ಚಿಕ್ಕಬಳ್ಳಾಪುರ: ಸಾಲದಲ್ಲಿ ಮುಳುಗಿದ್ದ ರೈತನ ಕೈ ಹಿಡಿದು ಕೋಟ್ಯಧಿಪತಿ ಮಾಡಿದ ಕೆಂಪು ಸುಂದರಿ
ಚಿಕ್ಕಬಳ್ಳಾಪುರ, ಜುಲೈ 20: ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಪುಲಗಲ್ ಗ್ರಾಪಂ ವ್ಯಾಪ್ತಿಯ ಎ. ಬೆಲ್ಲಾಲಂಪಲ್ಲಿಯ ಪ್ರಗತಿಪರ ರೈತ ಬಿ. ನರಸಿಂಹಪ್ಪ ಅವರು 8 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 1 ಕೋಟಿ ರೂಪಾಯಿಗಿಂತ ಅಧಿಕ ಲಾಭ ಗಳಿಸಿದ್ದಾರೆ.
ನರಸಿಂಹಪ್ಪ ಹಗಲಿರುಳು ಎನ್ನದೆ ಹೊಲದಲ್ಲಿ ಟೊಮೆಟೊ ಬೆಳೆ ರಕ್ಷಣೆ ಮಾಡಿ ಅತ್ಯಧಿಕ ದರ ಸಿಕ್ಕಿದ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಕಳೆದ ತಿಂಗಳು ಟೊಮೆಟೊ ಬೆಳೆದ ರೈತರು ಸಮರ್ಪಕ ಬೆಲೆ ಸಿಗದೆ, ಯಾಕಾಗಿ ಈ ಬೆಳೆ ಬೆಳೆದವೋ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಟೊಮೆಟೊಗೆ ಎಲ್ಲಿಲ್ಲದ ಬೆಲೆ ಬಂದಿದೆ.

ರೈತ ಬಿ. ನರಸಿಂಹಪ್ಪ ಎ. ಬೆಲ್ಲಾಲಂಪಲ್ಲಿ ಗ್ರಾಮದಲ್ಲಿ ಒಂದಿಷ್ಟು ಜಮೀನು ಉಳುಮೆ ಮಾಡಿ ತರಕಾರಿ ಬೆಳೆಯುತ್ತಿದ್ದರು. ಈ ಹಿಂದೆಯೂ ಬೀನ್ಸ್, ಬದನೆಕಾಯಿ, ಮೆಣಸಿನಕಾಯಿ, ಕೋಸು ಇತರೆ ತರಕಾರಿಗಳನ್ನು ಬೆಳೆದು ಸ್ವಲ್ಪ ಮಟ್ಟಿಗೆ ನಷ್ಟ ಅನುಭವಿಸಿದ್ದರು. ಆದರೆ ಇದೀಗ ಅವರ ಪಾಲಿಗೆ ಅದೃಷ್ಟವೇ ಒಲಿದಿದ್ದು ಬಂಗಾರದ ಬೆಲೆ ಈಗ ಟೊಮೆಟೊಗೆ ಸಿಕ್ಕಿದೆ.
ಈಗಾಗಲೇ 3 ಬಾರಿ ಟೊಮೆಟೊ ಬೆಳೆದು ಕೊಯ್ದು ಮಾರಾಟ ಮಾಡಿದ್ದಾರೆ. 4 ತಿಂಗಳ ಹಿಂದೆ ಹೊಲ ಹಸನು ಮಾಡಿ, ನರ್ಸರಿಯಲ್ಲಿ ಸಸಿಗಳನ್ನು ನಾಟ ಮಾಡಿ ಅವುಗಳಿಗೆ ಔಷಧಿ ಹಾಗೂ ಗೊಬ್ಬರ ಹಾಕಿ ಬೆಳೆಸಿದ್ದರು. ಟೊಮೆಟೊ ಬೆಳೆಗೆ ಸಸಿಗಳ ನಾಟಿ ಪ್ರಾರಂಭದಿಂದ ಹಿಡಿದು ಮೊದಲ ಕೊಯ್ಲು ತನಕ 10 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಟೊಮೆಟೊ ಮಾರಾಟದಿಂದ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ.
ಈ ಹಿಂದೆ ಅನೇಕ ಬೆಳೆಗಳಿಗೆ ಬೆಲೆ ಸಿಗದೆ ಸಾಲಗಾರನಾಗಿದ್ದೆ. ಇದೀಗ ಟೊಮೆಟೊ ಒಂದೇ ಒಂದು ಬೆಳೆಯಿಂದ ಎಲ್ಲರಿಗೂ ಸಾಲ ತೀರಿಸಿ ನೆಮ್ಮದಿಯಾಗಿದ್ದೇನೆ ಎಂದು ರೈತ ಬಿ. ನರಸಿಂಹಪ್ಪ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಟೊಮೆಟೊ ಬಾಕ್ಸ್‌ಗಳನ್ನು ಕೋಲಾರ ಹಾಗೂ ಚಿಂತಾಮಣಿ ಮಾರುಕಟ್ಟೆಗೆ ತೆಗೆದು ಕೊಂಡು ಹೋಗಿ ನೇರವಾಗಿ ಮಾರಾಟ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳಿಗೆ ಕೊಡಬೇಕಾದ ಹಣ ಉಳಿದಿದೆ ಎಂದರು.
ಟೊಮೆಟೊ ಬೆಳೆಯಿಂದ ಲಕ್ಷಾಧಿಪತಿಯಾದ ಕಾನ್ಸ್‌ಟೇಬಲ್
ಈ ಹಿಂದೆ ಹಾಸನ ಜಿಲ್ಲೆಯ ಪೊಲೀಸರೊಬ್ಬರು ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿರುವುದನ್ನು ಬಹಿರಂಗಪಡಿಸಿದ್ದರು. ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಬೈರೇಶ್ ವೃತ್ತಿಯಲ್ಲಿ ಪೊಲೀಸ್ ಪ್ರವೃತ್ತಿಯಲ್ಲಿ ರೈತನಾಗಿದ್ದು, ಈ ಬಾರಿ ಟೊಮೆಟೊ ಬೆಳೆಯಿಂದ ಉತ್ತಮ ಲಾಭಗಳಿಸಿದ್ದಾರೆ.
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಈ ಬಾರಿ ತಮ್ಮ ಒಂದು ಎಕರೆ ಆರು ಗುಂಟೆ ಜಾಗದಲ್ಲಿ ಟೊಮೊಟೊ ಬೆಳೆದಿದ್ದು, ನಿರೀಕ್ಷೆಗೂ ಮೀರಿದ ಆದಾಯಗಳಿಸಿದ್ದಾರೆ. ಟೊಮೆಟೊ ದರ ಏರಿಕೆ ದಿನಗಳೂ ಸೇರಿದಂತೆ ಬೈರೇಶ್ ಟೊಮೆಟೊ ಬೆಳೆಯಿಂದ ಈವರಗೆ 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications