ಎಪಿಎಂಸಿ ಕೊಟ್ಟ ಸುದ್ದಿಗೆ ನಿಟ್ಟುಸಿರು ಬಿಟ್ಟ ಗ್ರಾಹಕ
ಬೆಂಗಳೂರು, ನವೆಂಬರ್, 09: ಹೊರಗಡೆ ಥಂಡಿಯ ವಾತಾವರಣವಿದ್ದರೆ ಎಲ್ಲರ ಮನೆಯಲ್ಲೂ ದೀಪಾವಳಿ ಹಬ್ಬದ ಬಿಸಿ ಜೋರಾಗುತ್ತಿದೆ. ಬೇಳೆ ಕಾಳು, ಹೂವು, ತರಕಾರಿ ಸೇರಿದಂತೆ ಹಬ್ಬದ ಸಂಭ್ರಮಕ್ಕೆ ಬೇಕಾದ ವಸ್ತುಗಳ ಖರೀದಿ ಭರಾಟೆ ಆರಂಭವಾಗಿದೆ.
ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಹ ಸುದ್ದಿ ಇಲ್ಲಿದೆ. ದೀಪಾವಳಿ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವರ್ತಕರು ಕೆ.ಜಿ ತೊಗರಿಯನ್ನು 135 ರಿಂದ 150 ರು. ಗೆ ಮಾರಾಟ ಮಾಡಲು ಮುಂದಾಗಿದ್ದಾರೆ.[ಆಯುಧ ಪೂಜೆ ಕುಂಬ್ಳಕಾಯಿ ತಲೆ ಮೇಲೆ ಒಡೆದಂಗಾಯ್ತು! ]

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಿರಿಯ ಉಪಾಧ್ಯಕ್ಷ ಎಂ.ಸಿ. ದಿನೇಶ್ ಈ ಮಾಹಿತಿ ನೀಡಿದ್ದು ಬೆಲೆ ಏರಿಕೆಯಿಂದ ಬಸವಳಿದಿದ್ದ ಗ್ರಾಹಕ ಕೊಂಚ ಚೇತರಿಸಿಕೊಳ್ಳುವಂತಾಗಿದೆ.
ಎಪಿಎಂಸಿ ಮುಷ್ಕರ ಹಿಂದಕ್ಕೆ
ಬೇಳೆಕಾಳು ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡಲು ಆಗ್ರಹಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ವರ್ತಕರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ರಾಜ್ಯದ 144 ಎಪಿಎಂಸಿ ಮತ್ತು ಸುಮಾರು 800 ಗಿರಣಿಗಳು ನವೆಂಬರ್ 9ರಿಂದ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭರವಸೆ ಬಳಿಕ ವ್ಯಾಪಾರಿಗಳು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಸಿಎಂಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಎಫ್‌ಕೆಸಿಸಿಐನ ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ, ಎಫ್‌ಕೆಸಿಸಿಐನ ಎಪಿಎಂಸಿ ಸಮಿತಿ ಸಹ ಅಧ್ಯಕ್ಷ ಭರತ್ ಕುಮಾರ್ ಆರ್.ಷಾ ಇದ್ದರು.












Click it and Unblock the Notifications