"ಭದ್ರೆ"ಯಿಂದ "ತುಂಗಾಭದ್ರಾ" ಅಣೆಕಟ್ಟಿಗೆ ನೀರು ಹರಿಸಿದರೆ ಆಗುವ ನಷ್ಟ ಎಷ್ಟು?, ಹಸಿರು ಸೇನೆ ಕಾರ್ಯಾಧ್ಯಕ್ಷರ ನಿಲುವೇನು?
ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸಿದರೆ ಎಷ್ಟು ನಷ್ಟ ಆಗುತ್ತದೆ ಎನ್ನುವುದನ್ನು ದಾವಣಗೆರೆಯಲ್ಲಿ ರೈತ ಸಂಘ ವಿವರವನ್ನು ನೀಡಿದೆ. ಹಾಗದರೆ ರೈತ ಸಂಘದ ಪ್ರಕಾರ ರೈತರಿಗೆ ಆಗುವ ನಷ್ಟದ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದಾವಣಗೆರೆ, ಫೆಬ್ರವರಿ, 13: ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸಲು ಸಾಧ್ಯವಿಲ್ಲ. ಸರ್ಕಾರ ಒಂದು ಹನಿ ನೀರು ಹರಿಸಬಾರದು. ಹಾಗೇನಾದರೂ ನೀರು ಹರಿಸಲು ತೀರ್ಮಾನಿಸಿದರೆ ಈ ಭಾಗದ 2.50 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ಒಣಗಿ ನೂರಾರು ಕೋಟಿ ರೂಪಾಯಿ ನಷ್ಟ ಆಗುತ್ತದೆ. ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಕುರುವ ಗಣೇಶ್ ದಾವಣಗೆರೆಯಲ್ಲಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಜಲಾಶಯದಲ್ಲಿ 174 ಅಡಿ 57.211 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ದಿನ 178 ಅಡಿ 62 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ವರ್ಷ 5 ಟಿಎಂಸಿ ನೀರು ಕಡಿಮೆ ಇದೆ. ಈಗಿರುವ ನೀರನ್ನು 115 ದಿನಗಳು ಹರಿಸಬಹುದು. ಈಗ ಬೇಸಿಗೆ ಬೆಳೆಗೆ 115 ದಿನಗಳು ನೀರಿನ ಅವಶ್ಯಕತೆಯಿದೆ. ನಮ್ಮ ಜಲಾಶಯದಲ್ಲಿ ಟಿಎಂಸಿ ನೀರು ಸಹ ಜಾಸ್ತಿ ಇಲ್ಲ. ತುಂಗಾಭದ್ರ ಜಲಾಶಯದ ಅಚ್ಚುಕಟ್ಟುದಾರರು ಸರ್ಕಾರ ಭದ್ರಾ ಜಲಾಶಯದಿಂದ 7 ಟಿಎಂಸಿ ನೀರು ಕೇಳಿದ್ದಾರೆ. ಒಂದು ಹನಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಬೇಕು. ಯಾವುದೇ ಕಾರಣಕ್ಕೂ ನೀರು ನೀಡುತ್ತೇವೆ ಎಂಬುದಾಗಿ ಸರ್ಕಾರ ಹೇಳಬಾರದು ಎಂದರು.
ಹಗುರುವಾಗಿ ಮಾತಾಡಿದ ತೇಜಸ್ವಿ, ಆಕ್ರೋಶ
ರೈತರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹಗುರುವಾಗಿ ಮಾತನಾಡಿರುವುದು ಸರಿಯಲ್ಲ. ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗವಿಲ್ಲ ಎಂದಿರುವುದು ಖಂಡನೀಯ. ರೈತರೇನೂ ಸಾಲ ಮನ್ನಾ ಮಾಡಿ ಎಂದು ಹೇಳಿಲ್ಲ. ಚುನಾವಣೆಯ ಹೊತ್ತಲ್ಲಿ ರಾಜಕೀಯ ಪಕ್ಷಗಳೇ ರೈತರ ಸಾಲ ಮನ್ನಾ ಮಾಡುತ್ತೇವೆ ಎಂಬ ಭರವಸೆ ನೀಡುತ್ತಿವೆ. ರೈತರು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಆಹಾರ ಉತ್ಪಾದನೆ ಮಾಡಿ ದೇಶದ ಹೊಟ್ಟೆ ಹಸಿವು ನೀಗಿಸುವಂತಹ ಕಾರ್ಯವನ್ನು ರೈತರು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರೈತರಿಂದ ಬೃಹತ್ ಹೋರಾಟದ ಎಚ್ಚರಿಕೆ
ರೈತರು ತಾವು ಬೆಳೆದ ಬೆಳೆಗಳನ್ನು ಅರ್ಧದಷ್ಟು ಬೆಲೆಗೆ ಮಾರಾಟ ಮಾಡಿ, ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರಿಂದ ಭಾರಿ ನಷ್ಟ ಅನುಭವಿಸುವಂತಾಗಿದೆ. 16 ವರ್ಷದಲ್ಲಿ ಕೃಷಿ ಮಾಡಿ 45 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ರೈತಾಪಿ ವರ್ಗ ಅನುಭವಿಸಿದೆ. ಕೂಡಲೇ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಯನ್ನು ಹಿಂಪಡೆದು ರೈತರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ರಾಜ್ಯ ಬಜೆಟ್‌ನಲ್ಲಿ ರೈತರಿಗೆ ನೆರವಾಗುವಂತಹ ಯೋಜನೆಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಫೆಬ್ರವರಿ 16ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಪಿ. ಪಿ. ಮರುಳಸಿದ್ದಯ್ಯ, ಬಿ. ಕೆ. ಭರಮಪ್ಪ, ಕೆ. ಜಿ. ಶೇಖರಪ್ಪ, ಉಮೇಶ್, ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications