ಜೂನ್ 2 ರಿಂದ ಲಾಲ್‌ಬಾಗ್‌ನಲ್ಲಿ ವಾರ್ಷಿಕ ಮಾವು ಮೇಳ: ವಿವರಗಳು
ಬೆಂಗಳೂರು, ಜೂನ್. 01: ಈಗ ಎಲ್ಲಿ ನೋಡಿದರೂ ಮಾವಿನ ಹಣ್ಣುಗಳದ್ದೆ ದರ್ಬಾರ್. ಇದೇ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆಯು ಲಾಲ್‌ಬಾಗ್ ಗಾರ್ಡನ್‌ನಲ್ಲಿ ವಾರ್ಷಿಕವಾಗಿ ಆಯೋಜಿಸುವ ಬಹು ನಿರೀಕ್ಷಿತ ಮಾವಿನ ಮೇಳವು ಜೂನ್ 2 ರಿಂದ ಪ್ರಾರಂಭವಾಗಲಿದ್ದು, ಜೂನ್ 11 ರವರೆಗೆ ಒಂಬತ್ತು ದಿನಗಳ ಕಾಲ ನಡೆಯಲಿದೆ.
ಪ್ರತಿ ವರ್ಷ ರೈತರಿಗಾಗಿ ಸುಮಾರು 100 ರಿಂದ 120 ಮಳಿಗೆಗಳನ್ನು ಸ್ಥಾಪಿಸಲಾಗಿದ್ದರೂ, ಈ ವರ್ಷದ ಮಾವು ಮೇಳದಲ್ಲಿ 40 ಮಳಿಗೆಗಳನ್ನು ಮಾತ್ರ ಹಾಕಲಾಗುತ್ತದೆ. ಈ ವರ್ಷ ವಿಧಾನಸಭೆ ಚುನಾವಣೆ ಇದ್ದ ಕಾರಣ ಮೇಳವೇ ವಿಳಂಬವಾಗಿದ್ದರೂ, ಮಳಿಗೆಗಳ ಸಂಖ್ಯೆ ಕಡಿಮೆಯಾಗಿರುವುದು ರೈತರನ್ನು ಮತ್ತಷ್ಟು ಕಂಗಾಲಾಗಿಸಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (ಕೆಎಸ್‌ಎಂಡಿಎಂಸಿಎಲ್) ಹಣದ ಕೊರತೆಯ ಕಾರಣ ಮಳಿಗೆಗಳ ಸಂಖ್ಯೆಯನ್ನು ಕಡಿತಗೊಳಿಸಬೇಕಾಯಿತು ಎಂದು ಹೇಳಿದೆ.

"ಹೊಸದಾಗಿ ನೇಮಕಗೊಂಡಿರುವ ತೋಟಗಾರಿಕಾ ಸಚಿವರನ್ನು ಭೇಟಿಯಾಗಿ ಈ ಸಮಸ್ಯೆಯ ಬಗ್ಗೆ ತಿಳಿಸಿ ಮಾವು ರೈತರ ಹಿತಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಸಭೆ ನಡೆಸಿ ನಮ್ಮ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ" ಎಂದು ಕನಕಪುರ ಮತ್ತು ಚನ್ನಪಟ್ಟಣ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಧರಣೀಶ್ ಕುಮಾರ್ ತಿಳಿಸಿದ್ದಾರೆ.
ಆದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಣದ ಕೊರತೆ ಇಲ್ಲ. ಚುನಾವಣೆ ಇದ್ದುದರಿಂದ ಮೇಳದ ವೇಳಾಪಟ್ಟಿಯಲ್ಲಿ ವಿಳಂಬವಾಗಿದೆ. ಮೇಳಕ್ಕೆ ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಒದಗಿಸುವಂತೆ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಾವು ಹೂ ಬಿಡುವ ಸಮಯದಲ್ಲಿ ಮಳೆಯಿಂದಾಗಿ ಮಾವಿನ ಮರಗಳಲ್ಲಿ ಪೌಷ್ಟಿಕಾಂಶದ ಅಸಮತೋಲನ ಉಂಟಾಗಿ ಇಳುವರಿ ಮೇಲೆ ಪರಿಣಾಮ ಬೀರಿದೆ. ಕೋಲಾರದ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಲ್ಲಿ ಸಂಭವಿಸಿದ ಆಲಿಕಲ್ಲು ಮಳೆಯಿಂದಾಗಿ ಹಿಂದಿನ ಇಳುವರಿಗಿಂತ 50% ರಷ್ಟು ಮಾವಿನ ಬೆಳೆ ಕಡಿಮೆಯಾಗಿದೆ. ಈ ವರ್ಷ ಮಳಿಗೆಗಳ ಸಂಖ್ಯೆ ಕಡಿಮೆಯಾಗಲು ಮಾವು ಸಿಗದಿರುವುದು ಕೂಡ ಒಂದು ಕಾರಣ ಎಂದು ಕೆಲವು ರೈತರು ಹೇಳಿದ್ದಾರೆ.
ಲಾಲ್‌ಬಾಗ್ ಮಾವು ಮೇಳದಲ್ಲಿ ಬಾದಾಮಿ (ಅಲ್ಫಾನ್ಸೋ), ರಸಪುರಿ, ಸಕ್ಕರಗುತ್ತಿ, ಸೆಂಧೂರ, ಮಲ್ಲಿಕಾ, ಮಾಲ್ಗೋವಾ ಮತ್ತು ಇಮಾಮ್ ಪಸಂದ್ ನಂತಹ ಮಾವಿನ ವಿವಿಧ ತಳಿಗಳು ಮೇಳದಲ್ಲಿ ಲಭ್ಯವಿದ್ದು, ಮಾವು ಪ್ರಿಯರು ನೇರವಾಗಿ ರೈತರಿಂದ ಹಣ್ಣುಗಳನ್ನು ಖರೀದಿಸಬಹುದು.












Click it and Unblock the Notifications