ರೈತರನ್ನು ಸೆಳೆಯುತ್ತಿರುವ ಶಿವಮೊಗ್ಗದ ಕೃಷಿ, ತೋಟಗಾರಿಕಾ ಮೇಳ
ಕೃಷಿ ಮತ್ತು ತೋಟಗಾರಿಕಾ ಮೇಳ ಮಾರ್ಚ್ 17ರಂದು ಮೇಳಕ್ಕೆ ಚಾಲನೆ ಸಿಕ್ಕಿದೆ, ಮಾರ್ಚ್ 20ರ ತನಕ ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಈ ಮೇಳ ನಡೆಯಲಿದೆ.
ಶಿವಮೊಗ್ಗ, ಮಾರ್ಚ್ 19; ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ ಆಯೋಜನೆ ಮಾಡಿರುವ ಕೃಷಿ ಮತ್ತು ತೋಟಗಾರಿಕೆ ಮೇಳ-2023 ಜನರನ್ನು ಸೆಳೆಯುತ್ತಿದೆ. ಮಾರ್ಚ್ 17ರಂದು ಮೇಳಕ್ಕೆ ಚಾಲನೆ ಸಿಕ್ಕಿದೆ, ಮಾರ್ಚ್ 20ರ ತನಕ ನವುಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಈ ಮೇಳ ನಡೆಯಲಿದೆ.
ಕೃಷಿ ಮತ್ತು ತೋಟಗಾರಿಕೆ ಮೇಳ ಉದ್ಘಾಟಿಸಿ ಮಾತನಾಡಿದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸಿ. ವಾಸುದೇವಪ್ಪ, "ರೈತರು ಸಮಗ್ರ ಕೃಷಿ ಅಳವಡಿಕೆಯೊಂದಿಗೆ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು" ಎಂದು ಕರೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಬಿ. ಹೇಮ್ಲಾನಾಯಕ್, ಕೃಷಿ ವಿಶ್ವವಿದ್ಯಾಲಯದ ಡಾ. ಹೆಚ್. ಎಲ್. ಹರೀಶ್, ಪ್ರಗತಿಪರ ರೈತರಾದ ಬಿ. ಶಿವರಾಮ್, ಕೆ. ನಾಗರಾಜ್, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸಿ. ವಾಸುದೇವಪ್ಪ ಮಾತನಾಡಿ, "ಹೊಸ ಆವಿಷ್ಕಾರಗಳು, ವೈಜ್ಞಾನಿಕತೆ, ವಿವಿಧ ತಳಿಗಳು, ಕೀಟ, ರೋಗ ನಿಯಂತ್ರಣ, ಮಣ್ಣು ನಿರ್ವಹಣೆ, ಸಾವಯವ ಕೃಷಿ ಜೊತೆಗೆ ಸಮಗ್ರ ಕೃಷಿ ಪರಿಚಯವನ್ನು ಈ ಕೃಷಿ ಮೇಳ ಮಾಡಿಕೊಡುತ್ತಿದೆ. ಮೊದಲು ಶಿವಮೊಗ್ಗದಲ್ಲಿ ಎಲ್ಲಿ ನೋಡಿದರಲ್ಲಿ ಭತ್ತದ ಹಸಿರು ಕಾಣುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಲಾಭದ ಉದ್ದೇಶದಿಂದ ಅಡಿಕೆ ಮತ್ತು ಪ್ಲಾಂಟೇಷನ್ ಕಡೆ ರೈತರು ವಾಲುತ್ತಿದ್ದು, ಆಹಾರ ಧಾನ್ಯ ನಿರ್ಲಕ್ಷಿಸಲಾಗುತ್ತಿದೆ. ಅಡಿಕೆಗೆ ಮೌಲ್ಯವರ್ಧನೆ ಮಾಡಲು ಅನೇಕ ಅವಕಾಶ ಇರುವುದರಿಂದ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ" ಎಂದು ಹೇಳಿದರು.
"ಈಗ ತೋಟಗಾರಿಕಾ ಬೆಳೆಗಳು ಮುಂಚೂಣಿಯಲ್ಲಿದ್ದು 333 ಬಿಲಿಯನ್ ಟನ್‍ಗಳಷ್ಟು ತೋಟಗಾರಿಕೆ ಉತ್ಪನ್ನವಾಗುತ್ತಿದೆ. ಪ್ರತಿ ಮನೆಗಳಲ್ಲಿ ಹಣ್ಣು ಹಂಪಲುಗಳನ್ನು ಇದರಿಂದಾಗಿ ಕಾಣಬಹುದಾಗಿದೆ. ರೈತರ ಉತ್ಪಾದನೆಗೆ ತಕ್ಕ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಜೊತೆಗೆ ಸಮಗ್ರ ಕೃಷಿ ಬಗ್ಗೆ ಗಮನ ಹರಿಸಬೇಕು. ಯಾವುದೇ ಉತ್ಪನ್ನವನ್ನು ಮೌಲ್ಯವರ್ಧಿಸುವ ಕುರಿತು ಗಮನ ಹರಿಸಬೇಕು. ಮೌಲ್ಯ ಕೊಂಡಿ ವ್ಯವಸ್ಥೆಯನ್ನು ಅಳವಡಿಕೊಳ್ಳವುದರೊಂದಿಗೆ ಶೇಖರಣೆಗೆ ಹೆಚ್ಚಿನ ಒತ್ತು ನೀಡಿ, ವ್ಯಾವಹಾರಿಕ ಜ್ಞಾನ ಇಟ್ಟುಕೊಂಡು ಬೆಳೆಗಳನ್ನು ಬೆಳೆಯಬೇಕು" ಎಂದು ರೈತರಿಗೆ ಸಲಹೆ ನೀಡಿದರು.

"ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಹಲವಾರು ಪ್ರಯತ್ನಗಳು ಆಗುತ್ತಿವೆ. ಎನ್‍ಇಪಿ ಯಿಂದ ತಾಂತ್ರಿಕ ವಿದ್ಯಾರ್ಥಿಗಳಿಗೆ ಆಗುವ ಅನಕೂಲಗಳ ಬಗ್ಗೆ ಚಿಂತನೆ ನಡೆಸಬೇಕು. ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು. ಕೃಷಿ ವಿಶ್ವವಿದ್ಯಾಲಯವು 50 ಟನ್ ಜೈವಿಕ ಗೊಬ್ಬರ ಮತ್ತು ಕೀಟನಾಶಕವನ್ನು ರೈತರಿಗೆ ನೀಡುತ್ತಿದೆ. 1.5 ಲಕ್ಷ ಸಸಿಗಳು ಮಾರಾಟಕ್ಕೆ ಇಲ್ಲಿ ಲಭ್ಯವಿದೆ. 14 ಸಾವಿರ ಟನ್ ಬೀಜಗಳು ವಿವಿಧ ಕೇಂದ್ರಗಳಲ್ಲಿ ಮಾರಾಟಕ್ಕೆ ಸಿದ್ದವಿದೆ. ರಾಗಿ, ಭತ್ತ, ಶೇಂಗಾ ಮತ್ತು ಸಿರಿಧಾನ್ಯಗಳ ತಳಿಗಳು ಲಭ್ಯವಿದೆ. ಪ್ರತಿವರ್ಷ ವಿಶ್ವವಿದ್ಯಾಲಯವು 4 ಲಕ್ಷ ರೈತರಿಗೆ ವಿವಿಧ ರೀತಿಯಲ್ಲಿ ತಲುಪುತ್ತಿದೆ. ಕೃಷಿ, ಬೀಜ, ತಾಂತ್ರಿಕತೆ, ಹೊಸ ವಿಚಾರಗಳು ಇಲ್ಲಿ ಲಭ್ಯವಿದ್ದು ರೈತರು ಈ ಮೇಳದ ಸದುಪಯೋಗ ಪಡೆಯಬೇಕು" ಎಂದು ಹೇಳಿದರು.
ಸಾವಯವ ಕೃಷಿಗೆ ಆದ್ಯತೆ ನೀಡಿ; ರೈತ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಕಾಶ್ ಮಂಚಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು. "ತಾಂತ್ರಿಕತೆ ಉತ್ತುಂಗಕ್ಕೇರುತ್ತಿದೆ. ಸಂಪನ್ಮೂಲ ಹೆಚ್ಚಿದೆ, ಆದರೂ ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ಇಲ್ಲದೆ ಕೃಷಿ ಉತ್ಪನ್ನಗಳ ಮಾರಾಟ ಕಡಿಮೆಯಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೃಷಿ ಮೇಳ ಮತ್ತು ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡಿ ಅವರ ಅಂತಃಶಕ್ತಿ ವೃದ್ದಿಸುವ ಕೆಲಸ ಆಗಬೇಕು. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಮಣ್ಣಿನ ಮಹತ್ವ ಹಾಗೂ ಮಣ್ಣಿನಲ್ಲಿನ ಸೂಕ್ಷ್ಮ ಜೀವಿಯ ಬಗ್ಗೆ ರೈತರಿಗೆ ಜ್ಞಾನ ನೀಡಬೇಕು. ಶೇ.83 ರಷ್ಟು ಅತಿ ಸಣ್ಣ ರೈತರಿದ್ದು, ಸ್ವಲ್ಪ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುವ, ಸಾವಯ ಕೃಷಿ ಬಗ್ಗೆ ಹೆಚ್ಚಿನ ಗಮನ ನೀಡುವಂತಾಗಬೇಕೆಂದರು" ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್. ಸಿ. ಜಗದೀಶ್ ಮಾತನಾಡಿ, "ಪ್ರಸಕ್ತ ಸಾಲನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿದ್ದು, ಅತ್ಯಂತ ಮಹತ್ವದ ವರ್ಷವಾಗಿದೆ. ನೈಸರ್ಗಿಕ, ಸಾವಯವ ಕೃಷಿ, ಕೃಷಿ ತಾಂತ್ರಿಕತೆ, ಗೊಬ್ಬರ, ಸಸಿ ಸೇರಿದಂತೆ ಒಂದೇ ಸೂರಿನಡಿ ರೈತರಿಗೆ ಅಗತ್ಯವಾದ ಎಲ್ಲ ರೀತಿಯ ಸಲಹೆ ಮತ್ತು ಪರಿಹಾರ ಒದಗಿಸುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದೆ. 6 ಕೃಷಿ ಸಂಬಂಧಿತ ಇಲಾಖೆಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದು, ರೈತರು, ಉದ್ದಿಮೆದಾರರು, ತಜ್ಞರು, ವಿದ್ಯಾರ್ಥಿಗಳು ಇಲ್ಲಿ ಲಭ್ಯವಿದ್ದು ಎಲ್ಲರೂ ಈ ಮೇಳದ ಪ್ರಯೋಜನ ಪಡೆಯಬೇಕು" ಎಂದು ಕರೆ ನೀಡಿದರು.












Click it and Unblock the Notifications