ನವಿಲುತೀರ್ಥ ಡ್ಯಾಂ ಸಂಪೂರ್ಣ ಭರ್ತಿ: ಕೃಷಿ ಚಟುವಟಿಕೆ ನೀರು, ರೈತರಿಗೆ ಸಂತಸ
ಬೆಳಗಾವಿ, ಅಕ್ಟೋಬರ್ 17: ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ರಾಜ್ಯದ ಎಲ್ಲಾ ಡ್ಯಾಂಗಳು ಭರ್ತಿಯಾಗಿವೆ. ಬೆಳಗಾವಿಯಲ್ಲಿರುವ ನವಿಲುತೀರ್ಥ ಅಣೆಕಟ್ಟು ಭರ್ತಿಯಾಗಿದ್ದು, ಜಲಾಶಯದಿಂದ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೀರು ಲಭ್ಯವಾಗಲಿದೆ. ಆದ್ದರಿಂದ ರೈತರು ಸಂತಸಗೊಂಡಿದ್ದಾರೆ. ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಜಲಾಶಯಕ್ಕೆ ಗಂಗೆ ಪೂಜೆ ಮಾಡಿ, ಬಾಗಿನ ಅರ್ಪಿಸಲಾಗಿದೆ.
ಮಲಪ್ರಭಾ ನೀರಾವರಿ ಸಲಹಾ ಸಮಿತಿ ನವಿಲುತೀರ್ಥ ಡ್ಯಾಂನಲ್ಲಿ ಗಂಗೆ ಪೂಜೆ, ಬಾಗಿನ ಅರ್ಪಣೆ ಕಾರ್ಯಕ್ರಮ ಆಯೋಜಿಸಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಗಂಗೆ ಪೂಜೆ ಮಾಡಿ, ಡ್ಯಾಂಗೆ ಬಾಗಿನ ಅರ್ಪಿಸಿದರು.

ನೀರಿನ ಕೊರತೆ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, "ಉತ್ತಮ ಮಳೆಯಿಂದ ಮಲಪ್ರಭಾ ಜಲಾಶಯ ಮಟ್ಟ ಸಂಪೂರ್ಣ ಭರ್ತಿಯಾಗಿದ್ದು, ಪ್ರತಿ ವರ್ಷದಂತೆ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಸವದತ್ತಿ, ಬೈಲಹೊಂಗಲ ತಾಲೂಕುಗಳಿಗೆ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತದೆ. ಬೇಸಿಗೆ ಕಾಲದಲ್ಲಿ ಜನ, ಜಾನುವಾರುಗಳಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಇರುವುದಿಲ್ಲ" ಎಂದರು.
"ನವಿಲುತೀರ್ಥ ಡ್ಯಾಂ ಉತ್ತರ ಕರ್ನಾಟಕದ ರೈತರ ಜೀವ. ಮಲಪ್ರಭಾ ಜಲಾಶಯ ಭರ್ತಿಯಾಗಿರುವ ಶುಭ ಸಂದರ್ಭದಲ್ಲಿ ಜಲಾಶಯಕ್ಕೆ ಗಂಗೆ ಪೂಜೆ ಮಾಡಿ ಬಾಗಿನ ಅರ್ಪಣೆ ಮಾಡುವುದು ನಮ್ಮ ಭಾಗ್ಯ" ಎಂದು ಸಚಿವರು ಹೇಳಿದರು.
"ವರುಣನ ಕೃಪೆ, ತಾಯಿ ರೇಣುಕಾ ಯಲ್ಲಮ್ಮ ಅನುಗ್ರಹದಿಂದ ಮಲಪ್ರಭಾ ನದಿಗೆ ನಾವೆಲ್ಲ ಬಾಗಿನ ಅರ್ಪಣೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ಶಕ್ತಿ ಮೀರಿ ರೈತರನ್ನು ಕಾಪಾಡುವ ಕೆಲಸ ಮಾಡಿದ್ದೇವೆ. ಈಗ ಮಲಪ್ರಭೆ ತಾಯಿಯ ಕೃಪೆ ನಮಗೆ ಸಿಕ್ಕಿದೆ" ಎಂದು ತಿಳಿಸಿದರು.
"ಬೇಸಿಗೆ ಕಾಲದಲ್ಲಿ ಬಾದಾಮಿ, ರಾಮದುರ್ಗ, ನವಲಗುಂದ ತಾಲೂಕುಗಳ ಜೊತೆಗೆ ಮಲಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೂ ನೀರು ಬಿಡುಗಡೆಗೆ ಜಲಾಶಯದಲ್ಲಿ ನೀರು ಸಂಗ್ರಹಣೆ ಮಾಡಲಾಗಿದೆ. ಈ ಭಾಗದ ಶಾಸಕರ ಆಶಯದಂತೆ ಮುಂದಿನ ದಿನಗಳಲ್ಲಿ ಉದ್ಯಾನವನ, ವೀಕ್ಷಕರಿಗೆ ಆಸನ ಸೇರಿದಂತೆ ಜಲಾಶಯ ಅಭಿವೃದ್ಧಿಪಡಿಸಿ, ಕೆಆರ್‌ಎಸ್ ಮಾದರಿಯಲ್ಲಿ ಮಾರ್ಪಾಡು ಮಾಡಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
"ಕೆಆರ್‌ಎಸ್, ಆಲಮಟ್ಟಿ ಅಣೆಕಟ್ಟುಗಳ ಮಾದರಿಯಲ್ಲಿ ಮಲಪ್ರಭಾ ಜಲಾಶಯ ಸುತ್ತಮುತ್ತ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲ ಶಾಸಕರು ಜನಪ್ರತಿನಿಧಿಗಳು ಶ್ರಮ ವಹಿಸಲಿದ್ದಾರೆ. 4 ಜಿಲ್ಲೆಯ 13 ತಾಲೂಕುಗಳ ಜನರು ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಈ ಜಲಾಶಯದ ಮೇಲೆ ಅವಲಂಬಿತರಾಗಿದ್ದಾರೆ. ಈಗ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜನರು ಸಂತಸದಲ್ಲಿದ್ದಾರೆ" ಎಂದು ನವಲಗುಂದ ಶಾಸಕ ಎನ್. ಎಚ್. ಕೋನರೆಡ್ಡಿ ಹೇಳಿದರು.
"ಜಲಾಶಯ ತುಂಬಿ ಹರಿಯುತ್ತಿದೆ. ಎಲ್ಲರೂ ಸಂತಸ ಪಡುವ ವಿಷಯ. ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈ ಭಾಗದ ರೈತರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಯಾವುದೇ ಅಡತಡೆ ಇಲ್ಲ. ಸರ್ಕಾರದಿಂದ ಜಲಾಶಯದ ಇನ್ನಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು" ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.












Click it and Unblock the Notifications