ಸೋಯಾ ಅವರೆಯಲ್ಲಿ ಕಾಂಡ ಕೊರೆಯುವ ನೊಣದ ಹತೋಟಿ, ಸಲಹೆಗಳು
ಧಾರವಾಡ, ಜೂನ್ 23: ಕೃಷಿ ಇಲಾಖೆ ಸೋಯಾ ಅವರೆಯಲ್ಲಿ ಕಾಂಡ ಕೊರೆಯುವ ನೊಣದ ಹತೋಟಿ ಕುರಿತು ರೈತರಿಗೆ ಮಾಹಿತಿ ನೀಡಿದೆ. ಮುಂಗಾರು ಹಂಗಾಮಿನಲ್ಲಿ ಈ ಕೀಟವು ಬೆಳೆಗಳಿಗೆ ಅಪಾರ ಹಾನಿಯನ್ನು ಉಂಟು ಮಾಡುತ್ತದೆ.
ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸೋಯಾ ಅವರೆಯಲ್ಲಿ ಕಾಂಡ ಕೊರೆಯುವ ನೊಣದ ನಿಯಂತ್ರಣಕ್ಕಾಗಿ ರೈತರಿಗೆ ಸಲಹೆಗಳನ್ನು ನೀಡಿದ್ದಾರೆ. ಸೋಯಾ ಅವರೆಯಲ್ಲಿ ಕಾಂಡ ಕೊರೆಯುವ ನೊಣವು ಜಗತ್ತಿನಾದ್ಯಂತ ಸೋಯಾ ಅವರೆಗೆ ತೊಂದರೆ ಕೊಡುವ ಕೀಟಗಳಲ್ಲಿ ಅಗ್ರಗಣ್ಯವಾದದ್ದು ಎಂದು ಹೇಳಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಶೇ. 70 ರಿಂದ 90ರ ವರೆಗೆ ಈ ಹುಳುವಿನಿಂದ ಬೆಳೆಯು ಹಾನಿಗೊಳಗಾಗುತ್ತದೆ. ಕರಿ ಹೆಣ್ಣು ನೊಣವು ಎಲೆಗಳ ಮೇಲೆ ಮೊಟ್ಟೆಯನ್ನಿಡುತ್ತದೆ ಹಾಗೂ ಮೊಟ್ಟೆ ಒಡೆದ ನಂತರ ಹೊರಬಂದ ಮರಿಗಳು ಎಲೆ ಹಾಗೂ ಎಲೆ ತುಂಬುಗಳಲ್ಲಿ ಸುರಂಗ ಮಾಡಿ ಕಾಂಡವನ್ನು ಪ್ರವೇಶಿಸುತ್ತವೆ.
ಇದರಿಂದ ಬೆಳೆಗೆ ಆಹಾರ ಸಾಗಾಣಿಕೆ ಕುಂಠಿತಗೊಂಡು ಎಲೆಗಳು ಒಣಗಿ ಇಳುವರಿಯಲ್ಲಿ ಗಣನೀಯವಾಗಿ ಹಾನಿ ಉಂಟಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಮನವಿ ಮಾಡಲಾಗಿದೆ.
ರೈತರಿಗೆ ನೀಡಿರುವ ಸಲಹೆಗಳು: ಬಾಧೆಗೊಳಗಾದ ಸೋಯಾ ಅವರೆ ಸಸಿಗಳ ಭಾಗಗಳನ್ನು ಮತ್ತು ಒಣಗಿದ ಸಸಿಗಳನ್ನು ಕಿತ್ತು ನಾಶಪಡಿಸಬೇಕು. ಬಿತ್ತನೇಯ ಕಾಲಕ್ಕೆ ಪ್ರತಿ ಕೆಜಿ ಬೀಜಕ್ಕೆ 10 ಮಿ.ಲಿ. ಥೈಯಾಮಿಥಾಕ್ಸಾಮ್ 30 ಎಫ್ ಎಸ್ ಅಥವಾ ಇಮಿಡಾಕ್ಲೊಪ್ರಿಡ್ 70 ಡಬ್ಲೂ ಎಸ್. ಔಷಧಿಯಿಂದ ಬೀಜೋಪಚಾರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಬಿತ್ತಿದ 15 ದಿನಗಳಲ್ಲಿ ಕೀಟದ ಬಾಧೆ ಕಾಣಿಸಿದಾಗ 0.25 ಮಿ. ಲಿ. ಸಂಯುಕ್ತ ಕೀಟನಾಶಕವಾದ (ಥೈಯಾಮಿಥಾಕ್ಸಾಮ್ 12.6% + ಲ್ಯಾಂಬ್ಡಾಸೈಯಾಲೋಥ್ರಿನ್ 9.5% ಝಡ್ ಸಿ) ಅಥವಾ 0.50 ಮಿ. ಲಿ ಇಮಿಡಾಕ್ಲೊಪ್ರಿಡ್ 17.8 ಎಸ್ ಎಲ್ ಅಥವಾ 0.3 ಗ್ರಾಂ. ಥೈಯಾಮಿಥಾಕ್ಸಾಮ್ 25 ಡಬ್ಲೂ ಜಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.
