ಭಾರತಕ್ಕೆ ಅಡಿಕೆ, ಕಾಳುಮೆಣಸು ಆಮದು ನಿರ್ಧಾರಕ್ಕೆ ಎಎಪಿ ವಿರೋಧ
ಬೆಂಗಳೂರು, ಅಕ್ಟೋಬರ್ 11: ಕೇಂದ್ರ ಸರ್ಕಾರ ಕಳಪೆ ಗುಣಮಟ್ಟದ ಅಡಿಕೆ ಮತ್ತು ಕಾಳುಮೆಣಸು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಇದರಿಂದ ಕರ್ನಾಟಕದ ಅಡಿಕೆ ಮತ್ತು ಮೆಣಸು ಬೆಳಗಾರರಿಗೆ ಸಂಕಷ್ಟ ಎದುರಾಗಲಿದೆ ಎಂದು ಆಮ್ ಆದ್ಮಿ ಪಕ್ಷ ಆಪಾದಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷ (ಎಎಪಿ)ದ ಮುಖಂಡ ಬ್ರಿಜೇಶ್ ಕಾಳಪ್ಪ ಅವರು, ಕಡಿಮೆ ಗುಣಮಟ್ಟದ ಅಡಿಕೆ ಹಾಗೂ ಕಾಳುಮೆಣಸನ್ನು ವಿದೇಶಗಳಿಂದ ಆಮದು ಮಾಡಿಕೊಂಡು ನಮ್ಮ ಅಡಿಕೆ ಬೆಳೆಗಾರರ ಭವಿಷ್ಯದ ಜೊತೆ ಚೆಲ್ಲಾಟ ವಾಡುವುದು ತಪ್ಪು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಮ್ಮ ಆಕ್ಷೇಪಣೆ ಇದೆ ಎಂದರು.
ಕರ್ನಾಟಕವು ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಅಡಿಕೆ ಹಾಗೂ ಕಾಳುಮೆಣಸು ಬೆಳೆಯುತ್ತಿದೆ. ಆದರೆ ಕೇಂದ್ರ ಸರ್ಕಾರವು ಭೂತಾನ್‌ನಿಂದ ಅಡಿಕೆಯನ್ನು ಹಾಗೂ ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಕಾಳುಮೆಣಸು ಅನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲು ನಿರ್ಧರಿಸಿದೆ.
ಆದರೆ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳಲು ನಿರ್ಧರಿಸಿರುವ ಅಡಿಕೆ, ಮೆಣಸು ಕಡಿಮೆ ಗುಣಮಟ್ಟದ್ದಾಗಿವೆ. ಇಲ್ಲಿನ ಉತ್ತಮ ಗುಣಮಟ್ಟದ ಬೆಳೆಗಳೊಂದಿಗೆ ಮಿಶ್ರವಾಗುವುದರಿಂದ ಸ್ವದೇಶಿ ಅಡಿಕೆ ಹಾಗೂ ಕಾಳುಮೆಣಸಿನ ಬಗ್ಗೆ ಗ್ರಾಹಕರಲ್ಲಿ ತಪ್ಪು ಕಲ್ಪನೆ ಮೂಡಲಿದೆ ಎಂದು ಅವರು ವಿವರಿಸಿದರು.

ರಾಜ್ಯದ ಉತ್ಪನ್ನಕ್ಕೆ ಬೇಡಿಕೆ ಕುಸಿತ ಸಾಧ್ಯತೆ
ಕೇಂದ್ರ ಸರ್ಕಾರದ ಆಮದಿನ ನಿರ್ಧಾರದಿಂದ ರಾಜ್ಯದ ರೈತರು ಬೆಳೆದ ಅಡಿಕೆ ಹಾಗೂ ಕಾಳುಮೆಣಸಿಗೆ ಬೇಡಿಕೆ ಕಡಿಮೆಯಾಗಲಿದೆ. ರೈತರಿಗೆ ಸಿಗುವ ಬೆಲೆಯ ಮೇಲೆ ಇದು ಕೆಟ್ಟ ಪರಿಣಾಮ ಬೀರಲಿದೆ. ಭಾರತಕ್ಕೆ ಅಗತ್ಯವಿರುವಷ್ಟು ಅಡಿಕೆ ಹಾಗೂ ಕಾಳುಮೆಣಸನ್ನು ನಮ್ಮ ರೈತರೇ ಉತ್ಪಾದಿಸುವಾಗ ಆಮದು ಮಾಡಿಕೊಳ್ಳುವ ಅಗತ್ಯವೇನಿದೆ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.

