Krishi Mela Dharwad 2024: ಕೃಷಿ ಸಂಶೋಧನೆಗಳು ರೈತರಿಗೆ ಅನುಕೂಲವಾಗಬೇಕು
ಧಾರವಾಡ, ಸೆಪ್ಟೆಂಬರ್ 23: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 2024ನೇ ಸಾಲಿನ ಕೃಷಿ ಮೇಳಕ್ಕೆ ಚಾಲನೆ ಸಿಕ್ಕಿದೆ. ಸಾವಿರಾರು ರೈತರು ಮೇಳಕ್ಕೆ ಆಗಮಿಸುತ್ತಿದ್ದು, ಕೃಷಿ ಕ್ಷೇತ್ರದ ಹೊಸ ಹೊಸ ಸಂಶೋಧನೆ, ಹೊಸ ಯಂತ್ರೋಪಕರಣಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕೃಷಿ ಮೇಳಕ್ಕೆ ಚಾಲನೆ ನೀಡಿ, ಉತ್ತಮ ಕೃಷಿಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, "ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳು ವೇಗವಾಗಿ ಬಳಕೆಯಾಗುತ್ತಿದ್ದರೂ ನಮ್ಮ ದೇಶ ಹಾಗೂ ರಾಜ್ಯದ ಕೃಷಿ ಇಳುವರಿ ಇತರೇ ದೇಶಗಳಿಗೆ ಹೋಲಿಸಿದರೆ ನಿಗದಿತ ಪ್ರಮಾಣದಲ್ಲಿ ಏರಿಕೆಯಾಗದೆ ಇರುವ ಬಗ್ಗೆ ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.

"ಕೃಷಿ, ವಿಶ್ವವಿದ್ಯಾಲಯದ ಸಂಶೋಧನೆಗಳು ರೈತರಿಗೆ ಅನುಕೂಲ ವಾಗುವಂತೆ, ಕೃಷಿ ವಿಜ್ಞಾನಿಗಳು ರೈತರ ಕ್ಷೇತ್ರಕ್ಕೆ ತೆರಳಿ ರೈತರ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕು. ಧಾರವಾಡ ಜಿಲ್ಲೆಯಲ್ಲಿ ಕೃಷಿ ಸಮಸ್ಯೆಗಳ ಹಾಗೂ ಪರಿಹಾರಗಳ ಬಗ್ಗೆ ಜಿಲ್ಲಾಡಳಿತದ ಜೊತೆ ಆಗಾಗ ಚರ್ಚಿಸಬೇಕು. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಜೊತೆಗೂಡಿ ಸಹಕಾರದಿಂದ ಕೆಲಸ ಮಾಡಬೇಕು" ಎಂದು ಸಚಿವರು ಕರೆ ನೀಡಿದರು.
ಅಧ್ಯಯನ ನಡೆಸಿ, ವರದಿ ನೀಡಬೇಕು: ಸಚಿವ ಸಂತೋಷ್ ಲಾಡ್, "ದೇಶದಲ್ಲಿ 150 ಮಿಲಿಯನ್ ಹೆಕ್ಟೇರ್ ಕೃಷಿ ಮಾಡಲಾಗುತ್ತಿದೆ. ಈ ಪೈಕಿ 40 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ಭತ್ತ, 30 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ಗೋಧಿ, 20 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ತೋಟಗಾರಿಗೆ 12 ಸಾವಿರ ಮಿಲಿಯನ್ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ಉತ್ಪಾದನೆ ಇಳುವರಿ ಕಡಿಮೆಯಿದೆ" ಎಂದರು.
"ಚೀನಾದಲ್ಲಿ ಕೃಷಿ ಭೂಮಿ ಕಡಿಮೆಯಿದ್ದರೂ ನಮಗಿಂತ 3 ಪಟ್ಟು ಹೆಚ್ಚು ಇಳುವರಿ ಇದೆ. ಆಧುನಿಕ ತಂತ್ರಜ್ಞಾನ ಮಶಿನರಿಗಳನ್ನು ಬಳಸಿದರೂ ಸಹ ನಮ್ಮಲ್ಲಿ ಇಳುವರಿ ಕಡಿಮೆ ಯಾಕೆ? ಎಂಬುದನ್ನು ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆ ಕೈಗೊಳ್ಳಬೇಕು. ಅವೈಜ್ಞಾನಿಕ ಬೆಳೆವಿಮೆ ಪದ್ದತಿ, ರೈತರ ಆತ್ಮಹತ್ಯೆ ಸಮಸ್ಯೆಗಳ ಬಗ್ಗೆಯೂ ಕೃಷಿ ವಿವಿ ಅಧ್ಯಾಯನ ಮಾಡಿ ವರದಿ ನೀಡಬೇಕು" ಎಂದು ಸಚಿವರು ತಿಳಿಸಿದರು.
