮಳೆಗಾಲಕ್ಕೆ ಅಗತ್ಯವಿರುವ ಕೊಡೆ, ಗಂಬೂಟ್, ಪ್ಲಾಸ್ಟಿಕ್ ಹ್ಯಾಟ್ ಮುಂತಾದ ವಸ್ತುಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಸರ್ವೆ ಸಾಮಾನ್ಯ.

ಮತ್ತೊಂದೆಡೆ ವೀರಾಜಪೇಟೆ ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ಮರಗಳು ನೆಲಕ್ಕುರುಳಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರೆ, ವಿದ್ಯುತ್ ತಂತಿ ತುಂಡರಿದು ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕವೂ ಕಡಿತಗೊಂಡು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಹಳ ಬೇಗವೇ ಮಳೆ ಪ್ರಾರಂಭವಾಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಗದ್ದೆ ಉಳುಮೆ, ಗೊಬ್ಬರ ಹಾಕುವುದು ಹೀಗೆ ವಿವಿಧ ಕೆಲಸಗಳಲ್ಲಿ ನಿರತರಾಗಿರುವುದು ಜಿಲ್ಲೆಯಾದ್ಯಂತ ಇರುವ ಗದ್ದೆ ಬಯಲುಗಳಲ್ಲಿ ಕಾಣಸಿಗುತ್ತದೆ.

ಬಿಡುವಿಲ್ಲದ ದುಡಿಮೆ : ಮಳೆ ಬೀಳುತ್ತಿದ್ದಂತೆಯೇ ಇಲ್ಲಿನ ಕೃಷಿಕರಿಗೆ ಬಿಡುವಿಲ್ಲದ ದುಡಿಮೆ. ಕಾಫಿ ತೋಟಕ್ಕೆ ಗೊಬ್ಬರ ಹಾಕುವುದು, ಮರ ಕಪಾತ್ ಮುಂತಾದ ಕೆಲಸಗಳನ್ನು ಅಗತ್ಯವಾಗಿ ಮಾಡಬೇಕಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ಡಿಮ್ಯಾಂಡೋ ಡಿಮ್ಯಾಂಡಾಗಿದೆ.

ಮತ್ತೊಂದೆಡೆ ಭಾಗಮಂಡಲ, ಬಲಮುರಿ, ನೆಲ್ಯಹುದಿಕೇರಿ ಮುಂತಾದ ನದಿ ತೀರದ ಪ್ರದೇಶಗಳಲ್ಲಿ ವಾಸವಿರುವ ಜನರಲ್ಲಿ ಆತಂಕ ಪ್ರಾರಂಭವಾಗಿದೆ. ಏಕೆಂದರೆ ಮಳೆಗೆ ನೆರೆ ಬಂದರೆ ಈ ಪ್ರದೇಶಗಳು ಮುಳುಗಡೆಯಾಗುತ್ತವೆ. ಆಗ ತಾವು ಕಷ್ಟಪಟ್ಟು ದುಡಿದುದೆಲ್ಲವನ್ನೂ ಬಿಟ್ಟು ಗಂಜಿ ಕೇಂದ್ರ ಸೇರಬೇಕಾಗುತ್ತದೆ. ಹೀಗಾಗಿ ತಮ್ಮ ಬದುಕು ನೀರು ಪಾಲಾಗುತ್ತದೆಯಲ್ಲ ಎಂಬ ಭೀತಿ ಇಲ್ಲಿನವರದ್ದಾಗಿದೆ. ಇನ್ನು ತಲಕಾವೇರಿ, ಭಾಗಮಂಡಲ ಸೇರಿದಂತೆ ಕೆಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡು ದ್ವೀಪಗಳಾಗಿಬಿಡುತ್ತವೆ ಇಂತಹ ಪ್ರದೇಶಗಳ ಜನ ಇದೀಗ ಮಳೆಗಾಲಕ್ಕೆ ಬೇಕಾದ ಸಾಮಾನು, ಸರಂಜಾಮುಗಳನ್ನು ಶೇಖರಿಸುವಲ್ಲಿ ತೊಡಗಿದ್ದಾರೆ.

