ಕೊಡಗಿನ ಕಾಫಿ ಬೆಳೆಗಾರರಲ್ಲಿ ಮನೆ ಮಾಡಿದ ಆತಂಕ, ಇದಕ್ಕೆ ಮೂಲ ಕಾರಣ ಏನು ಗೊತ್ತಾ?, ಇಲ್ಲಿದೆ ವಿವರ

ಮಡಿಕೇರಿ, ಆಗಸ್ಟ್‌, 04: ಕೊಡಗಿನ ರೈತರಿಗೆ ಕಾಫಿ ಬೆಳೆಯೇ ಜೀವಾಳ.. ಇಲ್ಲಿನ ಹೆಚ್ಚಿನ ಜನ ಕಾಫಿ ಬೆಳೆಯನ್ನೇ ಅವಲಂಭಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಈ ವರ್ಷದ ವಾತಾವರಣ ಕಾಫಿ ಬೆಳೆಯ ಮೇಲೆ ಭಾರೀ ದುಷ್ಪರಿಣಾಮವನ್ನುಂಟು ಮಾಡಿದೆ. ಬೇಸಿಗೆಯಲ್ಲಿ ಸುಡು ಬಿಸಿಲಿನಿಂದ ಗಿಡಗಳು ಸಾವನ್ನಪ್ಪಿದರೆ, ಆದರೆ ಇದೀಗ ಮಳೆಗಾಲದಲ್ಲಿ ಒಮ್ಮೆಗೆ ಸುರಿದ ಭಾರೀ ಮಳೆಗೆ ಕಾಫಿ ಫಸಲು ನೆಲಕ್ಕುದುರುತ್ತಿದೆ. ಹೀಗಾಗಿ ಕಾಫಿಯನ್ನೇ ನಂಬಿದ್ದ ಬೆಳೆಗಾರರ ಮೊಗದಲ್ಲಿ ಆತಂಕ ಮನೆ ಮಾಡಿದೆ.

ಕಾಫಿಗೆ ಹೆಚ್ಚು ಮಳೆಯಾದರೂ ಮಾರಕವೇ. ಅದರಲ್ಲೂ ಒಮ್ಮೆಗೆ ಸುರಿಯುವ ಕುಂಭದ್ರೋಣ ಮಳೆಯಂತೂ ಫಸಲನ್ನು ನೆಲಕ್ಕುದುರುವಂತೆ ಮಾಡುತ್ತಿದೆ. ಈ ಬಾರಿಯೂ ಅದೇ ಆಗುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದ್ದರಿಂದ ತೊಂದರೆ ಅನುಭವಿಸಿದ್ದ ಬೆಳೆಗಾರರು ಮಳೆಗಾಲದ ವೇಳೆಗೆ ಒಮ್ಮೆಲೆ ಸುರಿಯುತ್ತಿರುವ ಮಳೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.

Coffee crop reached to destroyed Stage due to heavy rain: Kodagu farmers worried

ಕಾಫಿ ಬೆಳೆಗಾರರು ನೆಮ್ಮದಿಯಾಗಿರಬೇಕಾದರೆ ವಾತಾವರಣ ಪೂರಕವಾಗಿರಬೇಕು. ಎಲ್ಲವೂ ಕಾಲಕ್ಕೆ ತಕ್ಕಂತೆ ಆಗಬೇಕು. ಏಕೆಂದರೆ ಕಾಫಿ ವಾರ್ಷಿಕ ಬೆಳೆಯಾಗಿರುವುದರಿಂದ ವರ್ಷದ ಮೂರು ಕಾಲವೂ ಫಸಲಿನ ಮೇಲೆ ಪರಿಣಾಮ ಬೀರುವುದರಿಂದ ಎಲ್ಲವೂ ಸರಿಯಿದ್ದರೆ ಮಾತ್ರ ಬೆಳೆಗಾರ ಯಾವುದೇ ತೊಂದರೆಯಿಲ್ಲದೆ ಫಸಲು ಪಡೆಯಲು ಸಾಧ್ಯವಾಗುತ್ತದೆ.

ಕಾಫಿ ಬೆಳೆಗಾರರನ್ನು ಕಾಡಿದ ಮಳೆರಾಯ

ಪ್ರತಿವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಮಳೆ ಸುರಿಯಬೇಕು. ಈ ವೇಳೆಗೆ ಕಾಫಿ ಕೊಯ್ಲು ಮುಗಿಯುವುದರಿಂದ ಆಗ ಬೀಳುವ ಮಳೆಗೆ ಕಾಫಿ ಮೊಗ್ಗು ಬಂದು ಹೂವು ಅರಳುತ್ತದೆ. ಆದರೆ ಮಳೆ ಬಾರದೆ ಹೋದರೆ ನೀರಿನ ಸೌಲಭ್ಯ ಇರುವವರು ಸ್ಪಿಂಕ್ಲರ್ ಮೂಲಕ ತೋಟಕ್ಕೆ ನೀರು ಹಾಯಿಸುತ್ತಾರೆ. ನೀರು ಹಾಯಿಸಲು ಸೌಲಭ್ಯ ಇಲ್ಲದವರು ಮಳೆಯನ್ನೇ ಕಾಯುತ್ತಾರೆ. ಸಾಮಾನ್ಯವಾಗಿ ಜಿಲ್ಲೆಯ ಬಹತೇಕ ಭಾಗದಲ್ಲಿ ಮಳೆ ಇಲ್ಲದಂತಾಗಿದ್ದು, ಭಾಗಮಂಡಲ ವ್ಯಾಪ್ತಿಯಲ್ಲಿ ಮಾತ್ರ ಮಳೆಯಾಗುತ್ತದೆ.

ದುರಂತ ಎಂದರೆ ಈ ವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸರಿಯಾಗಿ ಮಳೆ ಸುರಿಯಲಿಲ್ಲ. ಕೊನೆ ಗಳಿಗೆಯಲ್ಲಿ ಕೆಲವೆಡೆ ಮಳೆ ಸುರಿಯುತ್ತಾದರೂ ಅದರಿಂದ ಪ್ರಯೋಜನವಾಗಲಿಲ್ಲ. ಕೆಲವೆಡೆ ಹೂ ಮಳೆ ಸುರಿದಿತ್ತು. ಆ ಮಳೆಗೆ ಕಾಫಿ ಗಿಡಗಳು ಹೂವು ಬಿಟ್ಟಿದ್ದವು. ಕೆಲವೆಡೆ ಏಪ್ರಿಲ್‌ನಲ್ಲಿ ಸುರಿದ ಮಳೆಗೆ ಹೂವು ಬಂದಿತ್ತು. ಬೇಸಿಗೆಯ ದಿನಗಳಲ್ಲಿ ಸರಿಯಾಗಿ ಮಳೆ ಸುರಿಯದ ಕಾರಣ ಬಿಟ್ಟ ಹೂವು ಕೂಡ ಸರಿಯಾಗಿ ಮಿಡಿಕಚ್ಚಲಿಲ್ಲ. ಜೊತೆಗೆ ಬಿಸಿಲಿನ ತಾಪಕ್ಕೆ ಗಿಡಗಳು ಒಣಗುವ ಸ್ಥಿತಿ ತಲುಪಿದ್ದವು.

ಮಳೆರಾಯ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ

ಮೇ ವೇಳೆಗೆ ಸ್ವಲ್ಪ ಮಳೆ ಬಂದಿದ್ದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮೇ ವೇಳೆಗೆ ಮಳೆ ಸುರಿದು ಭೂಮಿ ತೇವವಾದರೆ ಗೊಬ್ಬರ ಹಾಕುವುದು, ಚಿಗುರು ಮಾಡುವುದು, ಕಾಫಿ ಗಿಡ ಕಪಾತ್‌ ಮಾಡುವುದು ಮಾಡುತ್ತಿದ್ದರು. ಆದರೆ ಮಳೆ ಸರಿಯಾಗಿ ಸುರಿಯದ ಕಾರಣ ಎಲ್ಲ ಕೆಲಸವೂ ವಿಳಂಬವಾಗಿತ್ತು. ತದನಂತರ ಒಮ್ಮೆಲೆ ಮಳೆ ಸುರಿದಿದ್ದರಿಂದ ಬೆಳೆಗಾರರಿಗೆ ಕೆಲಸ ಮಾಡಿಸುವುದು ಕೂಡ ಕಷ್ಟವಾಗಿ ಪರಿಣಮಿಸಿತ್ತು.