ಸೋಯಾ ಅವರೆ ಬೆಳೆಯಲ್ಲಿ ಎಲೆ ತಿನ್ನುವ ಹುಳುಗಳ ಕೀಟ ಬಾಧೆ ಕಂಡುಬಂದಲ್ಲಿ 1 ಮಿ. ಲಿ. ಪ್ರತಿ ಲೀ. ನೀರಿಗೆ, ಮೊನೊಕ್ರೊಟೊಫಾಸ್ ಅಥವಾ 2 ಮಿ. ಲಿ. ಪ್ರತಿ ಲೀ. ನೀರಿಗೆ, ಕ್ವಿನಾಲ್ಫಾಸ್ ಬೆರೆಸಿ ಸಿಂಪರಣೆ ಮಾಡಬೇಕು.
ರಸಹೀರುವ ಕೀಟ ಬಾಧೆ ಕಂಡು ಬಂದಲ್ಲಿ ಇಮಿಡಾಕ್ಲೋಪ್ರಿಡ್ ಶೇ. 17.8 ಎಸ್. ಎಲ್. ಪ್ರತಿ ಲೀ. ನೀರಿಗೆ 1 ಮಿ. ಲೀ. ಅಥವಾ ಥೈಯೋಮಿಥಾಕ್ಸಾಮ್ ಶೇ. 25 ಡಬ್ಲ್ಯು.ಜಿ. ಪ್ರತಿ ಲೀ. ನೀರಿಗೆ 0.5 ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಈಗಾಗಲೇ ಆರಂಭವಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಕಾಲಿಕ ಮಳೆ ಮತ್ತು ಅತಿವೃಷ್ಟಿಯಿಂದ ತೇವಾಂಶ ಹೆಚ್ಚಾದ ಅಥವಾ ನೀರು ನಿಂತ ಹೊಲದಲ್ಲಿ ಬೆಳೆಗಳ ನಿರ್ವಹಣೆ ಹೇಗೆ ಮಾಡಬೇಕು? ಎಂದು ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಿದೆ.
ಸದ್ಯ ಜಿಲ್ಲೆಯಲ್ಲಿ ಮೆಕ್ಕೆಜೋಳ, ಸೋಯಾ ಅವರೆ, ಹೆಸರು, ಶೇಂಗಾ, ಭತ್ತ ಮತ್ತು ಹತ್ತಿ ಬೆಳೆಗಳ ಬಿತ್ತನೆ ಕಾರ್ಯ ನಡೆಯುತ್ತಿದೆ. ಬಿತ್ತನೆ ಕೈಗೊಂಡ ಹೊಲಗಳಲ್ಲಿ ಮುಂಜಾಗೃತ ಕ್ರಮವಾಗಿ ಇಳಿಜಾರಿಗೆ ಅಡ್ಡವಾಗಿ ಬೇಸಾಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ತಕ್ಷಣದ ಕ್ರಮವಾಗಿ ಹೆಚ್ಚಿನ ನೀರು ಬಸಿದು ಹೋಗಲು ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎಂದು ಇಲಾಖೆ ತಿಳಿಸಿದೆ.












Click it and Unblock the Notifications