ಆಮದು ಸುಂಕ ವಿಧಿಸಿ:ಎಎಪಿ
ಒಂದು ವೇಳೆ ಅಡಿಕೆ ಹಾಗೂ ಕಾಳುಮೆಣಸನ್ನು ಸರ್ಕಾರ ಆಮದು ಮಾಡಿಕೊಳ್ಳುವುದಾದರೆ, ಭಾರೀ ಮೊತ್ತದ ಆಮದು ಸುಂಕವನ್ನು ಸರ್ಕಾರ ಇವುಗಳಿಗೆ ವಿಧಿಸಬೇಕು. ಭಾರತೀಯ ರೈತರನ್ನು ರಕ್ಷಿಸಲು ಪರಿಣಾಮಕಾರಿಯಾದ ಆಮದು ಸುಂಕ ನೀತಿ ಇಲ್ಲದಿರುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾದ ಆಮದುದಾರರಿಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಆಮದು ವೇಳೆ ಕಾನೂನು ಉಲ್ಲಂಘಟನೆ
ಈಗಾಗಲೇ ಅಡಿಕೆ ಹಾಗೂ ಕಾಳುಮೆಣಸು ಆಮದಿಗೆ ಸಂಬಂಧಿಸಿ ಪ್ರಭಾವಿಗಳಿಂದ ಸಫೆಮಾ, ಫೆರಾ ಮುಂತಾದ ಕಾನೂನುಗಳ ಉಲ್ಲಂಘನೆಯಾಗಿರುವುದು ಕಂಡು ಬರುತ್ತಿದೆ. ಸರ್ಕಾರದ ಈ ರೈತ ವಿರೋಧಿ ನೀತಿಯ ಹಿಂದೆ ಭಾರೀ ಪ್ರಮಾಣದ ಹಣದ ವ್ಯವಹಾರ ನಡೆದಿದೆ. ಶೇ. 40 ಕಮಿಷನ್‌ಗಾಗಿ ರೈತರ ಹಿತದೊಂದಿಗೆ ಕೇಂದ್ರ ಸರ್ಕಾರ ರಾಜಿ ಮಾಡಿಕೊಂಡಿದೆ. ಈ ಕುರಿತು ಸಂಬಂಧಪಟ್ಟ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಬೇಕು ಎಂಬುದು ಆಮ್ ಆದ್ಮಿ ಪಾರ್ಟಿಯ ಆಗ್ರಹವಾಗಿದೆ ಎಂದು ಹೇಳಿದರು.

ಅಡಿಕೆ ಬೆಳೆ ನಾಶದ ವೇಳೆ ನಿರ್ಧಾರ ಸರಿಯಲ್ಲ
ಎಎಪಿಯ ಬೆಂಗಳೂರು ನಗರ ಮಾಧ್ಯಮ ವಕ್ತಾರ ಉಷಾ ಮೋಹನ್ ಮಾತನಾಡಿ, ಹಲವು ದಶಕಗಳಿಂದ ಬಾಧಿಸುತ್ತಿರುವ ಹಳದಿರೋಗ ಹಾಗೂ ಕೊಳೆ ರೋಗದಿಂದ ಅಡಿಕೆ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಆರಂಭವಾದ ಎಲೆಚುಕ್ಕಿ ರೋಗವು ತೀವ್ರ ಸ್ವರೂಪ ಪಡೆಯುತ್ತಿದ್ದು, ಇದರಿಂದ ಭಾರೀ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತಿದೆ.
ಇಂತಹ ಬೆಳೆ ನಾಶದ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಾದ ಸರ್ಕಾರವು ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದು ಅಮಾನವೀಯ ನಡೆ. ಈ ಪಕ್ಷದ ಈ ನಿಲುವು ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರದ ವಾಣಿಜ್ಯ ಖಾತೆ ಸಚಿವರಿಗೆ ಪತ್ರ ಬರೆಯಲಾಗಿದೆ. ಸಂಸತ್ತಿನಲ್ಲೂ ಆಮ್ ಆದ್ಮಿ ಪಕ್ಷದಿಂದ ಈ ಬಗ್ಗೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications