ಧಾರವಾಡ ಕೃಷಿ ವಿವಿ 36ನೇ ಘಟಿಕೋತ್ಸವ, ಅಕ್ಷತಾ ಚಿನ್ನದ ಹುಡುಗಿ
ಧಾರವಾಡ, ಜೂನ್ 13; ಧಾರವಾಡ ಕೃಷಿ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವ ಸೋಮವಾರ ನಡೆಯಿತು. 71 ಪಿಎಚ್‌ಡಿ, 269 ಸ್ನಾತಕೋತ್ತರ, 626 ಸ್ನಾತಕ ಪದವಿ ಒಳಗೊಂಡಂತೆ ಒಟ್ಟು 966 ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಕೃಷಿ ವಿಷಯದಲ್ಲಿ ಅಕ್ಷತಾ ಕೆ. ವಿ. ಹೆಚ್ಚು ಚಿನ್ನದ ಪದಕ ಪಡೆದು ಈ ವರ್ಷದ ಕೃವಿವಿ ಚಿನ್ನದ ಹುಡುಗಿ ಆದರು.
ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಹಾಗೂ ಕೃಷಿ ವಿಶ್ವವಿದ್ಯಾಲಯದ ಕಲಾಧಿಪತಿ ಥಾವರ್ ಚಂದ್ ಗೆಹ್ಲೋಟ್, ಕೃಷಿ ಸಚಿವ ಮತ್ತು ಕೃಷಿ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಎನ್. ಚಲುವರಾಯಸ್ವಾಮಿ ಪಾಲ್ಗೊಂಡಿದ್ದರು. ಭಾರತ ಸರ್ಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಹಾಗೂ ಭಾರತೀಯ ಕೃಷಿ ಅನುಸಂದಾನ ಪರಿಷತ್ತಿನ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಘಟಿಕೋತ್ಸವ ಭಾಷಣ ಮಾಡಿದರು.

ಡಾ. ಹಿಮಾಂಶು ಪಾಠಕ್ ಮಾತನಾಡಿ, "ಕೃಷಿ ಅಭಿವೃದ್ಧಿ ಆಗದೇ ಭಾರತ ಅಭಿವೃದ್ಧಿಯುತ ದೇಶವಾಗದು, ನೈಸರ್ಗಿಕ ಬದಲಾವಣೆಗಳಿಂದಾಗಿ ಭವಿಷ್ಯದಲ್ಲಿ ಕೃಷಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಪರಿಹರಿಸಿ, ಅಭಿವೃದ್ಧಿ ಸಾಧಿಸಲು ನೂತನ ಪದವೀಧರರು ಬದ್ಧತೆ ತೋರಬೇಕು. ಸಮಾಜದ ಸೇವೆ ಮತ್ತು ಪ್ರಚಲಿತದಲ್ಲಿನ ಪದ್ದತಿಗಳನ್ನು ಸುಧಾರಿಸಿ, ಕೃಷಿ ಲಾಭದಾಯಕವಾಗಿ ಮಾಡುವುದು ಕೃಷಿ ಶಿಕ್ಷಣದ ಉದ್ದೇಶವಾಗಿದೆ. ನೂತನ ತಂತ್ರಜ್ಞಾನ ಬಳಕೆ ಹೆಚ್ಚಬೇಕು ಮತ್ತು ಪ್ರಾಯೋಗಿಕ ಪಾಠದ ಶಿಕ್ಷಣ ಹೆಚ್ಚು ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿದರು.
ಅರ್ಥ ವ್ಯವಸ್ಥೆಗೆ ಮುಖ್ಯ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, "ಕೃಷಿ ಪದವೀಧರರು ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸಬೇಕು. ಕಲಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಭಾರತ ಕೃಷಿ ಪ್ರಧಾನ ರಾಷ್ಟ್ರ. ದೇಶದ ಅರ್ಥವ್ಯವಸ್ಥೆಗೆ ಕೃಷಿ ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ, ಕೃಷಿಕರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ" ಎಂದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, "ಧಾರವಾಡ ಕೃಷಿ ವಿಶ್ವವಿದ್ಯಾಲಯ ಶಿಕ್ಷಣ, ಸಂಶೋಧನೆ ಮತ್ತು ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಕೀರ್ತಿ, ಯಶಸ್ಸುಗಳಿಸಿದೆ. ಕೃಷಿ ಇಲಾಖೆ, ಕೃಷಿವಿವಿ ಮತ್ತು ಸಂಶೋಧಕರು ರೈತರೊಂದಿಗೆ ನಿಲ್ಲಬೇಕು. ಹೊಸ ತಳಿಗಳನ್ನು ಸಂಶೋಧಿಸಿ, ಕೃಷಿ ಲಾಭದಾಯವಾಗುವಂತೆ ಮಾಡಬೇಕು" ಎಂದು ಕರೆ ನೀಡಿದರು.
"ಪದವಿ ಪಡೆದು ವಿವಿಯಿಂದ ಹೊರ ಬರುತ್ತಿರುವ ಯುವ ಕೃಷಿಮಿತ್ರರು, ವಿಜ್ಞಾನಿಗಳು ತಾವು ಕಲಿಕೆಯಲ್ಲಿ ಪಡೆದ ಜ್ಞಾನವನ್ನು ರೈತರ ಜಮೀನುಗಳಲ್ಲಿ, ಕ್ಷೇತ್ರಮಟ್ಟದಲ್ಲಿ ಬಳಸಿ, ಬದಲಾವಣೆ ತರಬೇಕು. ಕೃಷಿ ಆಧುನೀಕರಣಗೊಳಿಸಲು ಮತ್ತು ಹೆಚ್ಚು ಲಾಭದಾಯಕಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿವೆ" ಎಂದರು.
ಗೌರವ ಡಾಕ್ಟರೇಟ್; ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದ ಪದ್ಮಶ್ರೀ ತುಳಸಿಗೌಡ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರದ ಸಂಸ್ಥಾಪಕ ಪದ್ಮಶ್ರೀ ಅಬ್ದುಲಖಾದರ ಇಮಾಮ್‍ಸಾಬ ನಡಕಟ್ಟಿನ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು.
36ನೇ ಘಟಿಕೋತ್ಸವದಲ್ಲಿ 404 ಕೃಷಿ, 66 ಕೃಷಿ ಮಾರುಕಟ್ಟೆ ಮತ್ತು ಸಹಕಾರ, 63 ಅರಣ್ಯ, 65 ಸಮುದಾಯ ವಿಜ್ಞಾನ, 28 ಬಿ.ಟೆಕ್ ಹೀಗೆ ಒಟ್ಟು 626 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ತೋಟಗಾರಿಕೆ ವಿಷಯದಲ್ಲಿ ರೇಣುಕಾ ಎ. ಶಹಪುರ, ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಷಯದಲ್ಲಿ ವೀಣಾ ರವಿ ನಾಯ್ಕ ಅವರು ಚಿನ್ನದ ಪದಕ ಪಡೆದರು.











Click it and Unblock the Notifications