ಮಳೆಗಾಲದಲ್ಲಿ ಮಳೆ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗೆ ಉರುಳುವುದರಿಂದ ವಾರಾನುಗಟ್ಟಲೆ ವಿದ್ಯುತ್, ದೂರವಾಣಿ ಸಂಪರ್ಕವಿಲ್ಲದೆ ದಿನಕಳೆಯ ಬೇಕಾದ ದುಸ್ಥಿತಿ ಇಲ್ಲಿನವರದ್ದಾಗಿದೆ.

ಬಟ್ಟೆ ಒಣಗಿಸೋದೇ ಸಮಸ್ಯೆ : ಇನ್ನು ಶಾಲಾ ಕಾಲೇಜಿಗೆ ತೆರಳುವ, ಆಫೀಸ್ ಕೆಲಸಕ್ಕೆ ಹೋಗುವ ಜನರ ಪಾಡು ಹೇಳತೀರದು. ಒಗೆದು ಹಾಕಿದ ಬಟ್ಟೆ ವಾರವಾದರೂ ಒಣಗದೆ ಫಂಗಸ್ ಬಂದು ಕಿರಿಕಿರಿಯಾಗುತ್ತದೆ. ಇದನ್ನು ತಪ್ಪಿಸಲು ಬಿದಿರಿನಿಂದ ಮಾಡಿದ ಬಳಂಜಿಗೆ ಮಾರುಹೋಗುತ್ತಾರೆ. ಬೆಂಕಿ ಕೆಂಡವನ್ನು ಬಳಂಜಿಯ ಒಳಗಿಟ್ಟು ಅದರ ಮೇಲೆ ಒಣಗಿದ ಶುಭ್ರ ಬಟ್ಟೆಯನ್ನು ಮುಚ್ಚಿ ಅದರ ಮೇಲೆ ಒಗೆದ ಬಟ್ಟೆಯನ್ನು ಹಾಕಿ ಒಣಗಿಸುತ್ತಾರೆ.

ಸದಾ ಮಂಜಿನ ಮುಸುಕಿನಲ್ಲಿರುವ ಮಡಿಕೇರಿಯಲ್ಲಿ ಬೀಸುವ ಗಾಳಿಗೆ, ಸುರಿಯುವ ಮಳೆಗೆ ಕೊಡೆ ಹಿಡಿದು ನಡೆಯೋದೇ ಒಂದು ಸಾಹಸದ ಕೆಲಸ. ಸರಿಯಾದ ವಾಹನ ಸೌಲಭ್ಯವಿಲ್ಲದ ಹಳ್ಳಿಗಳಿಂದ ಗದ್ದೆ, ತೋಟವನ್ನು ದಾಟಿ ಕೊಡೆ ಹಿಡಿದುಕೊಂಡು ಮಳೆಯಲ್ಲಿಯೇ ಮೂರ‍್ನಾಲ್ಕು ಕಿ.ಮೀ. ನಡೆದು ಶಾಲೆಗೆ ಹೋಗಿ ವಿದ್ಯೆ ಕಲಿಯುವ ಪುಟ್ಟ ಮಕ್ಕಳು ಇಲ್ಲಿದ್ದಾರೆ. ಕೆಲವೊಮ್ಮೆ ನದಿತೊರೆಗಳು ಉಕ್ಕಿ ಹರಿದಾಗ ಕಾಡಂಚಿನಲ್ಲಿ, ತೋಟಗಳ ನಡುವೆ ನೆಲೆಸಿರುವ ಮಕ್ಕಳು ಶಾಲೆಗೆ ಚಕ್ಕರ್ ಹೊಡೆದು ಗದ್ದೆಗಳಲ್ಲಿ ಅಣಬೆ ಹುಡುಕುತ್ತಾ ನದಿ ತಟದಲ್ಲಿ ಕುಳಿತು ಮೀನು, ಏಡಿ ಹಿಡಿಯುತ್ತಾ ಕಾಲ ಕಳೆಯುವುದು ಮತ್ತೊಂದು ವಿಶೇಷ. ಒಟ್ಟಾರೆ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲವೂ ಇದೆ. ಆದರೆ ಅದ್ಯಾವುದಕ್ಕೂ ಇಲ್ಲಿನವರು ತಲೆಕೆಡಿಸಿಕೊಳ್ಳುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+