ಚೀನಾಗೆ ತೊಂದರೆ ಕೊಡಲು ಅಡಿಕೆ ಆಮದು: ಆರಗ ಜ್ಞಾನೇಂದ್ರ ಹೇಳಿಕೆಗೆ ಎಎಪಿ ಕಿಡಿ
ಬೆಂಗಳೂರು, ಅಕ್ಟೋಬರ್ 12: ಚೀನಾಗೆ ತೊಂದರೆ ನೀಡಲು ಭೂತಾನ್‌ನಿಂದ 17 ಸಾವಿರ ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದ ಕರ್ನಾಟಕ ರಾಜ್ಯ ಅಡಿಕೆ ಟಾಸ್ಕಪೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಬುಧವಾರ ಆಮ್ ಆದ್ಮಿ ಪಕ್ಷದ ಮುಖಂಡ ಬ್ರಿಜೇಶ್ ಕಾಳಪ್ಪ ಮಾತನಾಡಿ, ಆರಗ ಜ್ಞಾನೇಂದ್ರ ಅವರ ಹೇಳಿಕೆ ಮೂರ್ಖತನದಿಂದ ಕೂಡಿದೆ. 40 ಪರ್ಸೆಂಟ್ ಕಮಿಷನ್‌ಗಾಗಿ ಅಡಿಕೆ ಬೆಳೆಗಾರರ ಹಿತವನ್ನು ಆಮದು ನಿರ್ಧಾರದ ಮೂಲಕ ಬಲಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಅಡಿಕೆ ಟಾಸ್ಕ್‌ಫೋರ್ಸ್ ಅಧ್ಯಕ್ಷರಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರರವರು ಅಡಿಕೆ ಬೆಳಗಾರರ ಹಿತದ ಪರವಾಗಿ ಯೋಚಿಸಬೇಕು. ಆದರೆ ಅವರು ರೈತರ ಗಮನವನ್ನು ಚೀನಾ ವಿಷಯದತ್ತ ತೆಗೆದುಕೊಂಡು ಹೋಗುವ ಮೂಲಕ ರೈತರಿಗೆ ವಂಚಿಸುತ್ತಿದ್ದಾರೆ. ಅಡಿಕೆ ಬೆಳಗಾರರ ಹಿತವನ್ನು ಬಲಿಕೊಟ್ಟು ಚೀನಾಗೆ ತೊಂದರೆ ನೀಡಲು ಯತ್ನಿಸುವುದು ಎಷ್ಟು ಸರಿ? ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

ಕಾಳುಮೆಣಸು ರೈತರಿಗೆ ಕೇಜಿಗೆ 350ರೂ.ನಷ್ಟ
ಅಡಿಕೆ ಜತೆಗೆ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿರುವುದು ಸರಿಯಲ್ಲ. ಕಾಳುಮೆಣಸು ಬೆಳೆಗಾರರಿಗೆ ಕೆಜಿಗೆ 850 ರೂ. ಸಿಗುತ್ತಿತ್ತು. ವಿಯೆಟ್ನಾಂನಿಂದ ಆಮದು ಆರಂಭಿಸಿದ್ದರಿಂದ ಅದರ ಬೆಲೆ 500 ರೂ. ಕುಸಿದಿದೆ. ಇದರಿಂದ ರೈತರಿಗೆ ಪ್ರತಿ ಕೆಜಿಗೆ 350 ನಷ್ಟವಾಗುತ್ತಿದೆ. ದೇಶದಲ್ಲಿ 30 ಸಾವಿರ ಮೆಟ್ರಿಕ್ ಟನ್ ಕಾಳುಮೆಣಸು ಉತ್ಪಾದನೆಯಾಗುತ್ತಿದೆ. ರೈತರಿಗೆ ಒಟ್ಟು 1.26 ಲಕ್ಷ ಕೋಟಿ ರೂ. ನಷ್ಟವಾಗಿದೆ. ಇದರಿಂದ ಯಾರಿಗೆ ಲಾಭವಾಗುತ್ತಿದೆ ಎಂದು ನಾವು ಯೋಚಿಸಬೇಕು ಎಂದರು.
ಬಿಜೆಪಿಯ ನಾಯಕರು ಹಾಗೂ ಪ್ರಭಾವಿಗಳಿಗೆ ಕಮಿಷನ್ ರೂಪದಲ್ಲಿ ಈ ಹಣ ತಲುಪುತ್ತಿದೆ. ಇದೊಂದು ದೊಡ್ಡ ದಂಧೆಯಾಗಿದೆ. ಇದರ ತನಿಖೆ ಮಾಡಬೇಕಾದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಿಜೆಪಿಯ ಆದೇಶದಂತೆ ದೆಹಲಿಯ ಎಎಪಿ ನಾಯಕರ ವಿರುದ್ಧ ಸುಳ್ಳು ಆರೋಪ ಹೊರಿಸುವುದರಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭೂತಾನ್ ದೇಶದಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಆಮದುದಾರರ ಹೆಸರನ್ನು ಸರ್ಕಾರ ಬಹಿರಂಗ ಪಡಿಸಲಿ. ಎಷ್ಟು ಮೊತ್ತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ, ಇದರಿಂದ ಆಮದುದಾರರಿಗೆ ಎಷ್ಟು ಲಾಭವಾಗುತ್ತದೆ ಎಂಬ ಮಾಹಿತಿಯನ್ನು ನೀಡಲಿ. ಎಲ್ಲವೂ ಪಾರದರ್ಶಕವಾಗಿ ಜನರಿಗೆ ತಿಳಿಯಲಿ ಎಂದು ಬ್ರಿಜೇಶ್ ಕಾಳಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications