Cauvery dispute: ಮಂಡ್ಯ ಆಯ್ತು.. ಈಗ ಚಾಮರಾಜನಗರ ಬಂದ್ ಮಾಡುವುದಾಗಿ ಎಚ್ಚರಿಕೆ ಕೊಟ್ಟ ರೈತರು
ಚಾಮರಾಜನಗರ, ಸೆಪ್ಟೆಂಬರ್, 23: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶದ ವಿರುದ್ಧ ಹಳೇ ಮೈಸೂರು ಭಾಗದಲ್ಲಿ ಹೋರಾಟದ ಕಿಚ್ಚು ಜೋರಾಗಿದೆ. ರೈತರು, ಕನ್ನಡಪರ ಸಂಘಟನೆಗಳಿಂದ ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ ನಡೆಸುತ್ತಿವೆ. ಹಾಗೆಯೇ ಮಂಡ್ಯ ರೀತಿಯಲ್ಲೇ ಚಾಮರಾಜನಗರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಮಧ್ಯಾಹ್ನ ಚಾಮರಾಜನಗರ-ಕೊಳ್ಳೆಗಾಲ ಹೆದ್ದಾರಿ ತಡೆದ ರೈತ ಸಂಘಟನೆಯ ಕಾರ್ಯಕರ್ತರು ತಮಿಳುನಾಡು, ಕರ್ನಾಟಕ ಹಾಗೂ ಕಾವೇರಿ ನ್ಯಾಯಾಧೀಕರಣದ ವಿರುದ್ಧ ಆಕ್ರೋಶ ಹೊರಹಾಕಿದರು.

ಕಾವೇರಿ ನೀರಿನ ಸಂಬಂಧ ಈಗಾಗಲೇ ಮಂಡ್ಯ ಬಂದ್ ಮಾಡಲಾಗಿದ್ದು, ಅದರಂತೆಯೇ ಚಾಮರಾಜನಗರವನ್ನು ಕೂಡ ಬಂದ್ ಮಾಡುತ್ತೇವೆ. ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರನ್ನು ನಿಲ್ಲಿಸದೇ ಇದ್ದರೇ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಜೊತೆ ಸಭೆ ಸೇರಿ ಚಾಮರಾಜನಗರ ಬಂದ್ ಮಾಡಲಾಗುತ್ತದೆ ಎಂದು ರೈತ ಮುಖಂಡ ಹೆಬ್ಬಸೂರು ಬಸವಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯಸಭಾ ಸದಸ್ಯರ ಫೋಟೋಗೆ ಬೆಂಕಿ ಹೊತ್ತಿಸಿ ಆಕ್ರೋಶ
ಕಾವೇರಿ ಸಂಕಷ್ಟದ ಸಮಯದಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಮೌನವಾಗಿದ್ದಾರೆಂದು ಆರೋಪಿಸಿ ಚಾಮರಾಜನಗರದಲ್ಲಿ ಕಬ್ಬು ಬೆಳೆಗಾರರು ಅವರ ಫೋಟೋಗಳನ್ನು ಸುಟ್ಟು ಆಕ್ರೋಶ ಹೊರಹಾಕಿದರು.
ಚಾಮರಾಜನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಸಂಸದರಾದ ಜಗ್ಗೇಶ್, ರಾಜೀವ್ ಚಂದ್ರಶೇಖರ್, ನಿರ್ಮಲಾ ಸೀತಾರಾಮನ್ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಗಳನ್ನು ಸುಟ್ಟು ಧಿಕ್ಕಾರದ ಘೋಷಣೆ ಕೂಗಿದರು. ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರು ಕಾವೇರಿ, ಕಬಿನಿ ವಿಚಾರದಲ್ಲಿ ಚಕಾರವನ್ನು ಎತ್ತದೆ ಮೌನವಾಗಿದ್ದಾರೆ. ರಾಜ್ಯ ಕೋಟಾದಡಿ ರಾಜ್ಯಸಭಾ ಸದಸ್ಯರಾಗಿದ್ದರೂ ಮೌನವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.
ಆದ್ದರಿಂದ ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು ರಾಜೀನಾಮೆ ನೀಡಬೇಕು, ಯಾವ ರಾಜ್ಯದ ಪರವಾಗಿದ್ದಾರೋ ಅಲ್ಲಿಗೆ ತೆರಳಿ ಆಯ್ಕೆಯಾಗಲಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.












Click it and Unblock the Notifications