Copra Price: ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಕೊಬ್ಬರಿ ದರ ಏರಿಳಿತದ ನಡುವೆಯೇ ಕೇಂದ್ರ ಸರ್ಕಾರ ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. 2025ಕ್ಕೆ ಅನ್ವಯವಾಗುವಂತೆ ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ ₹12,100 ಕನಿಷ್ಠ ಬೆಂಬಲ ಬೆಲೆಯನ್ನು (MSP) ನಿಗದಿ ಪಡಿಸಿದೆ. ಶುಕ್ರವಾರ ಕೇಂದ್ರ ಸಚಿವ ಸಂಪುಟ ಕೊಬ್ಬರಿಗೆ ಕನಿಷ್ಠ ಬೆಂಬಲ ಹೆಚ್ಚಿಸಲು ಅನುಮೋದನೆ ನೀಡಿದೆ. ಈಗ ಕೊಬ್ಬರಿಗೆ ಉತ್ತಮ ಬೆಲೆ ಇದ್ದರೂ ಬೆಲೆ ಕುಸಿತದ ಸಂದರ್ಭದಲ್ಲಿ ಇದು ಬೆಳೆಗಾರರಿಗೆ ಸಹಾಯವಾಗಲಿದೆ.
ಪ್ರತಿ ಕ್ವಿಂಟಾಲ್ ಮಿಲ್ಲಿಂಗ್ ಕೊಬ್ಬರಿಗೆ ₹11,582 ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಕೊಬ್ಬರಿ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿದೆ. ಅದರಲ್ಲೂ ಕರ್ನಾಟಕ ದೇಶದಲ್ಲೇ ಹೆಚ್ಚು ತೆಂಗು ಬೆಳೆಯುವ ರಾಜ್ಯವಾಗಿದೆ. ದೇಶದ ಒಟ್ಟು ಕೊಬ್ಬರಿ ಉತ್ಪಾದನೆಯಲ್ಲಿ ಕರ್ನಾಟಕ 32.7% ರಷ್ಟು ಪಾಲನ್ನು ಹೊಂದಿದೆ. ತಮಿಳುನಾಡು 25.7%, ಕೇರಳ 25.4% ಮತ್ತು ಆಂಧ್ರಪ್ರದೇಶ 7.7% ರಷ್ಟು ಪಾಲು ಹೊಂದಿದೆ.

ಬೆಂಬಲ ಬೆಲೆ ಹೆಚ್ಚಳ ಮಾಡಿರುವುದರಿಂದ ಕೇಂದ್ರ ಸರ್ಕಾರದ ಮೇಲೆ ₹855 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಕ್ಯಾಬಿನೆಟ್ ತಿಳಿಸಿದೆ. ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಾಗ ಕನಿಷ್ಠ ಬೆಂಬಲ ಬೆಲೆ ಸಹಾಯಕ್ಕೆ ಬರಲಿದೆ.
2014ರಲ್ಲಿ ಮಿಲ್ಲಿಂಗ್ ಕೊಬ್ಬರಿಗೆ ₹ 5250 ಮತ್ತು ಉಂಡೆ ಕೊಬ್ಬರಿಗೆ ₹5500 ರೂಪಾಯಿ ಇದ್ದ ಕನಿಷ್ಠ ಬೆಂಬಲ ಬೆಲೆಯನ್ನು 2025ರ ವೇಳೆಗೆ ಕ್ರಮವಾಗಿ 11582 ರೂಪಾಯಿ ಮತ್ತು 12,100 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
"ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ತೆಂಗು ಬೆಳೆಗಾರರಿಗೆ ಉತ್ತಮ ಆದಾಯವನ್ನು ಖಾತರಿಪಡಿಸುವುದಲ್ಲದೆ. ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ತೆಂಗಿನ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆ ಹೆಚ್ಚಿಸಲು ರೈತರಿಗೆ ಉತ್ತೇಜನ ಸಿಗುತ್ತದೆ" ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಬೆಲೆ ಬೆಂಬಲ ಯೋಜನೆ (PSS) ಅಡಿಯಲ್ಲಿ ಕೊಬ್ಬರಿ ಮತ್ತು ಸಿಪ್ಪೆ ಸುಲಿದ ತೆಂಗಿನ ಕಾಯಿ ಸಂಗ್ರಹಿಸಲು ಕೇಂದ್ರೀಯ ನೋಡಲ್ ಏಜೆನ್ಸಿಗಳಾಗಿ ಕಾರ್ಯ ನಿರ್ವಹಿಸಲಿದೆ.












Click it and Unblock the Notifications