ನೇಗಿಲು ಹಿಡಿದು ಹೊಲಕ್ಕಿಳಿದ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ
ಬಳ್ಳಾರಿ, ಜೂನ್ 07 : ಬಳ್ಳಾರಿಯ ನೂತನ ಸಂಸದ ವೈ.ದೇವೇಂದ್ರಪ್ಪ ಅವರು ಹೊಲಕ್ಕಿಳಿದು ಉಳುಮೆ ಮಾಡಿದ್ದಾರೆ. ಎತ್ತುಗಳನ್ನು ಹಿಡಿದು ಸಂಸದರು ಉಳುಮೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರ ಕೂಡ್ಲಗಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ವೈ.ದೇವೇಂದ್ರಪ್ಪ ಅವರು ಉಳುಮೆ ಮಾಡಿದರು. ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಅವರು ರೈತರು ಬಿತ್ತನೆ ಮಾಡುವುದನ್ನು ನೋಡಿ ಕಾರು ನಿಲ್ಲಿಸಿ ಹೊಲಕ್ಕಿಳಿದರು.

'ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ' ಎಂಬ ಹಾಡಿನ ನೆನಪು ಬರುವಂತೆ ದೇವೇಂದ್ರಪ್ಪ ಅವರು ಎತ್ತುಗಳನ್ನು ನಿಯಂತ್ರಿಸುತ್ತಾ, ಉಳುಮೆ ಮಾಡಿದರು. ರೈತರು ಇದನ್ನು ನೋಡಿ ಸಂತಸಪಟ್ಟರು.
ತಾವೇ ಎತ್ತುಗಳನ್ನು ನಿಯಂತ್ರಿಸಿ ಉತ್ತಮ ರೀತಿಯಲ್ಲಿ ಉಳುವೆ ಮಾಡಿ, ಬಿತ್ತನೆ ಮಾಡಿದರು. ರೈತರು ಸಂಸದರು ಎತ್ತುಗಳನ್ನು ನಿಯಂತ್ರಿಸುವ, ಉಳುಮೆ ಮಾಡುವುದನ್ನು ನೋಡಿ ಅಚ್ಚರಿಪಟ್ಟರು.
2019ರ ಲೋಕಸಭಾ ಚುನಾವಣೆಯಲ್ಲಿ ವೈ.ದೇವೇಂದ್ರಪ್ಪ ಅವರು ಬಳ್ಳಾರಿ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದಾರೆ. ಚುನಾವಣೆಯಲ್ಲಿ ಅವರು 616388 ಮತಗಳನ್ನು ಪಡೆಯುವ ಮೂಲಕ, ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರನ್ನು 55707 ಮತಗಳ ಅಂತರದಿಂದ ಸೋಲಿಸಿದ್ದಾರೆ.











Click it and Unblock the Notifications