"ಕೃಷಿ ವಿವಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಧಾರವಾಡ ಜಿಲ್ಲೆಯ ಒಂದು ಕ್ಷೇತ್ರ, ಹೋಬಳಿಯನ್ನು ಮಾದರಿಯಾಗಿಸಿ ಅಧ್ಯಯನ ಹಾಗೂ ಪ್ರಯೋಗ ಕೈಗೊಳ್ಳಬೇಕು. ಇಂಟಿಗ್ರೇಟೆಡ್ ಕೃಷಿ ಹಾಗೂ ಕ್ಷೇತ್ರ ಭೇಟಿಗೆ ಒತ್ತು ನೀಡಬೇಕು. ಕೃಷಿ ಮೇಳದ ಪರಿಣಾಮದ ಅಧ್ಯಯನ ಸಹ ಕೈಗೊಳ್ಳಬೇಕು" ಎಂದು ಸಚಿವರು ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, "ಯುವಕರು ಕೃಷಿಯಿಂದ ದೂರವಾಗುತ್ತಿದ್ದು, ಕೃಷಿ ಕಾರ್ಮಿಕರು ದೊರೆಯುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಆಧುನಿಕತೆಯ ತಂತ್ರಜ್ಞಾನ, ಜೀವನಶೈಲಿ, ಪಾರಂಪರಿಕ ಕೃಷಿ ಅವಮಾನ, ಮಾರಾಟ ಸೇರಿದಂತೆ ಅನೇಕ ಜಟಿಲ ಸಮಸ್ಯೆಗಳಿವೆ. ರೈತರ ಮಕ್ಕಳು ಕೃಷಿ ವಿಜ್ಞಾನ ಓದಿದರೂ ಕೃಷಿಕರಾಗುತ್ತಿಲ್ಲ. ಕೃಷಿ ವಿವಿ ಸಂಶೋಧನೆಗಳು ರೈತರಿಗೆ ಉಪಯೋಗವಾಗಬೇಕು" ಎಂದರು.
ಶಾಸಕ ಎನ್. ಹೆಚ್. ಕೋನರೆಡ್ಡಿ ಮಾತನಾಡಿ, "ನಿಸರ್ಗ ಬದಲಾಗುತ್ತಿದೆ ಹವಾಮಾನ ಬದಲಾವಣೆ ಮಳೆ, ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಪಶುಸಂಗೋಪನೆ ಕಡಿಮೆಯಾಗುತ್ತಿದೆ. ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ ದೊರೆಯುತ್ತಿಲ್ಲ. ರೈತರಿಗೆ ಕೃಷಿ ವಿವಿ ಪವಿತ್ರಸ್ಥಾನವಾಗಿದೆ. ಇಲ್ಲಿ ನಡೆಯುವ ಸಂಶೋಧನೆಗಳು ರೈತರಿಗೆ ಮಾರ್ಗದರ್ಶನವಾಗಬೇಕು. ವಿಜ್ಞಾನಿಗಳು ರೈತರ ಹತ್ತಿರ ಹೋಗಬೇಕು. ಬೆಳಗೆ ಹಾಗೂ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಹವಾಮಾನ ವೈಪರಿತ್ಯ ನಿರ್ವಹಣೆ, ಕೃಷಿ ವಿಜ್ಞಾನಗಳು ರೈತರಿಗೆ ಕಾಲಕಾಲಕ್ಕೆ ಸರಿಯಾದ ಮಾರ್ಗದರ್ಶನ ಮಾಡುವುದು, ಹೊಸ ಹೊಸ ತಳಿಗಳು, ನೂತನ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತರಿಗೆ ಉಪಯೋಗವಾಗಬೇಕು ಎಂದು ಸಲಹೆ ನೀಡಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 2024ನೇ ಸಾಲಿನ ಕೃಷಿ ಮೇಳ ಸೆಪ್ಟೆಂಬರ್ 24ರ ತನಕ ನಡೆಯಲಿದೆ. ಕೃಷಿ ಮೇಳದಲ್ಲಿ ರೈತರು, ಗ್ರಾಮೀಣ ಭಾಗದ ಯುವಕರು, ವಿಸ್ತರಣಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.











Click it and Unblock the Notifications