ವಿಷವುಣಿಸಿ ಜನನ ವೈಕಲ್ಯ ಕರುಣಿಸಿದ ಮನ್ಸಾಂಟೊ

ಜೈವಿಕ ತಂತ್ರಜ್ಞಾನದ ದಿಗ್ಗಜ ಎನಿಸಿರುವ ಮನ್ಸಾಂಟೊ ಕಂಪನಿ ಪೂರೈಸಿರುವ ಕಳೆನಾಶಕಗಳು ಹಾಗೂ ಕೀಟನಾಶಕಗಳನ್ನು ತಮ್ಮ ತಂಬಾಕು ಬೆಳೆಗೆ ಬಳಸಿರುವ ರೈತರು, ಮಕ್ಕಳಲ್ಲಿ ಮಾನಸಿಕ ನ್ಯೂನತೆ, ಬೆರಳುಗಳು ಇಲ್ಲದಿರುವುದು ಹಾಗೂ ಕುರುಡುತನ ಮೊದಲಾದ ವಿಚಿತ್ರ ಜನ್ಮದತ್ತ ತೊಂದರೆಗಳು ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅರ್ಜೆಂಟೈನಾದ ಮಿಸಿಯೋನ್ಸ್ ಪ್ರಾಂತದ ಸಣ್ಣ ರೈತ ಕುಟುಂಬಗಳಿಗೆ ತಂಬಾಕು ಕಳೆನಾಶಕಗಳು ಹಾಗೂ ಕೀಟನಾಶಕಗಳನ್ನು ಭಾರಿ ಸಂಖ್ಯೆಯಲ್ಲಿ ಮನ್ಸಾಂಟೊ ಪೂರೈಸುತ್ತಿದೆ. ಮನ್ಸಾಂಟೊದ ಕಳೆ ನಾಶಕಗಳಲ್ಲಿನ ವಿಷಕಾರಿ ರಾಸಾಯನಿಕಗಳು ಸುರಕ್ಷಿತವೆಂದು ತಮಗೆ ಶಿಫಾರಸು ಮಾಡಿರುವುದಾಗಿಯೂ ರೈತರು ತಿಳಿಸಿದ್ದಾರೆ. ಆದರೆ ಇದು ತಮ್ಮ ಮಕ್ಕಳ ಜನನ ವೈಕಲ್ಯಗಳಿಗೆ ಕಾರಣವಾಗಿದೆ ಎಂದು ರೈತರು ದೂರಿದ್ದಾರೆ.
ಮಿಸಿಯೋನ್ಸ್ ಪ್ರದೇಶದಲ್ಲಿನ ಬಹುತೇಕ ತಂಬಾಕು ಬೆಳೆಗಾರರು ಮೊನ್ಸಾಂಟೊ ಉತ್ಪನ್ನವಾಗಿರುವ 'ರೌಂಡಪ್" ಕಳೆನಾಶಕವನ್ನು ಬಳಸಿದ್ದು, ಅದು ಮಾನವ ಮೂತ್ರಪಿಂಡವನ್ನು ಹಾನಿಗೊಳಿಸುವ ಶಕ್ತಿಯನ್ನು ಹೊಂದಿರುವುದು ಸಾಬೀತಾಗಿದೆ. ರೈತರು ಹಾಗೂ ಅವರ ಮಕ್ಕಳ ಬಗ್ಗೆ ಒಂದಿಷ್ಟೂ ಕಾಳಜಿ ತೋರದಿರುವ ತಂಬಾಕು ಕಂಪನಿಗಳು ಕೇವಲ ಆರ್ಥಿಕ ಗಳಿಕೆ ಹಾಗೂ ಅಧಿಕ ಲಾಭದ ದುರುದ್ದೇಶದಿಂದ ಮುಗ್ಧ ರೈತರನ್ನು ಬಲಿ ತೆಗೆದುಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.












Click it and Unblock the Notifications