ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ನಿರ್ದೇಶನ
ಬೆಂಗಳೂರು:, ಜೂನ್ 2: ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ರೈತರಿಗೆ ಬೆಳೆಬೆಳೆಯಲು ಅಗತ್ಯ ಭಿತ್ತನೆ ಬೀಜ, ಗೊಬ್ಬರ ಮತ್ತು ರಾಸಾಯನಿಕ ವಸ್ತುಗಳನ್ನು ಒದಗಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದೇಶ ನೀಡಿದರು.
ಅವರು ಇಂದು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಈ ಸಲ ಮಳೆಗಾಲಕ್ಕೆ ಮುನ್ನವೇ ಶೇ.51 ರಷ್ಟು ಹೆಚ್ಚು ಮಳೆಯಾಗಿದ್ದು, ಮಳೆಗಾಲ ಮೂರುದಿನ ಮುಂಚಿತವಾಗಿ ಆರಂಭವಾಗಿದ್ದು ಇನ್ನೂ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರೈತರು ತುಂಬಾ ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದರು.
ರೈತರ ಕೃಷಿ ಚಟುವಟಿಕೆಗೆ ಯಾವುದೇ ಅಡ್ಡಿಯಾಗಬಾರದು. ಭಿತ್ತನೆ ಬೀಜ, ಗೊಬ್ಬರ ಮುಂತಾದಗಳನ್ನು ಪೂರೈಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕಟ್ಟುವಿಟ್ಟಿನ ಕ್ರಮ ಜರುಗಿಸುವಂತೆಯೂ ಸರ್ಕಾರದ ಮುಖ್ಯಾಧಿಕಾರಿಯವರಿಗೆ ಆದೇಶ ನೀಡಿದರು.

ತಾವು ಇಸ್ರೇಲ್ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಕೃಷಿ ಚಟುವಟಿಕೆಯನ್ನು ಅಧ್ಯಯನ ಮಾಡಿದ್ದು ಅವರು ಆಧುನಿಕ ಮಾದರಿಯಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ನಮ್ಮ ರಾಜ್ಯದಲ್ಲೂ ಇಸ್ರೇಲ್ ಮಾದರಿ ಕೃಷಿಯನ್ನು ತರಬೇಕೆಂದು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು.
ಇದಕ್ಕಾಗಿ ಮಂಡ್ಯದಲ್ಲಿ ಸುಮಾರು 900 ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿ ಕೃಷಿಯನ್ನು ಮಾಡಲು ಪೈಲೆಟ್ ಪ್ರೊಜೆಕ್ಟ್ ಕೈಗೊಳ್ಳಲಾಗುವುದು. ಇದಕ್ಕಾಗಿ ಇಸ್ರೇಲ್ ನಿಂದ ಪರಿಣತಿ ಹೊಂದಿದವರನ್ನು ಕರೆಸಲಾಗುವುದು ಎಂದೂ ತಿಳಿಸಿದರು.
ತೋಟಗಾರಿಕೆ ಬಗ್ಗೆ ಪ್ರಸ್ತಾಪಿಸಿದ ಅವರು ತೋಟಗಾರಿಕೆಯಲ್ಲೂ ಆಧುನಿಕತೆಯನ್ನು ತರಬೇಕು. ನಾವೂ ಈ ಕೃಷಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಳಪೆ ಬೀಜ ಮತ್ತು ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಸಿದರು.
ಸಕ್ಕರೆ ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿ ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸುಮಾರು 1500 ಕೋಟಿ ರೂಪಾಯಿಯನ್ನು ಕೊಡಬೇಕಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಮಧ್ಯಪ್ರವೇಶಿಸಬೇಕಾಗಿದ್ದು ತಾವು ಕೇಂದ್ರ ಸರ್ಕಾರದೊಂದಿಗೆ ಮಾತನಾಡುವುದಾಗಿಯೂ ಭರವಸೆ ನೀಡಿದರು.
ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಕೆ ರತ್ನಪ್ರಭಾ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ ವಿ ಪ್ರಸಾದ್ ಅವರು ಉಪಸ್ಥಿತರಿದ್ದರು












Click it and Unblock the Notifications