ಕಾವೇರಿ ಕಿಚ್ಚು: ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ವಿನೋದ್ ರಾಜ್, ಲೀಲಾವತಿ
ಮಂಡ್ಯ, ಸೆಪ್ಟೆಂಬರ್, 25: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕು ಎಂದು ರಾಜ್ಯದೆಲ್ಲೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೆಯೇ ಇಂದು ಮಂಡ್ಯದಲ್ಲಿ ನಟ ವಿನೋದ್ ರಾಜ್ ಹಾಗೂ ತಾಯಿ ಲೀಲಾವತಿ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಪರ ಧ್ವನಿ ಎತ್ತಿದ್ದರು. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ವಿವರನ್ನು ಇಲ್ಲಿ ತಿಳಿಯಿರಿ.
ಕಾವೇರಿ ನೀರನ್ನು ಅವಲಂಬಿಸಿರುವ ಕನ್ನಡಿರಿಗೆ ಎಷ್ಟು ಅನ್ಯಾಯ ಆಗುತ್ತಿದೆ ಎಂಬುದು ತಿಳಿದಿದೆ. ಪ್ರತಿ ಬಾರಿಯೂ ಕಾವೇರಿ ವಿಚಾರದಲ್ಲಿ ನ್ಯಾಯ ಸಿಗುತ್ತಿಲ್ಲ, ಇದು ನಿಲ್ಲಲು ಸಂಕಷ್ಟ ಸೂತ್ರ ಅನಿವಾರ್ಯವಿದೆ ಎಂದು ನಟ ವಿನೋದ್ ರಾಜ್ ಆಗ್ರಹಿಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತಹಿತಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಗೆ ಬೆಂಬಲ ನೀಡಿ ಮಾತನಾಡಿದ ಅವರು, ಕೃಷಿ ಮಾಡುತ್ತಾ ನನಗೆ ನೀರಿನ ಅಭಾವ ತಿಳಿಯಿತು. ಪ್ರತಿ ಬಾರಿಯೂ ನಮಗೆ ಅನ್ಯಾಯ ಆಗಿದೆ. ಸಂಕಷ್ಟ ಸೂತ್ರ ಅನಿವಾರ್ಯವಿದೆ. ನಾವು ಕ್ಷೇಮವಾಗಿದ್ದರೆ ಇನ್ನೊಬ್ಬರ ಕ್ಷೇಮವನ್ನು ವಿಚಾರಿಸಬಹುದು. ನಾವು ಕ್ಷಾಮವಾದಾಗ ಇನ್ನೊಬವರ ಕ್ಷೇಮ ಕೇಳಲು ಆಗುವುದಿಲ್ಲ ಎಂದರು.
ತುಂಬಾ ನೋವುಂಟು ಮಾಡುವ ಸನ್ನಿವೇಶಗಳೇ ಹೆಚ್ಚಾಗಿದೆ, ಮಲತಾಯಿ ಧೋರಣೆಯೇ ಹೆಚ್ಚಾಗಿದೆ. ನಮ್ಮ ರೈತರಿಗೆ ಇಂತಹ ದುಸ್ಥಿತಿ ಬರಬಾರದು. ಕಾನೂನಿಗಿಂತ ನಾವು ದೊಡ್ಡವರಲ್ಲ. ಸುಪ್ರೀಂ ಹಾಗೂ ಪ್ರಾಧಿಕಾರ ವಾಸ್ತವ ಸ್ಥಿತಿ ನೋಡಿ ಆದೇಶ ಮಾಡಬೇಕು. ನೀರಿಲ್ಲ ನೀರಿಲ್ಲ ಎಂದು ಹೋರಾಡುತ್ತಿದ್ದೇವೆ. ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ರೈತರನ್ನು ವಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು.
ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಸರ್ಕಾರ ಚಿಂತನೆ ಮಾಡಬೇಕು. ವಾಸ್ತವ ಸ್ಥಿತಿ ಅರಿತುಕೊಳ್ಳಬೇಕು. ನಮಗೆ ಅವಾಮಾನವೇ ಆಗುತ್ತಿದೆ. ಜನರಿಗೋಸ್ಕರ ಯಾವ ಕೆಲಸನೂ ನಡೆಯುತ್ತಿಲ್ಲ, ರೈತರಿಗೆ ಅರಣ್ಯ ಇಲಾಖೆಯಿಂದಲೂ ತೊಂದರೆಯಾಗಿದೆ ಇದು ನಿಲ್ಲಬೇಕು. ನೀರಿಗಾಗಿ ಪ್ರಾಮಾಣಿಕವಾಗಿ ಹಾಗೂ ಶಾಂತಿಯಿಂದ ಹೋರಾಟ ಮಾಡುತ್ತಿದ್ದರೆ ಅದು ಮುಂದುವರಿಯಲಿ ಎಂದರು.
ರೈತರಿಗೆ ಸಂಕಷ್ಟ ಪರಿಸ್ಥಿತಿ ಬರದಿರಲಿ ಎಂದು ಶ್ರೀ ಭುವನೇಶ್ವರಿ, ಶ್ರೀ ಚಾಮುಂಡೇಶ್ವರಿ ಹಾಗೂ ಕಾವೇರಿ ತಾಯಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಎಂದಿಗೂ ರೈತರಿಗೆ ಕಷ್ಟ ಕೊಡಬೇಡಿ ಎಂದು ಬೇಡಿಕೊಳ್ಳುತ್ತೇನೆ ಎಂದರು. ಈ ವೇಳೆ ತಾಯಿ ಲೀಲಾವತಿ ಅವರು ಕೂಡ ಭಾಗವಹಿಸಿದ್ದರು.












Click it and Unblock the Notifications