ಜುಲೈನಲ್ಲಿ ಒಮ್ಮೆಲೆ ಸುರಿದ ಭಾರೀ ಮಳೆ ಸಂಕಷ್ಟ ತಂದಿದೆ. ಕಾಫಿ, ಕರಿಮೆಣಸು ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಕಾಫಿ ಮತ್ತು ಕರಿಮೆಣಸಿಗೆ ಉತ್ತಮ ದರ ದೊರೆಯುತ್ತಿದೆ. ಹೀಗಿರುವಾಗ ಇಳುವರಿ ಹೆಚ್ಚಾದರೆ ಬೆಳೆಗಾರರು ಒಂದಷ್ಟು ಹೆಚ್ಚಿನ ಆದಾಯ ನಿರೀಕ್ಷಿಸಲು ಸಾಧ್ಯವಾಗುತ್ತದೆ. ಆದರೆ ಇಷ್ಟರಲ್ಲೇ ಮಿಡಿಕಚ್ಚಿ ಕಾಯಿಯಾಗಿ ಬೆಳೆಯಬೇಕಾಗಿದ್ದ ಕಾಫಿ ಗಿಡದಿಂದ ಫಸಲು ಉದುರಲಾರಂಭಿಸಿದೆ.

ಸವಾಲಾಗಿ ಪರಿಣಮಿಸಿದ ಕಾಫಿ ಗಿಡಗಳ ನಿರ್ವಹಣೆ

ರೋಬಸ್ಟಾ ಕಾಫಿ ಗಿಡಗಳಲ್ಲಿ ಫಸಲು ಮಾತ್ರ ಉದುರುತ್ತಿದ್ದರೆ, ಅರೇಬಿಕಾದಲ್ಲಿ ಕಾಫಿ ಉದುರುವುದು ಮಾತ್ರವಲ್ಲದೆ, ಗಿಡಕ್ಕೂ ಕಾಂಡ ಕೊರಕ ರೋಗ ತಗುಲಿದೆ. ಜೊತೆಗೆ ಕೆಲವು ಗಿಡಗಳಲ್ಲಿ ಹಣ್ಣು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಅರೇಬಿಕಾ ಕಾಫಿ ಬೆಳೆಗಾರರಿಗೆ ನಿರ್ವಹಣೆ ಕಷ್ಟವಾಗುತ್ತಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕಾ ಬೆಳೆಯುತ್ತಿದ್ದಾರೆ. ಆದರೂ ಜಿಲ್ಲೆಯ ಹೆಚ್ಚಿನ ಪ್ರದೇಶದಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ.

ರೋಬಸ್ಟಾ ಬೆಳೆಯುವ ಪ್ರದೇಶಗಳಲ್ಲಿ ಅದರಲ್ಲೂ ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಗಾಳಿಬೀಡು, ವಣಚಲು, ಮೊಣ್ಣಂಗೇರಿ, ಕಾಲೂರು, ಹಮ್ಮಿಯಾಲ ಹಾಗೂ ಮುಟ್ಲು ಗ್ರಾಮ, ಚೆಯ್ಯಂಡಾಣೆ, ಕಕ್ಕಬ್ಬೆ, ನಾಪೋಕ್ಲು, ಶ್ರೀಮಂಗಲ, ಬಿರುನಾಣಿ, ಟಿ.ಶೆಟ್ಟಿಗೇರಿ ಸೇರಿದಂತೆ ವಿವಿಧೆಡೆ ಈಗಾಗಲೇ ಕಾಫಿ ಉದುರಲಾರಂಭಿಸಿವೆ. ಜೊತೆಗೆ ಗಿಡಗಳು ದುರ್ಬಲಗೊಂಡಿವೆ.

ಫಸಲು ನಾಶವಾಗುವ ಆತಂಕ

ಈ ಕುರಿತಂತೆ ಮಾತನಾಡಿರುವ ಭಾರತದ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಾಪೋಕ್ಲುವಿನ ಡಾ.ಕಾವೇರಪ್ಪ ಅವರು, ಪ್ರಸಕ್ತ ಸಾಲಿನಲ್ಲಿ ಬೇಗ ಹೂಮಳೆಯಾದ ಪರಿಣಾಮ ಬೇಗ ಕಾಯಿಕಟ್ಟಿದ ಕಾಫಿ ಫಸಲು ಈಗಾಗಲೇ ಸುರಿದ ತೀವ್ರ ಮಳೆಗೆ ನೆಲಕ್ಕುರುಳಿದೆ. ಇದರಿಂದ ಕೊಡಗಿನಲ್ಲಿ ಕಾಫಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಮುಂದಿನ 2 ತಿಂಗಳಲ್ಲಿ ಇನ್ನೂ ಹೆಚ್ಚಿನ ಮಳೆ ಸುರಿಯುವುದರಿಂದ ಇನ್ನಷ್ಟು ಫಸಲು ಹಾನಿಯಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾದರೆ ಕಾಫಿಯ ಫಸಲು ಉದುರುವ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಉತ್ತಮ ದರ ದೊರೆಯುತ್ತಿರುವಾಗಲೇ ಕಾಫಿ ಫಸಲು ಉದುರುತ್ತಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+